ಭುವನೇಶ್ವರ್‌ ಕುಮಾರ್‌ ಮತ್ತು ಜೋಶ್‌ ಹೇಜಲ್‌ವುಡ್‌ ಅವರ ಮಾರಕ ಬೌಲಿಂಗ್ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಕೇವಲ 75 ರನ್‌ಗಳಿಗೆ ಕುಸಿಯಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಬ್ಯಾಟಿಂಗ್ ನೆರವಿನಿಂದ ಕೇವಲ 6.3 ಓವರ್‌ಗಳಲ್ಲಿ ಭರ್ಜರಿ ಜಯ ಸಾಧಿಸಿತು.

ನವದೆಹಲಿ: ಭುವನೇಶ್ವರ್‌ ಕುಮಾರ್‌ ಹಾಗೂ ಜೋಶ್‌ ಹೇಜಲ್‌ವುಡ್‌. ಈ ಎರಡು ಹೆಸರುಗಳನ್ನು ಕೇಳಿದರೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬ್ಯಾಟರ್‌ಗಳು ಇನ್ನೊಂದಿಷ್ಟು ವರ್ಷ ಕನಸಿನಲ್ಲೂ ಬೆಚ್ಚಿಬೀಳುವುದು ಖಚಿತ. ಸ್ವಿಂಗ್‌, ಪ್ರಬಲ ವೇಗ, ನಿಖರ ಯಾರ್ಕರ್‌ ಮೂಲಕ ಅಬ್ಬರಿಸಿದ ಆರ್‌ಸಿಬಿ ವೇಗಿಗಳು, ಡೆಲ್ಲಿ ತಂಡವನ್ನು ಅವರದೇ ತವರಿನಲ್ಲಿ ಕೇವಲ 75 ರನ್‌ಗೆ ಗಂಟುಮೂಟೆ ಕಟ್ಟಿಸಿದ್ದಾರೆ. ಬಳಿಕ ಬ್ಯಾಟಿಂಗ್‌ನಲ್ಲೂ ಆರ್ಭಟಿಸಿದ ಆರ್‌ಸಿಬಿ ಕೇವಲ 6.3 ಓವರ್‌ನಲ್ಲೇ ಚೇಸ್‌ ಮಾಡಿ ಗೆದ್ದಿದೆ.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಅಕ್ಷರಶಃ ತತ್ತರಿಸಿದರು. 2ನೇ ಎಸೆತದಲ್ಲೇ ಸಾಹಿಲ್‌ ಪಾರಕ್‌ರನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಭುವನೇಶ್ವರ್‌, ಡೆಲ್ಲಿ ಪತನಕ್ಕೆ ನಾಂದಿ ಹಾಡಿದರು. ಆ ಬಳಿಕ ನಡೆದಿದ್ದು ಪೆವಿಲಿಯನ್‌ ಪರೇಡ್‌. ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ ಹೇಜಲ್‌ವುಡ್‌, ಕೆ.ಎಲ್‌.ರಾಹುಲ್‌ ಹಾಗೂ ಸಮೀರ್‌ ರಿಜ್ವಿಯನ್ನು ಔಟ್‌ ಮಾಡಿದರು. ಮುಂದಿನ ಓವರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ದಾಳಿ ನಡೆಸಿದ ಭುವನೇಶ್ವರ್‌, ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಅಕ್ಷರ್‌ಗೆ ಪೆವಿಲಿಯನ್‌ ಹಾದಿ ತೋರಿದರು. 4ನೇ ಓವರ್‌ನಲ್ಲಿ ನಿತೀಶ್ ವಿಕೆಟ್‌ ಬೀಳುವುದರೊಂದಿಗೆ ಡೆಲ್ಲಿಯ ಸ್ಕೋರ್‌ 6 ವಿಕೆಟ್‌ಗೆ 8 ರನ್ ಆಗಿತ್ತು. ಪವರ್‌ಪ್ಲೇನಲ್ಲಿ ತಂಡದ ಸ್ಕೋರ್‌ ಬರೀ 13. ಇಂಪ್ಯಾಕ್ಟ್‌ ಆಟಗಾರನಾಗಿ ಕ್ರೀಸ್‌ಗೆ ಬಂದ ಅಭಿಷೇಕ್‌ ಪೊರೆಲ್‌(30) ತಂಡವನ್ನು ಐಪಿಎಲ್‌ನ ಕನಿಷ್ಠ ಮೊತ್ತದ ಮುಖಭಂಗದಿಂದ ಪಾರು ಮಾಡಿದರು. ಮಿಲ್ಲರ್‌ 19, ಜೇಮಿಸನ್‌ 12 ರನ್‌ ಗಳಿಸಿದರು. ಹೇಜಲ್‌ವುಡ್‌ 3.3 ಓವರ್‌ನಲ್ಲಿ 12 ರನ್‌ಗೆ 4 ವಿಕೆಟ್‌ ಪಡೆದರೆ, ಭುವನೇಶ್ವರ್‌ 3 ಓವರ್‌ನಲ್ಲಿ 5 ರನ್‌ಗೆ 3 ವಿಕೆಟ್‌ ಕಿತ್ತರು.

