ಬ್ಯಾಟಿಂಗ್‌ನಲ್ಲಿ ಕೊನೆಯ ಓವರ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಆರ್‌ಸಿಬಿ, ಬೌಲಿಂಗ್‌ನಲ್ಲಿ 15 ರನ್ ರಕ್ಷಿಸಿಕೊಳ್ಳಲಾಗದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲೊಪ್ಪಿಕೊಂಡಿತು. ಕೆ.ಎಲ್. ರಾಹುಲ್ ಮತ್ತು ಸ್ಟಬ್ಸ್ ಅವರ ಅರ್ಧಶತಕಗಳ ನೆರವಿನಿಂದ ಡೆಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿ, ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಯ ಗೆಲುವಿನ ಓಟಕ್ಕೆ ತಡೆಯೊಡ್ಡಿತು.

ಸ್ಪಂದನ್‌ ಕಣಿಯಾರ್‌, ಕನ್ನಡಪ್ರಭ

ಬೆಂಗಳೂರು: ಎಷ್ಟೇ ಬಲಿಷ್ಠ ತಂಡವಾಗಿದ್ದರೂ ಲೆಕ್ಕಾಚಾರ ಕೈಕೊಟ್ಟಾಗ ಗೆಲುವು ಕೈಜಾರಲಿದೆ ಎನ್ನುವುದಕ್ಕೆ ಶನಿವಾರ ನಡೆದ ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯ ಸೂಕ್ತ ಉದಾಹರಣೆ. ಬ್ಯಾಟಿಂಗ್‌ ವೇಳೆ ಕೊನೆ 5 ಓವರಲ್ಲಿ ಕೇವಲ 29 ರನ್‌ ಗಳಿಸಿ 4 ವಿಕೆಟ್‌ ಕಳೆದುಕೊಂಡ ಆರ್‌ಸಿಬಿ, ಬೌಲಿಂಗ್‌ ವೇಳೆ ಕೊನೆ ಓವರಲ್ಲಿ 15 ರನ್‌ ರಕ್ಷಿಸಿಕೊಳ್ಳಲಾಗದೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರ್ಷ ಮೊದಲ ಸೋಲು ಅನುಭವಿಸಿತು. ಸತತ 2 ಸೋಲಿನಿಂದ ಕಂಗೆಟ್ಟಿದ್ದ ಡೆಲ್ಲಿ 6 ವಿಕೆಟ್‌ ಜಯದೊಂದಿಗೆ ಲಯಕ್ಕೆ ಮರಳಿದರೆ, ಆರ್‌ಸಿಬಿ 6 ಪಂದ್ಯದಲ್ಲಿ 2ನೇ ಸೋಲು ಕಂಡು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿಯಿತು.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌, ಬ್ಯಾಟರ್‌ಗಳಿಗೆ ನಿರೀಕ್ಷಿತ ನೆರವು ನೀಡಲಿಲ್ಲ. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಆರಂಭದಲ್ಲಿ ಸ್ಫೋಟಕ ಆಟವಾಡಿದರೂ, ಆ ಬಳಿಕ ಮಂಕಾಯಿತು. ಫಿಲ್‌ ಸಾಲ್ಟ್ (38 ಎಸೆತದಲ್ಲಿ 4 ಬೌಂಡರಿ, 3 ಸಿಕ್ಸರ್‌ನೊಂದಿಗೆ 63 ರನ್‌) ಹೊರತುಪಡಿಸಿ ಆರ್‌ಸಿಬಿಯ ಮತ್ತ್ಯಾವ ಬ್ಯಾಟರ್‌ ಕೂಡ ಅಪಾಯಕಾರಿಯಾಗಿ ಕಾಣಲಿಲ್ಲ. ಟಿಮ್‌ ಡೇವಿಡ್‌ 26 ರನ್‌ ಗಳಿಸಿದರೂ, ಅವರ ಎಂದಿನ ಹೊಡಿಬಡಿ ಆಟ ನೋಡಲಾಗದೆ ಅಭಿಮಾನಿಗಳು ನಿರಾಸೆಗೊಂಡರು. ಜಿತೇಶ್‌ ಶರ್ಮಾ 14 ರನ್‌ ಗಳಿಸಲು 20 ಎಸೆತ ವ್ಯರ್ಥ ಮಾಡಿದ್ದು, ತಂಡಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿತು. ಆರ್‌ಸಿಬಿ 175 ರನ್‌ಗೆ 8 ವಿಕೆಟ್‌ ಕಳೆದುಕೊಂಡು, ಕನಿಷ್ಠ 15ರಿಂದ 20 ರನ್‌ ಕಡಿಮೆ ದಾಖಲಿಸಿತು.

