ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 8,500 ರನ್ ಪೂರ್ಣಗೊಳಿಸಿದ ಮೊದಲ ಆಟಗಾರ, ಚೆನ್ನೈ ವಿರುದ್ಧ ಗರಿಷ್ಠ ರನ್ ಗಳಿಸಿದ ದಾಖಲೆ ಮತ್ತು 8 ಐಪಿಎಲ್ ಆವೃತ್ತಿಗಳಲ್ಲಿ 500+ ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ.

ಬೆಂಗಳೂರು: ರನ್‌ ಮೆಷಿನ್‌, ಕಿಂಗ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಮತ್ತೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕೊಹ್ಲಿ ದಾಖಲೆಗಳ ಸುರಿಮಳೆಯನ್ನೇ ಸುರಿಸಿದರು.

ಪಂದ್ಯದಲ್ಲಿ ಸ್ಫೋಟಕ ಆಟವಾಡಿದ ಕೊಹ್ಲಿ, 33 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 62 ರನ್‌ ಬಾರಿಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ 8,500 ರನ್‌ ಪೂರ್ಣಗೊಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಅವರು ಸದ್ಯ 263 ಪಂದ್ಯಗಳ 255 ಇನ್ನಿಂಗ್ಸ್‌ಗಳಲ್ಲಿ 8509 ರನ್‌ ಗಳಿಸಿದ್ದಾರೆ. 

ಗರಿಷ್ಠ ರನ್ ಪಟ್ಟಿಯಲ್ಲಿ ರೋಹಿತ್‌ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ. ಅವರು 267 ಪಂದ್ಯಗಳಲ್ಲಿ 6921 ರನ್‌ ಕಲೆಹಾಕಿದ್ದಾರೆ. ಶಿಖರ್‌ ಧವರ್‌ 222 ಪಂದ್ಯಗಳಲ್ಲಿ 6769 ರನ್‌, ಡೇವಿಡ್‌ ವಾರ್ನರ್‌ 184 ಪಂದ್ಯಗಳಲ್ಲಿ 6565 ರನ್‌ ಸಿಡಿಸಿದ್ದಾರೆ.

ಸಿಕ್ಸರ್‌ ದಾಖಲೆ
ಟಿ20 ಕ್ರಿಕೆಟ್‌ನಲ್ಲಿ ತಂಡವೊಂದರ ಪರ 300+ ಸಿಕ್ಸರ್‌ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅವರು ಆರ್‌ಸಿಬಿ ಪರ ಐಪಿಎಲ್‌, ಚಾಂಪಿಯನ್ಸ್‌ ಲೀಗ್‌ ಸೇರಿ ಒಟ್ಟು 278 ಪಂದ್ಯಗಳಲ್ಲಿ 304 ಸಿಕ್ಸರ್‌ ಸಿಡಿಸಿದ್ದಾರೆ. ತಂಡವೊಂದರ ಪರ ಗರಿಷ್ಠ ಸಿಕ್ಸರ್‌ ಪಟ್ಟಿಯಲ್ಲಿ ಕ್ರಿಸ್‌ ಗೇಲ್‌ 2ನೇ ಸ್ಥಾನದಲ್ಲಿದ್ದಾರೆ. ಅವರು ಆರ್‌ಸಿಬಿ ಪರ 263 ಸಿಕ್ಸರ್‌ ಬಾರಿಸಿದ್ದಾರೆ. ರೋಹಿತ್‌ ಶರ್ಮಾ ಮುಂಬೈ ಪರ 262, ಕೀರನ್‌ ಪೊಲ್ಲಾರ್ಡ್ ಮುಂಬೈ ಪರ 258, ಎಂ.ಎಸ್‌.ಧೋನಿ ಸಿಎಸ್‌ಕೆ ಪರ 257 ಸಿಕ್ಸರ್‌ ಬಾರಿಸಿದ್ದಾರೆ.