6.3 ಓವರ್‌ನಲ್ಲಿ ಚೇಸ್:

ಸುಲಭ ಗುರಿಯನ್ನು ಆರ್‌ಸಿಬಿ ಲೀಲಾಜಾಲವಾಗಿ ಬೆನ್ನತ್ತಿ ಗೆದ್ದಿತು. ತಂಡ 6.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಜೇಕಬ್‌ ಬೆಥೆಲ್‌ 11 ಎಸೆತಕ್ಕೆ 20 ರನ್‌ ಗಳಿಸಿ ಔಟಾದರೆ, ವಿರಾಟ್‌ ಕೊಹ್ಲಿ 15 ಎಸೆತಕ್ಕೆ ಔಟಾಗದೆ 23, ದೇವದತ್‌ ಪಡಿಕ್ಕಲ್‌ 13 ಎಸೆತಕ್ಕೆ ಔಟಾಗದೆ 34 ರನ್‌ ಬಾರಿಸಿದರು.

ಸ್ಕೋರ್: ಡೆಲ್ಲಿ 16.3 ಓವರ್‌ಗಳಲ್ಲಿ 75/10 (ಪೊರೆಲ್‌ 30, ಹೇಜಲ್‌ವುಡ್‌ 4-12, ಭುವನೇಶ್ವರ್‌ 3-5), ಆರ್‌ಸಿಬಿ 6.3 ಓವರ್‌ಗಳಲ್ಲಿ 77/1 (ದೇವದತ್‌ ಔಟಾಗದೆ 34, ಕೊಹ್ಲಿ ಔಟಾಗದೆ 23, ಜೇಮಿಸನ್‌ 1-42)

--

75 ರನ್‌: ಇದು ಐಪಿಎಲ್‌ನಲ್ಲಿ ಡೆಲ್ಲಿಯ 3ನೇ ಕನಿಷ್ಠ ಸ್ಕೋರ್‌. 2017ರಲ್ಲಿ ಮುಂಬೈ ವಿರುದ್ಧ 66, ಪಂಜಾಬ್‌ ವಿರುದ್ಧ 67 ರನ್‌ಗೆ ಆಲೌಟಾಗಿತ್ತು.

03ನೇ ಕನಿಷ್ಠ: 75 ರನ್‌ ಆರ್‌ಸಿಬಿ ವಿರುದ್ಧ ಯಾವುದೇ ತಂಡದ 3ನೇ ಕನಿಷ್ಠ. ರಾಜಸ್ಥಾನ ತಂಡ 2009ರಲ್ಲಿ 58 ಹಾಗೂ 2023ರಲ್ಲಿ 59 ರನ್‌ಗೆ ಆಲೌಟಾಗಿತ್ತು.

03 ಬಾರಿ: ಐಪಿಎಲ್‌ನಲ್ಲಿ ಎದುರಾಳಿ ತಂಡಗಳನ್ನು 3 ಬಾರಿ 75 ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್‌ ಮಾಡಿದ ಮೊದಲ ತಂಡ ಆರ್‌ಸಿಬಿ.

ಭುವಿ 20ನೇ ಬಾರಿ 3+ ವಿಕೆಟ್‌ ಸಾಧನೆ

ಭುವನೇಶ್ವರ್‌ ಐಪಿಎಲ್‌ನಲ್ಲಿ 20ನೇ ಬಾರಿ 3+ ವಿಕೆಟ್ ಸಾಧನೆ ಮಾಡಿದ್ದಾರೆ. ಇದು 2ನೇ ಗರಿಷ್ಠ. ಜಸ್‌ಪ್ರೀತ್ ಬುಮ್ರಾ 25 ಬಾರಿ ಈ ಸಾಧನೆ ಮಾಡಿದ್ದು, ಅಗ್ರಸ್ಥಾನದಲ್ಲಿದ್ದಾರೆ. ಲಸಿತ್‌ ಮಾಲಿಂಗಾ 19, ಹರ್ಷಲ್‌ ಪಟೇಲ್‌ 17 ಬಾರಿ ಈ ಸಾಧನೆ ಮಾಡಿದ್ದಾರೆ.

81 ಎಸೆತ ಉಳಿಸಿ ಜಯ: 2ನೇ ಗರಿಷ್ಠ

ಆರ್‌ಸಿಬಿ ಈ ಪಂದ್ಯದಲ್ಲಿ 81 ಎಸೆತಗಳನ್ನು ಉಳಿಸಿಕೊಂಡು ಗೆಲುವಿನ ದಡ ಸೇರಿತು. ಇದು ಐಪಿಎಲ್‌ನಲ್ಲಿ 2ನೇ ಗರಿಷ್ಠ. 2008ರಲ್ಲಿ ವಾಂಖೆಡೆಯಲ್ಲಿ ಕೋಲ್ಕತಾ ವಿರುದ್ಧ ಮುಂಬೈ ತಂಡ 87 ಎಸೆತಗಳನ್ನು ಉಳಿಸಿಕೊಂಡು ಗೆದ್ದಿದ್ದು ಈಗಲೂ ದಾಖಲೆ.