ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? ಕಠಿಣ ಹಾಗೂ ಸಂಕಷ್ಟದ ಪರಿಸ್ಥಿತಿ ಎದುರಿಸುವ ಕುರಿತು ಮೂರು ವರ್ಷ ಹಿಂದೆ ಸ್ಮೃತಿ ಮಂಧನಾ ಸ್ಪೂರ್ತಿಯ ಮಾತುಗನ್ನಾಡಿದ್ದರು. ಇದು ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸಲಿದೆ.

ನವದೆಹಲಿ (ಡಿ.9) ಭಾರತ ಮಹಿಳಾ ತಂಡದ ಕ್ರಿಕೆಟರ್ ಸ್ಮೃತಿ ಮಂಧನಾ ಕಳೆದ ಕೆಲ ತಿಂಗಳಲ್ಲಿ ಬದುಕಿನ ಅತ್ಯಂತ ಸಂಭ್ರಮದ ಕ್ಷಣಗಳನ್ನೂ ಅದೇ ರೀತಿ ಅತ್ಯಂತ ಕೆಟ್ಟ ಕ್ಷಣಗಳನ್ನು ಎದುರಿಸಿದ್ದಾರೆ. ವಿಶ್ವಕಪ್ ಟ್ರೋಫಿ ಗೆಲುವು, ಅದೇ ಮೈದಾನದಲ್ಲಿ ತಾನು ಪ್ರೀತಿಸಿದ ಗೆಳೆಯ ಪಲಾಶ್ ಮುಚ್ಚಾಲ್ ಪ್ರಪೋಸಲ್, ಮೆಹಂದಿ, ಆರತಕ್ಷತೆ, ಸಂಗೀತ್ ಸೆರಮನಿ ಸೇರಿದಂತೆ ಎಲ್ಲವೂ ಸ್ಮೃತಿ ಮಂಧನಾ ಬಾಳಲ್ಲಿ ಅತ್ಯಂತ ಸಮುಧುರ ಹಾಗೂ ಅತೀವ ಸಂಭ್ರಮದ ಕ್ಷಣಗಳಾಗಿತ್ತು. ಆದರೆ ಪಲಾಶ್ ಮುಚ್ಚಾಲ್ ಜೊತೆಗಿನ ಮದುವೆ ದಿಢೀರ್ ಮುರಿದು ಬಿದ್ದ ಬಳಿಕ ಸ್ಮೃತಿ ಮಂಧನಾ ಹಾಗೂ ಕುಟುಂಬ ಅತ್ಯಂತ ಸಂಕಷ್ಟದ ಪರಿಸ್ಥಿತಿ ಎದುರಿಸಿದೆ. ಆದರೆ ಸ್ಮೃತಿ ಮಂಧನಾ ಈ ಎಲ್ಲಾ ಬೆಳವಣಿಗೆ ನಡೆದ ಕೆಲವೇ ದಿನಕ್ಕೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಮೃತಿ ಮಂಧನಾ ಮುಂದಿನ ಸರಣಿಗೆ ಅಭ್ಯಾಸ ಆರಂಭಿಸಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಹಲವರು ಅಚ್ಚರಿಗೊಂಡಿದ್ದರು. ಇದಕ್ಕೆ ಉತ್ತರ ಮೂರು ವರ್ಷಗಳ ಹಿಂದೆ ಖುದ್ದು ಸ್ಮೃತಿ ಮಂಧನಾ ನೀಡಿದ್ದರು.

ಬದುಕಿನ ಅತ್ಯಂತ ಕಳಮಟ್ಟದ ಪರಿಸ್ಥಿತಿ ಎದುರಿಸುವುದು ಹೇಗೆ?

ಸ್ಮೃತಿ ಮಂಧನಾ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ. ಸ್ಮೃತಿ ಮಂಧನಾ ತನ್ನ ಬದುಕಿನ ಕೆಟ್ಟ ಘಳಿಗೆಯನ್ನು ಎದುರಿಸಿದ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಮೃತಿ ಮಂಧನಾ ಮೂರು ವರ್ಷದ ಹಿಂದೆ ಬದುಕಿನ ಎದುರಾಗುವ ಸವಾಲು, ಸೋಲು, ಸಂಕಷ್ಟಗಳನ್ನು ತಾನು ಹೇಗೆ ಎದುರಿಸುತ್ತೇನೆ ಎಂಬುದವರ ಕುರಿತು ಹೇಳಿದ್ದರು. ಹ್ಯೂಮನ್ಸ್ ಆಫ್ ಬಾಂಬೆ ಜೊತೆಗಿನ ಸಂದರ್ಶನದಲ್ಲಿ ಸ್ಮೃತಿ ಮಂಧನಾ ಮೋಟಿವೇಶನಲ್ ಮಾತುಗಳನ್ನು ಆಡಿದ್ದರು. ಕ್ರಿಕೆಟ್ ಬದುಕಿನಲ್ಲಿ ಗೆಲುವು ಸೋಲು ಇದ್ದೇ ಇದೆ. ಇದರಲ್ಲಿ ಸೋಲಿನಲ್ಲಿ ಕಳಪೆ ಪ್ರದರ್ಶನ, ಸೋಲಿಗೆ ಕಾರಣ, ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತದೆ. ಪದೇ ಪದೇ ಎಡವಿದಾಗ ಆತ್ಮವಿಶ್ವಾಸ ಕುಗ್ಗಿ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ನಾನು ಲಾಂಗ್ ಟರ್ಮ್ ಗೋಲ್ ಇಟ್ಟುಕೊಳ್ಳುವುದಿಲ್ಲ, ಎಲ್ಲವೂ ಶಾರ್ಟ್ ಟರ್ಮ್ ಗೋಲ್ ಆಗಿರುತ್ತದೆ. ಇದರಿಂದ ನಾನು ಸಂಕಷ್ಟದಲ್ಲಿ ಸಮಯದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದಿದ್ದರು.

