ಕೊಹ್ಲಿ ಭೇಟಿಗೆ ಬಿಡದ ಹೊಟೆಲ್ ಸಿಬ್ಬಂದಿ, ಬ್ಯಾಟ್ ಎಸೆದು ಗಳಗಳನೇ ಅತ್ತ ಪುಟಾಣಿ ಪ್ಯಾನ್, ಪುಟ್ಟ ಬಾಲಕ ಕೊಹ್ಲಿ ಭೇಟಿ ಮಾಡಲು ಶತ ಪ್ರಯತ್ನ ಮಾಡಿದ್ದಾನೆ. ಇದಕ್ಕೆ ಅವಕಾಶ ನೀಡದಾಗ ನೋವು ಹೊರಹಾಕಿದ ವಿಡಿಯೋ.

ನವದೆಹಲಿ (ಏ.28) ಆರ್‌ಸಿಬಿ ಪ್ಲೇಯರ್ ವಿರಾಟ್ ಕೊಹ್ಲಿ ಅಭಿಮಾನಿಗಳ ಸಂಖ್ಯೆ ದೊಡ್ಡದು. ವಿರಾಟ್ ಎಲ್ಲೇ ಹೋದರೂ ಅಭಿಮಾನಿಗಳು ಕಾಯುತ್ತಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಭರ್ಜರಿ ಗೆಲುವು ದಾಖಲಿಸಿದ ಆರ್‌ಸಿಬಿ ಸಂಭ್ರಮ ಜೋರಾಗಿದೆ. ಇದರ ನಡುವೆ ಹೊಟೆಲ್‌‌ನಲ್ಲಿ ನಡೆದ ಘಟನೆಯ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಬಾಲಕ ಬ್ಯಾಟ್ ಹಿಡಿದು ವಿರಾಟ್ ಕೊಹ್ಲಿಯ ಆಟೋಗ್ರಾಫ್‌ಗಾಗಿ ಕಾಯುತ್ತಿದ್ದ. ಇತ್ತ ಕೊಹ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ, ಇತ್ತ ಹೊಟೆಲ್ ಸಿಬ್ಬಂದಿಗಳೂ ಅವಕಾಶ ನೀಡಲಿಲ್ಲ. ಪರಿಣಾಮ ತನ್ನ ಕೈಯಲ್ಲಿದ್ದ ಬ್ಯಾಟ್ ಎಸೆದು ಕಣ್ಣೀರಿಟ್ಟ ಬಾಲಕನ ವಿಡಿಯೋ ಭಾರಿ ವೈರಲ್ ಆಗಿದೆ.

ಕೊಹ್ಲಿ ಆಟೋಗ್ರಾಫ್ ಪಡೆಯಲು ಕಸರತ್ತು

ಹೊಟೆಲ್‌ನಲ್ಲಿ ಈ ಘಟನೆ ನಡೆದಿದೆ. ವಿರಾಟ್ ಕೊಹ್ಲಿ ಆಗಮಿಸುತ್ತಿದ್ದಂತೆ ಹೊಟೆಲ್ ಸಿಬ್ಬಂದಿಗಳು ವಿರಾಟ್ ಕೊಹ್ಲಿ ಹತ್ತಿರ ಯಾರು ಸುಳಿಯದಂತೆ ಬೌನ್ಸರ್ ರೀತಿ ನಿಂತಿದ್ದಾರೆ. ಇದರ ನಡುವೆ ಇದೇ ಹೊಟೆಲ್‌ನಲ್ಲಿದ್ದ ಕೊಹ್ಲಿಯ ಪುಟಾಣಿ ಫ್ಯಾನ್ ಕೊಹ್ಲಿ ಭೇಟಿ ಮಾಡಿ ಆಟೋಗ್ರಾಫ್ ಪಡೆಯಲು ಭಾರಿ ತಯಾರಿ ಮಾಡಿದ್ದ. ಬ್ಯಾಟ್ ಹಿಡಿದುಕೊಂಡು ಕಾಯುತ್ತಾ ನಿಂತಿದ್ದಾನೆ. ಕೊಹ್ಲಿ ಆಗಮಿಸುತ್ತಿದ್ದಂತೆ ಆಟೋಗ್ರಾಫ್‌ಗಾಗಿ ಕೊಹ್ಲಿಯತ್ತ ತೆರಳುವ ಪ್ರಯತ್ನ ಮಾಡಿದ್ದಾನೆ.

