ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸುವ ಸುದ್ದಿ ಹೊರಬಿದ್ದಿದೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಈ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಬಿಸಿಸಿಐ ನಿರ್ಧಾರ ಮರುಪರಿಶೀಲಿಸಲು ಕೇಳಿಕೊಂಡಿದೆ. ರೋಹಿತ್ ಶರ್ಮಾ ಕೂಡ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಇಬ್ಬರು ಹಿರಿಯ ಆಟಗಾರರ ನಿರ್ಗಮನ ಟೀಂ ಇಂಡಿಯಾಗೆ ಹಿನ್ನಡೆ ಉಂಟುಮಾಡಲಿದೆ.

ಟೀಂ ಇಂಡಿಯಾ (Team India) ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ (England Tour) ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಸರಣಿ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮಾ, ಟೆಸ್ಟ್ ಆವೃತ್ತಿಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಈಗ ಅಭಿಮಾನಿಗಳಿಗೆ ಇನ್ನೊಂದು ಆಘಾತ ಕಾದಿದೆ. ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಈ ದೀರ್ಘ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳು ದೃಢಪಡಿಸಿವೆ. ಮಾಧ್ಯಮ ವರದಿಗಳ ಪ್ರಕಾರ, ವಿರಾಟ್ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ನಿರ್ಧಾರ ಕೈಗೊಂಡಿದ್ದಾರೆ. ಕೊಹ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಈಗಾಗಲೇ ಮಾಹಿತಿ ನೀಡಿದ್ದಾರೆ. ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಸಿಸಿಐ ಅಧಿಕಾರಿಗಳು ಕೊಹ್ಲಿಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. 

ವಿರಾಟ್ ಕೊಹ್ಲಿ (Virat Kohli), ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವ ಬಗ್ಗೆ ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಇಂಗ್ಲೆಂಡ್ ಮಹತ್ವದ ಪ್ರವಾಸ ಹತ್ತಿರ ಇರುವ ಕಾರಣ, ನಿರ್ಧಾರವನ್ನು ಮರು ಪರಿಶೀಲಿಸುವಂತೆ ಅವರನ್ನು ಕೇಳಿಕೊಳ್ಳಲಾಗಿದೆ. ಆದ್ರೆ ಕೊಹ್ಲಿ ಈವರೆಗೂ ಅದ್ರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್ ಸರಣಿಗೆ ಇನ್ನೂ ಟೀಂ ಇಂಡಿಯಾ ಆಟಗಾರರ ಘೋಷಣೆ ಆಗಿಲ್ಲ. ಕೆಲವೇ ದಿನಗಳಲ್ಲಿ ಆಯ್ಕೆದಾರರ ಸಭೆ ನಡೆಯುವ ಸಾಧ್ಯತೆ ಇದೆ.

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಂತ್ರ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ. ಮೊದಲ ಟೆಸ್ಟ್ನಲ್ಲಿ ಶತಕ ಗಳಿಸಿದ್ದ ಕೊಹ್ಲಿ ನಂತ್ರ ಫಾರ್ಮ್ ಕಳೆದುಕೊಂಡಿದ್ರು. ಒಂದ್ವೇಳೆ ಕೊಹ್ಲಿ ತಮ್ಮ ನಿರ್ಧಾರ ಬದಲಿಸದೆ ಹೋದ್ರೆ, ಟೀಂ ಇಂಡಿಯಾದಲ್ಲಿ ಮಧ್ಯಕ್ರಮಾಂಕದ ಆಟಗಾರರ ಸಂಖ್ಯೆ ಕಡಿಮೆಯಾಗಲಿದೆ. ಸುಮಾರು 11 ವರ್ಷಗಳ ಕಾಲ ಟೆಸ್ಟ್ ತಂಡವನ್ನು ಮುನ್ನಡೆಸಿದ್ದ ಇಬ್ಬರು ಅನುಭವಿ ಆಟಗಾರರ ಮಾರ್ಗದರ್ಶನವಿಲ್ಲದೆ ತಂಡ, ಮೈದಾನಕ್ಕೆ ಇಳಿಯುವ ಅನಿವಾರ್ಯತೆ ಎದುರಾಗಲಿದೆ. ಕೊಹ್ಲಿ ಡಿಸೆಂಬರ್ 2014 ರಲ್ಲಿ ಭಾರತ ಟೆಸ್ಟ್ ತಂಡದ ಜವಾಬ್ದಾರಿ ಹೊತ್ತಿದ್ದರು. ನಾಯಕನಾಗಿ ಉತ್ತಮ ಪ್ರದರ್ಶನ ತೋರಿದ್ದರು. ನಂತರ ಫೆಬ್ರವರಿ 2022 ರಲ್ಲಿ ರೋಹಿತ್, ಟೆಸ್ಟ್ ಟೀಂ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದರು.

36 ವರ್ಷದ ಕೊಹ್ಲಿ ಭಾರತ ಪರ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.85 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಸರಾಸರಿ ಕುಸಿದಿದೆ. ಅವರು 37 ಪಂದ್ಯಗಳಲ್ಲಿ ಮೂರು ಶತಕಗಳೊಂದಿಗೆ 1,990 ರನ್ ಗಳಿಸಿದ್ದಾರೆ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ, ಅವರು ಐದು ಟೆಸ್ಟ್ ಪಂದ್ಯಗಳಲ್ಲಿ ಸರಾಸರಿ 23.75 ಸ್ಕೋರ್ ಮಾಡಿದ್ರು.

ರೋಹಿತ್ ಶರ್ಮಾ (Rohit Sharma) ಶಾಕಿಂಗ್ ನಿರ್ಧಾರ : ಕೊಹ್ಲಿ ಈವರೆಗೂ ತಮ್ಮ ನಿರ್ಧಾರವನ್ನು ಅಧಿಕೃತಗೊಳಿಸಿಲ್ಲ. ಆದ್ರೆ ಬುಧವಾರ ರೋಹಿತ್ ಶರ್ಮಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ತಮ್ಮ ಶಾಕಿಂಗ್ ನಿರ್ಧಾರವನ್ನು ಹೇಳಿದ್ದಾರೆ. ಏಕದಿನ ಕ್ರಿಕೆಟ್ ಮಾತ್ರ ಆಡುವುದಾಗಿ ಬರೆದುಕೊಂಡಿದ್ದಾರೆ. 2024 ರಲ್ಲೇ ಟಿ 20 ಕ್ರಿಕೆಟ್ ಗೆ ರೋಹಿತ್ ವಿದಾಯ ಹೇಳಿದ್ದರು. ರೋಹಿತ್ ಈ ನಿರ್ಧಾರದಿಂದ ಅಭಿಮಾನಿಗಳು ಶಾಕ್ ನಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸದ ಜವಾಬ್ದಾರಿಯನ್ನು ರೋಹಿತ್ ನಿಭಾಯಿಸ್ತಾರೆ ಅಂದ್ಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. 38 ವರ್ಷದ ರೋಹಿತ್ ಶರ್ಮಾ ಈವರೆಗೆ 67 ಅಂತರಾಷ್ಟ್ರಿಯಕ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು ಟೆಸ್ಟ್ ನಲ್ಲಿ 4301 ರನ್ ಗಳಿಸಿದ್ದರು.