ಕ್ರೀಡಾಂಗಣವೊಂದರಲ್ಲಿ ಗರಿಷ್ಠ ಸಿಕ್ಸರ್ ದಾಖಲಿಸಿದ ಆಟಗಾರರ ಪಟ್ಟಿ

ಆಟಗಾರಸಿಕ್ಸರ್ಕ್ರೀಡಾಂಗಣ
ವಿರಾಟ್‌ ಕೊಹ್ಲಿ154ಚಿನ್ನಸ್ವಾಮಿ
ಕ್ರಿಸ್‌ ಗೇಲ್‌ 151ಚಿನ್ನಸ್ವಾಮಿ
ಕ್ರಿಸ್‌ ಗೇಲ್‌ 138ಮೀರ್‌ಪುರ
ಅಲೆಕ್ಸ್‌ ಹೇಲ್ಸ್‌135ಟ್ರೆಂಟ್‌ಬ್ರಿಡ್ಜ್‌
ರೋಹಿತ್‌ ಶರ್ಮಾ122ವಾಂಖೆಡೆ
ಎಬಿ ಡಿ ವಿಲಿಯರ್ಸ್‌120ಚಿನ್ನಸ್ವಾಮಿ

ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್‌ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಅವರು ಚೆನ್ನೈ ವಿರುದ್ಧ 10 ಬಾರಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಶಿಖರ್‌ ಧವನ್‌, ರೋಹಿತ್‌ ಶರ್ಮಾ ಹಾಗೂ ಡೇವಿಡ್‌ ವಾರ್ನರ್‌ರನ್ನು ಹಿಂದಿಕ್ಕಿದರು. ಈ ಮೂವರೂ ತಲಾ 9 ಬಾರಿ 50+ ರನ್‌ ಗಳಿಸಿದ್ದಾರೆ.

ತಂಡವೊಂದರ ವಿರುದ್ಧ ಗರಿಷ್ಠ ರನ್‌ ದಾಖಲೆ

ಐಪಿಎಲ್‌ನಲ್ಲಿ ತಂಡವೊಂದರ ವಿರುದ್ಧ ಗರಿಷ್ಠ ರನ್‌ ಕಲೆಹಾಕಿದ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅವರು ಚೆನ್ನೈ ವಿರುದ್ಧ 1146 ರನ್‌ ಗಳಿಸಿದ್ದಾರೆ. ಪಂಜಾಬ್‌ ವಿರುದ್ಧ ಡೇವಿಡ್‌ ವಾರ್ನರ್‌ 1134 ರನ್‌ ಬಾರಿಸಿದ್ದು, ಅವರನ್ನು ಕೊಹ್ಲಿ ಹಿಂದಿಕ್ಕಿದರು. ಇನ್ನು, ಡೆಲ್ಲಿ ವಿರುದ್ಧ ವಿರಾಟ್‌ ಕೊಹ್ಲಿ 1130, ಪಂಜಾಬ್‌ ವಿರುದ್ಧ ಕೊಹ್ಲಿ 1104, ಕೋಲ್ಕತಾ ವಿರುದ್ಧ ವಾರ್ನರ್‌ 1093, ಕೋಲ್ಕತಾ ವಿರುದ್ಧ ರೋಹಿತ್‌ 1083 ರನ್‌ ಗಳಿಸಿದ್ದಾರೆ.

8 ಆವೃತ್ತಿಗಳಲ್ಲಿ ತಲಾ 500 ರನ್‌: ವಾರ್ನರ್‌ ದಾಖಲೆ ಮುರಿದ ಕೊಹ್ಲಿ

ವಿರಾಟ್‌ ಕೊಹ್ಲಿ 18 ಐಪಿಎಲ್‌ ಆವೃತ್ತಿಗಳ ಪೈಕಿ 8ರಲ್ಲಿ ತಲಾ 500+ ರನ್‌ ಕಲೆಹಾಕಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅವರು 2011, 2013, 2015, 2016, 2018, 2023, 2024 ಹಾಗೂ 2025ರಲ್ಲಿ ಈ ಸಾಧನೆ ಮಾಡಿದ್ದಾರೆ. ಡೇವಿಡ್‌ ವಾರ್ನರ್‌ 7, ಕೆ.ಎಲ್‌.ರಾಹುಲ್‌ 6 ಆವೃತ್ತಿಗಳಲ್ಲಿ ತಲಾ 500+ ರನ್‌ ಗಳಿಸಿದ್ದಾರೆ.