ಕೊಹ್ಲಿ ಆಗಮಿಸುತ್ತಿದ್ದಂತೆ ಪುಟಾಣಿ ಬಾಲಕನಿಗೆ ಕೊಹ್ಲಿ ಬಳಿ ತೆರಳಲು ಹೊಟೆಲ್ ಸಿಬ್ಬಂದಿಗಳು ಅವಕಾಶ ನೀಡಲಿಲ್ಲ. ಓಡೋಡಿ ಬಂದ ಬಾಲಕನ ಸಿಬ್ಬಂದಿಗಳು ತಡೆದಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಕೂಡ ಹೆಚ್ಚಿನ ಆಸಕ್ತಿ ತೋರಲಿಲ್ಲ. ಬಾಲಕನತ್ತ ನೋಡದೆ ವಿರಾಟ್ ಕೊಹ್ಲಿ ತೆರಳಿದ್ದಾರೆ. ಕೆಲ ಹೊತ್ತು ಹಾದು ನೆಚ್ಚನ ಕ್ರಿಕೆಟಿಗನ ಆಟೋಗ್ರಾಫ್ ಪಡೆಯಲು ಮುಂದಾಗಿದ್ದ ಬಾಲಕನಿಗೆ ಸಾಧ್ಯವಾಗಿಲ್ಲ ಅನ್ನೋ ನೋವು ತೀವ್ರಗೊಂಡಿತ್ತು. ಜೊತೆಗೆ ಆಕ್ರೋಶವು ಹೆಚ್ಚಾಗಿತ್ತು.

ಕೊಹ್ಲಿ ನೇರವಾಗಿ ತೆರಳಿದರೆ, ಇತ್ತ ಭೇಟಿ, ಆಟೋಗ್ರಾಫ್ ಸಿಗದೆ ಬಾಲಕ ಕಣ್ಣೀರಿಟ್ಟಿದ್ದಾನೆ. ಇಷ್ಟೇ ಅಲ್ಲ ತನ್ನ ಸಿಟ್ಟನ್ನು ಹೊರಹಾಕಿದ್ದಾನೆ. ಕೈಯಲ್ಲಿದ್ದ ಬ್ಯಾಟನ್ನು ನೆಲಕ್ಕೆ ಎಸೆದು ಆಕ್ರೋಶ ಹೊರಹಾಕಿದ್ದಾನೆ. ಬಳಿಕ ತನ್ನ ಪೋಷಕರು ನಿಂತಿದ್ದ ಕಡೆ ತೆರಳಿದ್ದಾನೆ. ಪೋಷಕರು ಬಾಲಕನ ಸಮಾಧಾನ ಮಾಡಿದ್ದಾರೆ. ಆದರೆ ಬಾಲಕ ಮಾತ್ರ ಯಾವುದೇ ಮಾತಿಗೆ ಕರಗುವ ಪರಿಸ್ಥಿತಯಲ್ಲಿ ಇರಲಿಲ್ಲ.

ಬಾಲಕನಿಗೆ ಕೊನೆ ಪಕ್ಷ ಕೈಬೀಸಿ ವಿಶ್ ಮಾಡಿ ಕೊಹ್ಲಿಗೆ ಮುಂದೆ ಸಾಗಬಹುದಿತ್ತು ಎಂದು ಹಲವರು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಕೊಹ್ಲಿ ಬಾಲಕ ಅಭಿಮಾನಿ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಈ ರೀತಿ ಘಟನೆಗಳು ಸಹಜ. ಇದನ್ನು ಮನಸ್ಸಿಗೆ ಹಾಕಿಕೊಳ್ಳಬಾರದು ಎಂಬ ಸಲಹೆಯೂ ವ್ಯಕ್ತವಾಗಿದೆ.

Scroll to load tweet…