ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಜಾಪುರ ಮೂಲದ ಶರಣಮ್ಮ (23) ಎಂಬ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಕೃತ್ಯವನ್ನು ಆಕೆಯ ಪರಿಚಯಸ್ಥನೇ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಬೆಂಗಳೂರು (ನ.29): ರಾಜಧಾನಿಯ ಶೇಷಾದ್ರಿಪುರಂನಲ್ಲಿ ಚಾಕುವಿನಿಂದ ಇರಿದು ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಶೇಷಾದ್ರಿಪುರಂನ 1ನೇ ಮುಖ್ಯರಸ್ತೆಯಲ್ಲಿ ಈ ಕೃತ್ಯ ನಡೆದಿದ್ದು, ಮೃತರನ್ನು ಬಿಜಾಪುರ ಮೂಲದ ಶರಣಮ್ಮ (23) ಎಂದು ಗುರುತಿಸಲಾಗಿದೆ.
ಪರಿಚಯಸ್ಥನಿಂದಲೇ ಕೊಲೆ:
ಶರಣಮ್ಮ ಅವರು ತಮ್ಮ ಪತಿಯೊಂದಿಗೆ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇಂದು ಸಂಜೆ ಸುಮಾರು 6:30ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಶರಣಮ್ಮ ಅವರ ಪರಿಚಯಸ್ಥನೇ ಆಗಿರುವ ಬಿಜಾಪುರ ಮೂಲದ ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ
ಆರೋಪಿ ಪತ್ತೆಗೆ ತೀವ್ರ ಶೋಧ:
ಪ್ರಾಥಮಿಕ ಮಾಹಿತಿಯ ಪ್ರಕಾರ, ಏಕಾಏಕಿ ಶರಣಮ್ಮ ಜೊತೆ ಜಗಳವಾಡಿದ ಆಸಾಮಿ, ತನ್ನ ಬಳಿಯಿದ್ದ ಚಾಕುವಿನಿಂದ ಆಕೆಯನ್ನು ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಶರಣಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಾರನನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ.