04ನೇ ಬಾರಿ ಕೊಹ್ಲಿ ಸತತ 4 ಅರ್ಧಶತಕ ಬಾರಿಸಿದರು. ಆರ್‌ಸಿಬಿ ಪರ ಅವರು 2ನೇ ಬಾರಿ ಈ ಸಾಧನೆ ಮಾಡಿದ್ದಾರೆ. 2016ರಲ್ಲೂ ತಲಾ 4 ಫಿಫ್ಟಿ ಸಿಡಿಸಿದ್ದರು.

ಇದನ್ನೂ ಓದಿ: ಐಪಿಎಲ್‌ನಲ್ಲಿ 99 ರನ್‌ಗಳಿಗೆ ಔಟಾದ 5 ಬ್ಯಾಟ್ಸ್‌ಮನ್‌ಗಳು; ಕೊಹ್ಲಿ ನಂ-1

ಆರ್‌ಸಿಬಿ ಅಭಿಮಾನಿಗಳಿಂದ ಚೆನ್ನೈನ ಜೈಲು ಜೆರ್ಸಿ ಸೇಲ್!
ಆರ್‌ಸಿಬಿ ಹಾಗೂ ಚೆನ್ನೈ ಅಭಿಮಾನಿಗಳ ನಡುವಿನ ಕಿತ್ತಾಟ ಮತ್ತೊಂದು ಹಂತ ತಲುಪಿದೆ. ಇತ್ತೀಚೆಗೆ ಚೆನ್ನೈ ಕ್ರೀಡಾಂಗಣದಲ್ಲಿ ಲಾಲಿಪಾಪ್‌ ಪ್ರದರ್ಶಿಸಿ ಆರ್‌ಸಿಬಿ ಅಭಿಮಾನಿಗಳನ್ನು ಚೆನ್ನೈ ಅಭಿಮಾನಿಗಳು ಕೆಣಕಿದ್ದರು. ಇದಕ್ಕೆ ಪ್ರತಿಯಾಗಿ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಆರ್‌ಸಿಬಿ ಅಭಿಮಾನಿಗಳು ಚೆನ್ನೈ ತಂಡದ ‘ಜೈಲು ಜೆರ್ಸಿ’ಯನ್ನು ಮಾರಾಟ ಮಾಡಿದ್ದಾರೆ.

ಫಿಕ್ಸಿಂಗ್‌ ಪ್ರಕರಣದಲ್ಲಿ ಚೆನ್ನೈ ತಂಡ 2016, 2017ರ ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿತ್ತು. ಇದನ್ನೇ ನೆನಪಿಸುವ ರೀತಿಯಲ್ಲಿ ಕ್ರೀಡಾಂಗಣದ ಹೊರಗಡೆ ಕಪ್ಪು-ಬಿಳುಪಿನ, 2016-17 ಎಂದು ಬರೆದಿರುವ ಜೆರ್ಸಿ ಮಾರಾಟ ಮಾಡಿದ್ದಾರೆ. ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Breaking: ಚಿನ್ನಸ್ವಾಮಿಯಲ್ಲಿ ಲಾಸ್ಟ್‌ ಬಾಲ್‌ ಕ್ಲಾಸಿಕ್‌, 2 ರನ್‌ನಿಂದ ಧೋನಿ ಟೀಮ್‌ ಮಣಿಸಿದ ಆರ್‌ಸಿಬಿ!