ಪಾಕಿಸ್ತಾನಿ ಕಾರ್ಯಕರ್ತರೊಂದಿಗೆ ಸೂಕ್ಷ್ಮ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಬಂಧನ. ಇನ್‌ಸ್ಟಾಗ್ರಾಮ್ ಖಾತೆ ನಿರ್ಬಂಧ, ಫಾಲೋವರ್ಸ್ ಹೆಚ್ಚಳದ ಬಗ್ಗೆ ಅನುಮಾನ.

ಪಾಕಿಸ್ತಾನಿ ಕಾರ್ಯಕರ್ತರೊಂದಿಗೆ ಸೂಕ್ಷ್ಮ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡ ಮತ್ತು ಅವರ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹರಿಯಾಣ ಮೂಲದ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಅವರನ್ನು ಬಂಧಿಸಿದ ಎರಡು ದಿನಗಳ ನಂತರ, 1.33 ಲಕ್ಷ ಚಂದಾದಾರರನ್ನು ಹೊಂದಿದ್ದ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಇಂದು ನಿರ್ಬಂಧಿಸಲಾಗಿದೆ. ಸದ್ಯ ಈಕೆಯ ಮೇಲೆ ದೇಶದ್ರೋಹದ ಆರೋಪ ಇದ್ದು, ರಾತ್ರೋರಾತ್ರಿ ಈಕೆ ಸೂಪರ್​ಸ್ಟಾರ್​ ಆಗಿಬಿಟ್ಟಿದ್ದಾಳೆ. ಗೂಗಲ್​ನಲ್ಲಿ ಲಕ್ಷ ಲಕ್ಷ ಮಂದಿ ಈಕೆಯ ಹೆಸರನ್ನು ಸರ್ಚ್​ ಮಾಡಿದ್ದಾರೆ. ಜೆ ಎಂದು ಟೈಪಿಸಿದರೆ ಸಾಕು, ಜ್ಯೋತಿ ಮಲ್ಹೋತ್ರಾ ಎಂದು ಬರುವಷ್ಟರ ಮಟ್ಟಿಗೆ ಈಕೆ (ಕು)ಖ್ಯಾತಿ ಪಡೆದುಕೊಂಡಿದ್ದಾಳೆ. ಇಷ್ಟೇ ಆದರೆ ಪರವಾಗಿರಲಿಲ್ಲ. ಕುತೂಹಲ ಎನ್ನುವಂತೆ ದಿಢೀರ್​ ಎಂದು ಈಕೆಯ ಸೋಷಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಾಗಿಬಿಟ್ಟಿದೆ!

ಅದರಲ್ಲಿಯೂ ಇನ್​ಸ್ಟಾಗ್ರಾಮ್​ನಲ್ಲಿ ಒಂದೇ ರಾತ್ರಿಗೆ 7 ಸಾವಿರಕ್ಕು ಹೆಚ್ಚು ಮಂದಿ ಫಾಲೋ ಮಾಡಿದ್ದಾರೆ. ಈಕೆಯ ಬಂಧನದ 24 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಗೂಗಲ್‌ನಲ್ಲಿ ತಡಕಾಡಿದ್ದಾರೆ. ಗೂಗಲ್​ನಲ್ಲಿ ಈಕೆಯ ಬಗ್ಗೆ ಸರ್ಚ್​ ಮಾಡುವುದು ಸಹಜವೇ. ಆದರೆ ಫಾಲೋವರ್ಸ್​ ಆದವರ ಬಗ್ಗೆ ಮಾತ್ರ ಇದೀಗ ಗುಮಾನಿ ಹುಟ್ಟಿಕೊಳ್ಳುತ್ತಿದೆ. ಭಾರತಕ್ಕೆ ದ್ರೋಹ ಎಸಗಿದ ಆರೋಪ ಹೊತ್ತಿರುವ ಈಕೆಯನ್ನು ಫಾಲೋ ಮಾಡಿದವರು ಯಾರು? ಅದರಲ್ಲಿಯೂ ಸಹಸ್ರಾರು ಮಂದಿ ದಿಢೀರ್​ ಎಂದು ಅಭಿಮಾನಿಗಳು ಆಗಿದ್ದು ಯಾಕೆ ಎನ್ನುವ ಬಗ್ಗೆಯೂ ಗುಮಾನಿ ಶುರುವಾಗಿದೆ. ಇವರು ಪಾಕಿಸ್ತಾನದವರಾ ಅಥವಾ ಭಾರತದಲ್ಲಿಯೇ ಇದ್ದು ಪಾಕ್​ಪರವಾಗಿ ಇರುವವರೋ ಎನ್ನುವುದನ್ನೂ ಈಗ ನೋಡಬೇಕಿದೆ. ಆದರೆ, ಇದನ್ನು ಅರಿತಿರುವ ಇನ್​ಸ್ಟಾಗ್ರಾಮ್​, ಜ್ಯೋತಿ ಮಲ್ಹೋತ್ರಾಳ ಖಾತೆಯನ್ನು ಸ್ಥಗಿತಗೊಳಿಸಿದೆ.