ಭುವಿ ಮ್ಯಾಜಿಕ್‌: 

ಪವರ್‌-ಪ್ಲೇನಲ್ಲಿ ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಕಿತ್ತರು. ನಿಸ್ಸಾಂಕ, ಕರುಣ್‌, ರಿಜ್ವಿ ಮೂವರನ್ನೂ ಪೆವಿಲಿಯನ್‌ಗಟ್ಟಿದ ಭುವನೇಶ್ವರ್‌, ಡೆಲ್ಲಿ 18ಕ್ಕೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು. ಆದರೆ ಕೆ.ಎಲ್‌.ರಾಹುಲ್‌ ತಂಡದ ರನ್‌ ಗಳಿಕೆಗೆ ವೇಗ ತುಂಬಿದರು. ರಾಹುಲ್‌ಗೆ ಟ್ರಿಸ್ಟನ್‌ ಸ್ಟಬ್ಸ್‌ ಉತ್ತಮ ಬೆಂಬಲ ನೀಡಿದರು. ರಾಹುಲ್‌ 57 ರನ್‌ ಗಳಿಸಿ ಔಟಾದರೆ, 26 ರನ್‌ ಕೊಡುಗೆ ನೀಡಿದ ನಾಯಕ ಅಕ್ಷರ್‌, ಗಾಯಗೊಂಡು ಹೊರನಡೆದರು. 17, 18, 19ನೇ ಓವರಲ್ಲಿ ಆರ್‌ಸಿಬಿ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿತು. ಕೊನೆ ಓವರಲ್ಲಿ ಡೆಲ್ಲಿಗೆ ಗೆಲ್ಲಲು 15 ರನ್‌ ಬೇಕಿತ್ತು. ಆದರೆ, ಆರ್‌ಸಿಬಿ ಬಳಿ ಕೊನೆ ಓವರ್‌ ಎಸೆಯಲು ಸೂಕ್ತ ಆಯ್ಕೆ ಇರಲಿಲ್ಲ. ಕೊನೆಗೆ ತಂಡವನ್ನು ಗೆಲ್ಲಿಸುವ ಹೊಣೆಯನ್ನು ಶೆಫರ್ಡ್ ಹೆಗಲಿಗೆ ಹೊರಿಸಲಾಯಿತು. ಮೊದಲೆರಡು ಎಸೆತದಲ್ಲಿ ಕೇವಲ 2 ರನ್‌ ನೀಡಿದ ಶೆಫರ್ಡ್‌, ಆ ಬಳಿಕ ಮಿಲ್ಲರ್‌ ಅಬ್ಬರವನ್ನು ನಿಯಂತ್ರಿಸಲು ಆಗಲಿಲ್ಲ. 2 ಸಿಕ್ಸರ್‌, 1 ಬೌಂಡರಿ ಸಿಡಿಸಿದ ಮಿಲ್ಲರ್‌ ತಂಡವನ್ನು 1 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 175/8 (ಸಾಲ್ಟ್‌ 63, ಡೇವಿಡ್‌ 26, ಅಕ್ಷರ್‌ 2-18, ಕುಲ್ದೀಪ್‌ 2-32), ಡೆಲ್ಲಿ 19.5 ಓವರಲ್ಲಿ 179/4 (ಸ್ಟಬ್ಸ್‌ 60*, ರಾಹುಲ್‌ 57, ಭುವನೇಶ್ವರ್‌ 3-26) ಪಂದ್ಯಶ್ರೇಷ್ಠ: ಸ್ಟಬ್ಸ್‌

ಟರ್ನಿಂಗ್‌ ಪಾಯಿಂಟ್‌

ಕೊನೆ 5 ಓವರಲ್ಲಿ ಆರ್‌ಸಿಬಿ ಕೇವಲ 29 ರನ್‌ ಗಳಿಸಿತು. ಜಿತೇಶ್‌ರ ಬ್ಯಾಟಿಂಗ್‌ ವೈಫಲ್ಯದಿಂದಾಗಿ ತಂಡ 15-20 ರನ್‌ ಕಡಿಮೆ ದಾಖಲಿಸಿದ್ದರಿಂದ ಸಹಜವಾಗಿಯೇ ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ ಬಿತ್ತು. ಇಷ್ಟಾದರೂ ಪಂದ್ಯ ಆರ್‌ಸಿಬಿ ಕೈಯಲ್ಲಿತ್ತು. ಭುವನೇಶ್ವರ್‌ ಎಸೆದ 18ನೇ ಓವರಲ್ಲಿ 1 ಸಿಕ್ಸರ್‌, ರಸಿಖ್‌ ಎಸೆದ 19ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ದಾಖಲಾಗಿದ್ದು, ಡೆಲ್ಲಿ ಮೇಲಿನ ಒತ್ತಡ ಕಡಿಮೆ ಮಾಡಿತು. ಆದರೆ ಕೊನೆ ಓವರ್‌ ಎಸೆಯಲು ಸೂಕ್ತ ಆಯ್ಕೆ ಇಲ್ಲದೆ ಇದ್ದಿದ್ದು, ಹಾಗೂ ಕ್ರೀಸ್‌ನಲ್ಲಿ ಮಿಲ್ಲರ್‌ರಂಥ ಅನುಭವಿ ಫಿನಿಶರ್‌ ಇದ್ದಿದ್ದು, ಆರ್‌ಸಿಬಿ ಸೋಲಿಗೆ ಕಾರಣವಾಯಿತು.