ಕರಿಯರ್ ಲೋ ಎದುರಿಸಿದರೆ ಏನು ಮಾಡುತ್ತೇನೆ ಗೊತ್ತಾ?

ಕರಿಯರ್ ಅಥವಾ ಬದುಕಿನಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದರೆ ನಾನು ಸುದೀರ್ಘ ದಿನಗಳ ಪ್ಲಾನ್, ಗೋಲ್ ಇಟ್ಟುಕೊಳ್ಳುವುದಿಲ್ಲ. ಕೇವಲ 6 ದಿನ 7 ದಿನದ ಪ್ಲಾನ್ ಮಾಡಿಕೊಳ್ಳುತ್ತೇನೆ. ಈ 7 ದಿನದಲ್ಲಿ ನಾನು ಏನು ಮಾಡಬೇಕು ಎಂಬುದು ಯೋಚಿಸುತ್ತೇನೆ. ನಡೆದ ಘಟನೆಗಳು, ಪಂದ್ಯಗಳು, ಬ್ಯಾಟಿಂಗ್ ಕುರಿತು ಯೋಚನೆ ಮಾಡುವುದಿಲ್ಲ. ಅದು ನನ್ನ ಬ್ಯಾಟಿಂಗ್ ಅಥಾ ಫಿಟ್ನೆಸ್ ಅಥವಾ ಇನ್ಯಾವುದೇ ಆಗಿರಬಹುದು. ಏನು ಮಾಡಬೇಕು, ಸುಧಾರಣೆ ಮಾಡಬೇಕು ಅನ್ನೋದು ಯೋಚಿಸಿ ಅದರತ್ತ ಮುಂದುವರಿಯುತ್ತೇನೆ. 6 ರಿಂದ 7 ದಿನ ನನ್ನ ತಲೆಯಲ್ಲಿ ಮುಂದಿನ ಗುರಿ ಪ್ಲಾನ್ ಮಾತ್ರ ಇಡಲು ಪ್ರಯತ್ನಿಸುತ್ತೇನೆ. ಅಷ್ಟರಲ್ಲೇ ಸುಧಾರಣೆ ಕಂಡಿರುತ್ತದೆ. ಪರಿಸ್ಥಿತಿಯಿಂದ ಹೊರಬರಲು ಸಹಾಯವಾಗುತ್ತದೆ. ಒಂದು ವಾರ ಕಳೆಯುವಾಗ ಹಳೇ ಘಟನೆಗಳು ನಿಧನವಾಗಿ ಮಾಯವಾಗಲು ಆರಂಭಿಸುತ್ತದೆ ಎಂದಿದ್ದರು.

ಎಷ್ಟೇ ಸ್ಕೋರ್ ಮಾಡಿರಲಿ ಪ್ರತಿ ಇನ್ನಿಂಗ್ಸ್ ಆರಂಭಗೊಳ್ಳುವುದು ಶೂನ್ಯದಿಂದ

ನಾವು ಕಳೆದ ಪಂದ್ಯದಲ್ಲಿ ಶತಕ ಸಿಡಿಸಿರಲಿ, ಅಥವಾ ಸತತವಾಗಿ ಅಬ್ಬರಿಸಿದ್ದರೂ, ಪ್ರತಿ ಇನ್ನಿಂಗ್ಸ್ ಆರಂಭವಾಗುವುದು ಶೂನ್ಯದಿಂದ. ಇದು ಬದುಕಿನಲ್ಲೂೂ ಅಷ್ಟೆ. ಶೂನ್ಯದಿಂದ ಆರಂಭಿಸಿ ಸಾಧಿಸಬೇಕು. ಬದುಕಿನಲ್ಲೇ ಏನೇ ಆದರೂ ಎದುರಿಸಿ, ಕಾರಣ ನಾಳೆ ಹೊಸ ದಿನವಾಗಿರುತ್ತದೆ. ಹೊಸ ಆಶಯ , ಹೊಸ ಗುರಿಯೊಂದಿಗೆ, ಹೊಸ ಸ್ಪೂರ್ತಿಯೊಂದಿಗೆ ಮುನ್ನಡೆಯಬೇಕು. ಪ್ರತಿ ದಿನ ನಮಗೆ ಹೊಸದು, ಹೊಸ ಸವಾಲು, ಈ ಸವಾಲು ಮೆಟ್ಟಿನಿಲ್ಲಬೇಕು ಎಂದು ಸ್ಮೃತಿ ಮಂಧನಾ ಮೂರು ವರ್ಷ ಹಿಂದೆ ಮಾತನಾಡಿದ್ದರು.