ಪೆಹಲ್ಗಾಮ್​ ದಾಳಿಗೂ- ಈಕೆಗೂ ಇದೆಂಥ ಕನೆಕ್ಷನ್​? ಫೋಟೋದಿಂದ ಬಯಲಾಯ್ತು ಭಯಾನಕ ಸತ್ಯ?

ಅಂದಹಾಗೆ, 3.77 ಲಕ್ಷ ಚಂದಾದಾರರೊಂದಿಗೆ "ಟ್ರಾವೆಲ್ ವಿತ್ ಜೋ " ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಜ್ಯೋತಿ ಮಲ್ಹೋತ್ರಾ - ಪಾಕಿಸ್ತಾನಕ್ಕೆ ಹಲವಾರು ಪ್ರಾಯೋಜಿತ ಪ್ರವಾಸಗಳನ್ನು ಕೈಗೊಂಡಿದ್ದಳು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸ್ವಲ್ಪ ಮೊದಲು ಪಾಕಿಸ್ತಾನಕ್ಕೆ ಭೇಟಿಕೊಟ್ಟಿರುವುದು ಬಹಿರಂಗಗೊಂಡಿದೆ. ಇದೀಗ ಆರಂಭಿಕ ತನಿಖೆಯಿಂದ ಒಂದಿಷ್ಟು ಮಾಹಿತಿ ಸಿಕ್ಕಿದ್ದು, ಜ್ಯೋತಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಸಂಘರ್ಷದ ಸಮಯದಲ್ಲಿ ಗಡಿಯಾಚೆಗಿನ ತನ್ನ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದರೂ, ಅವರಿಗೆ ಯಾವುದೇ ರಕ್ಷಣಾ ಸಂಬಂಧಿತ ಗುಪ್ತಚರ ಸಂಪರ್ಕವಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಎಫ್‌ಐಆರ್ ಪ್ರಕಾರ, ಜ್ಯೋತಿ 2023 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೆಹಲಿಯ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರೊಂದಿಗೆ ಹತ್ತಿರವಾದಳು. ಮೇ 13 ರಂದು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲ್ಪಟ್ಟ ನಂತರ ಭಾರತದಿಂದ ಹೊರಹಾಕಲ್ಪಟ್ಟ ಡ್ಯಾನಿಶ್, ಜ್ಯೋತಿಯನ್ನು ಹಲವಾರು ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಗಳಿಗೆ (ಪಿಐಒ) ಪರಿಚಯಿಸಿದ್ದ ಎನ್ನುವುದು ತಿಳಿದುಬಂದಿದೆ. 

ಇವೆಲ್ಲಕ್ಕಿಂತಲೂ ಮುಖ್ಯವಾಗಿ ಇದೀಗ ಕಾಶ್ಮೀರದ ಪೆಹಲ್ಗಾಮ್​ಗೆ ಈಕೆ ಭೇಟಿ ಕೊಟ್ಟಿದ್ದು, ಅದರ ಫೋಟೋ ಕೂಡ ಅಪ್​ಲೋಡ್​ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಪಾಕಿಸ್ತಾನ ಮತ್ತು ಭಾರತದ ಗಡಿಯಲ್ಲಿ ನಿಂತು ಈಕೆ ಮಾಡುತ್ತಿದ್ದ ವಿಡಿಯೋ, ಭಾರತದ ಕೆಲವೊಂದು ಸ್ಥಳಗಳ ಬಗ್ಗೆ ನೀಡುತ್ತಿದ್ದ ಗುಪ್ತ ಮಾಹಿತಿ ನೋಡಿ ಇದಾಗಲೇ ನೆಟ್ಟಿಗರೊಬ್ಬರು ಈಕೆ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಅದನ್ನು ಯಾರೂ ಹೆಚ್ಚು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಪ್ರಪಂಚ ಪರ್ಯಟನೆ ಮಾಡುವ ವ್ಲಾಗರ್​ಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವಾಗ, ಅವರಿಗೆ ಪರ- ವಿರೋಧ ಕಮೆಂಟ್​ಗಳು ಬರುವುದು ಸಹಜ ಎಂದೇ ಅದನ್ನು ಅಷ್ಟು ಹೆಚ್ಚಾಗಿ ಪರಿಗಣಿಸುವುದೂ ಇಲ್ಲ. ಆದರೆ ಇದೀಗ ಪೆಹಲ್ಗಾಮ್​ಗೆ ಜ್ಯೋತಿ ಭೇಟಿ ನೀಡಿದ್ದರ ಬಗ್ಗೆ ಹಲವಾರು ಅನುಮಾನಗಳು ಹುಟ್ಟುಹಾಕುತ್ತಿವೆ.

ಪಾಕ್​ನಲ್ಲಿ 7 ವರ್ಷ ಮುಸ್ಲಿಮಾಗಿದ್ದು ಕಿವಿಯಿಂದ ಸಿಕ್ಕಿಬಿದ್ದ 'ಆಪರೇಷನ್​ ಸಿಂದೂರ'ದ ಹೀರೋ ಸ್ಟೋರಿ ಇದು!