ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ನೀಡಿದ 531 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್, ಸೋಲಿನ ದವಡೆಯಿಂದ ಪಾರಾಗಿ ಪಂದ್ಯವನ್ನು ರೋಚಕವಾಗಿ ಡ್ರಾ ಮಾಡಿಕೊಂಡಿತು.
ಕ್ರೈಸ್ಟ್‌ಚರ್ಚ್: ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಡ್ರಾ ಸಾಧಿಸಿದೆ. ಕಿವೀಸ್ ನಾಡಿನಲ್ಲಿ ಛಲಬಿಡದೇ ಹೋರಾಡಿದ ವೆಸ್ಟ್ ಇಂಡೀಸ್ ತಂಡವು ರೋಚಕವಾಗಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ವಿಂಡೀಸ್ ಪರ ಗ್ರೀವ್ಸ್ ಹಾಗೂ ರೋಚ್ ಜೋಡಿ ಕೆಚ್ಚೆದೆಯ ಪ್ರದರ್ಶನ ತೋರುವ ಮೂಲಕ ಕಿವೀಸ್ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
ಕ್ರೈಸ್ಟ್‌ಚರ್ಚ್ ಟೆಸ್ಟ್ ಗೆಲ್ಲಲು ವಿಂಡೀಸ್‌ಗೆ ನ್ಯೂಜಿಲೆಂಡ್ 531 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಆದರೆ ಸೋಲೊಪ್ಪಿಕೊಳ್ಳದೆ ವಿಂಡೀಸ್ ತಂಡ ಯಶಸ್ವಿಯಾಗಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ವಿಂಡೀಸ್ ಆರು ವಿಕೆಟ್ ನಷ್ಟಕ್ಕೆ 457 ರನ್ ಗಳಿಸಿತು. ಜಸ್ಟಿನ್ ಗ್ರೀವ್ಸ್ (388 ಎಸೆತಗಳಲ್ಲಿ ಅಜೇಯ 202) ಮತ್ತು ಕೆಮರ್ ರೋಚ್ (233 ಎಸೆತಗಳಲ್ಲಿ ಅಜೇಯ 58 ರನ್) ಅವರ ಹೋರಾಟ ವಿಂಡೀಸ್‌ಗೆ ಡ್ರಾ ತಂದುಕೊಟ್ಟಿತು. ಇದಕ್ಕೂ ಮುನ್ನ ಶಾಯ್ ಹೋಪ್ 140 ರನ್ ಗಳಿಸಿದ್ದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ ವಿಂಡೀಸ್ 72 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಜಾನ್ ಕ್ಯಾಂಪ್‌ಬೆಲ್ (15), ತೇಜ್ ನರೈನ್ ಚಂದ್ರಪಾಲ್ (6), ಅಲಿಕ್ ಅಥಾನಾಜೆ (5), ಮತ್ತು ರೋಸ್ಟನ್ ಚೇಸ್ (4) ಪೆವಿಲಿಯನ್‌ಗೆ ಮರಳಿದ್ದರು. ನಂತರ ವಿಂಡೀಸ್‌ನ ಪ್ರತಿರೋಧ ಶುರುವಾಯಿತು. ಗ್ರೀವ್ಸ್ - ಹೋಪ್ ಜೋಡಿ 196 ರನ್‌ಗಳ ಜೊತೆಯಾಟವಾಡಿತು. ಈ ವೇಳೆ ಹೋಪ್ ಶತಕವನ್ನೂ ಪೂರೈಸಿದರು. ಇಬ್ಬರೂ ಕ್ರೀಸ್‌ನಲ್ಲಿದ್ದಾಗ ವಿಂಡೀಸ್ ಗೆಲ್ಲಬಹುದು ಎನಿಸಿತ್ತು. ಆದರೆ ಹೋಪ್ ಅವರನ್ನು ಔಟ್ ಮಾಡಿ ಜೇಕಬ್ ಡಫಿ ನ್ಯೂಜಿಲೆಂಡ್‌ಗೆ ಬ್ರೇಕ್ ನೀಡಿದರು. ಅವರ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಮತ್ತು 15 ಬೌಂಡರಿಗಳಿದ್ದವು.
ನಂತರ ಬಂದ ತೆವಿನ್ ಇಮ್ಲಾಚ್ (4) ಬಂದಷ್ಟೇ ವೇಗವಾಗಿ ವಾಪಸಾದರು. ಇದರಿಂದ ವಿಂಡೀಸ್ ಸ್ಕೋರ್ 277ಕ್ಕೆ ಕುಸಿಯಿತು. ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುತ್ತದೆ ಎಂದುಕೊಂಡಿದ್ದಾಗ ಗ್ರೀವ್ಸ್ ಜೊತೆ ರೋಚ್ ಸೇರಿಕೊಂಡರು. ನಂತರ ನಡೆದಿದ್ದು ಇತಿಹಾಸ. ಈ ಜೋಡಿ 409 ಎಸೆತಗಳನ್ನು ಎದುರಿಸಿತು. ಗ್ರೀವ್ಸ್ ಇನ್ನಿಂಗ್ಸ್‌ನಲ್ಲಿ 19 ಬೌಂಡರಿಗಳಿದ್ದವು. ರೋಚ್ ಎಂಟು ಬೌಂಡರಿಗಳನ್ನು ಗಳಿಸಿದರು. 37 ವರ್ಷದ ರೋಚ್, ನ್ಯೂಜಿಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕೂಡ ಪಡೆದಿದ್ದರು.
ಎರಡನೇ ಇನ್ನಿಂಗ್ಸ್‌ನಲ್ಲಿ ರಚಿನ್ ರವೀಂದ್ರ (176) ಮತ್ತು ಟಾಮ್ ಲಾಥಮ್ (145) ಅವರ ಬಲದಿಂದ ಕಿವೀಸ್ 466 ರನ್ ಗಳಿಸಿತ್ತು. ಬೇರೆ ಯಾರಿಗೂ ಅರ್ಧಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ 231 ರನ್‌ಗಳಿಗೆ ಉತ್ತರವಾಗಿ ವಿಂಡೀಸ್ 167 ರನ್‌ಗಳಿಗೆ ಆಲೌಟ್ ಆಗಿತ್ತು.
ಸ್ಕೋರ್: ನ್ಯೂಜಿಲೆಂಡ್ 231, 468 & ವೆಸ್ಟ್ ಇಂಡೀಸ್ 167, 457.


