ವಿರಾಟ್ ಕೊಹ್ಲಿಯವರ ಭರ್ಜರಿ ಶತಕ (135) ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 350 ರನ್‌ಗಳ ಗುರಿ ಬೆನ್ನತ್ತಿದ ಹರಿಣಗಳ ಪಡೆ 332 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.

ರಾಂಚಿ: ವಿರಾಟ್ ಕೊಹ್ಲಿ ಆಕರ್ಷಕ ಶತಕ, ಕುಲ್ದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ಮಿಂಚಿನ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 57 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ. ಗೆಲ್ಲಲು 350 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 332 ರನ್‌ಗಳಿಗೆ ಸರ್ವಪತನ ಕಂಡಿತು. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.

ಇಲ್ಲಿನ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ನೀಡಿದ್ದ 350 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಹರ್ಷಿತ್ ರಾಣಾ ತಾವೆಸೆದ ಮೊದಲ ಓವರ್‌ನಲ್ಲೇ ರಿಯನ್ ರಿಕೆಲ್ಟನ್ ಹಾಗೂ ಕ್ವಿಂಟನ್ ಡಿ ಕಾಕ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ನಾಯಕ ಏಯ್ಡನ್ ಮಾರ್ಕ್‌ರಮ್‌ಗೆ ಎಡಗೈ ವೇಗಿ ಅರ್ಶದೀಪ್ ಸಿಂಗ್ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ ದಕ್ಷಿಣ ಆಫ್ರಿಕಾ ತಂಡವು 11 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

ಆರಂಭಿಕ ಆಘಾತದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ಮ್ಯಾಥ್ಯೂ ಬ್ರೆಟ್ಜ್‌ಕೀ ಹಾಗೂ ಟೋನಿ ಡಿ ಜೋರ್ಜಿ 66 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಜೋರ್ಜಿ 39 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮ್ಯಾಥ್ಯೂ ಬ್ರೆಟ್ಜ್‌ಕೀ ಹಾಗೂ ಡೆವಾಲ್ಡ್ ಬ್ರೆವೀಸ್ 5ನೇ ವಿಕೆಟ್‌ಗೆ ಚುರುಕಿನ 53 ರನ್‌ಗಳ ಜತೆಯಾಟವಾಡಿದರು. ಬ್ರೆವೀಸ್ 37 ರನ್ ಗಳಿಸಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು.

Scroll to load tweet…

ಹರಿಣಗಳಿಗೆ ಗೆಲುವಿನ ಆಸೆ ಮೂಡಿಸಿದ ಮ್ಯಾಥ್ಯೂ ಬ್ರೆಟ್ಜ್‌ಕೀ-ಯಾನ್ಸೆನ್ ಜತೆಯಾಟ:

ಡೆವಾಲ್ಡ್ ಬ್ರೆವೀಸ್ ವಿಕೆಟ್ ಪತನವಾದಾಗ ದಕ್ಷಿಣ ಆಫ್ರಿಕಾ ತಂಡದ ಸ್ಕೋರ್ 5 ವಿಕೆಟ್ ನಷ್ಟಕ್ಕೆ 130 ರನ್. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡವು ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ ಜತೆಯಾದ ಮ್ಯಾಥ್ಯೂ ಬ್ರೆಟ್ಜ್‌ಕೀ ಹಾಗೂ ಮಾರ್ಕೊ ಯಾನ್ಸನ್ ಆರನೇ ವಿಕೆಟ್‌ಗೆ ಸ್ಪೋಟಕ 97 ರನ್‌ಗಳ ಜತೆಯಾಟವಾಡುವ ಮೂಲಕ ಹರಿಣಗಳ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. 97 ರನ್ ಗಳಿಸಲು ಈ ಜೋಡಿ ಕೇವಲ 69 ಎಸೆತಗಳನ್ನು ಬಳಸಿಕೊಂಡಿತು. ಆದರೆ ಈ ಇಬ್ಬರು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟಲು ಕುಲ್ದೀಪ್ ಯಾದವ್ ಯಶಸ್ವಿಯಾದರು. ಕೇವಲ 39 ಎಸೆತಗಳನ್ನು ಎದುರಿಸಿ 70 ರನ್ ಬಾರಿಸಿದ್ದ ಮಾರ್ಕೊ ಯಾನ್ಸೆನ್ ಅವರನ್ನು ಮೊದಲಿಗೆ ಬಲಿ ಪಡೆದ ಕುಲ್ದೀಪ್, ಇದಾದ ಬಳಿಕ ಅದೇ ಓವರ್‌ನಲ್ಲಿ 72 ರನ್ ಗಳಿಸಿದ್ದ ಮ್ಯಾಥ್ಯೂ ಬ್ರೆಟ್ಜ್‌ಕೀ ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು.

ಇನ್ನು ಕೊನೆಯಲ್ಲಿ ಕಾರ್ಬಿನ್ ಬಾಷ್ ಹಾಗೂ ಪ್ರೆನೆಲನ್ ಸುಬ್ರಾಯನ್ (17) ಜೋಡಿ ಹಾಗೂ ಬಾಷ್ ಹಾಗೂ ನಂದ್ರೆ ಬರ್ಗರ್ ಜೋಡಿ ತಲಾ 42 ರನ್‌ಗಳ ಜತೆಯಾಟವಾಡಿತು. ಕೊನೆಯಲ್ಲಿ ಕಾರ್ಬಿನ್ ಬಾಷ್ ಆಕರ್ಷಕ 67 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಭಾರತ ಪರ ಮಾರಕ ದಾಳಿ ನಡೆಸಿದ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಹರ್ಷಿತ್ ರಾಣಾ 3, ಅರ್ಶದೀಪ್ ಸಿಂಗ್ 2 ಹಾಗೂ ಪ್ರಸಿದ್ದ್ ಕೃಷ್ಣ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಕೊಹ್ಲಿ ಶತಕ, ಬೃಹತ್ ಮೊತ್ತ ಕಲೆಹಾಕಿದ ಭಾರತ

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ, ಆರಂಭಿಕ ಆಘಾತದ ಹೊರತಾಗಿಯೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ರೋಹಿತ್ ಶರ್ಮಾ 57 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನು ವಿರಾಟ್ ಕೊಹ್ಲಿ 120 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಆಕರ್ಷಕ 135 ರನ್ ಸಿಡಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಬಾರಿಸಿದ 52ನೇ ಏಕದಿನ ಶತಕ ಎನಿಸಿಕೊಂಡಿತು.

ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೆ ಎಲ್ ರಾಹುಲ್ 60 ಹಾಗೂ ರವೀಂದ್ರ ಜಡೇಜಾ ಚುರುಕಿನ 32 ರನ್ ಸಿಡಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.