ಬೆಂಗಳೂರಿನಲ್ಲಿ ಕೇಸರಿ ಶಾಲು ಧರಿಸಿದ್ದಕ್ಕೆ ಕೂಲಿ ಕಾರ್ಮಿಕನ ಮೇಲೆ ಹಲ್ಲೆ ನಡೆದಿದೆ. ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಹಿಂದೂಪರ ಸಂಘಟನೆಗಳು ಆರೋಪಿಗಳ ಬಂಧನಕ್ಕೆ ಆಗ್ರಹಿಸಿವೆ.

ಬೆಂಗಳೂರು (ಆ.26): ಕೇಸರಿ ಶಾಲು ಧರಿಸಿದ್ದಕ್ಕೆ ಹಿಂದೂ ಸಮುದಾಯದ ಬಡಪಾಯಿಯೊಬ್ಬನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಗಸ್ಟ್ 24, 2025 ರಂದು ರಾತ್ರಿ 9:30 ಗಂಟೆ ಸುಮಾರಿಗೆ ರಾಯಲ್ ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸ ಮಾಡುವ ಸುರೇಂದ್ರ ಕುಮಾರ್ ಎಂಬ ಕೂಲಿ ಕಾರ್ಮಿಕನ ಮೇಲೆ ಇಬ್ಬರು ಅಪರಿಚಿತ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಕೇಸರಿ ಶಾಲು ಯಾಕೆ ಹಾಕಿದ್ದೀಯಾ?

ಸುರೇಂದ್ರ ಕುಮಾರ್ ಕೇಸರಿ ಶಾಲು ಧರಿಸಿದ್ದಕ್ಕೆ ಗಲಾಟೆ ತೆಗೆದ ಆರೋಪಿಗಳು, 'ನೀನು ಏಕೆ ಕೇಸರಿ ಶಾಲು ಹಾಕಿದ್ದೀಯಾ?' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಗಳಿಂದ ಹೊಡೆದಿದ್ದಾರೆ.ಘಟನೆಯ ಸಂದರ್ಭದಲ್ಲಿ ಸುರೇಂದ್ರ ಕುಮಾರ್ ಟ್ರಾವೆಲ್ಸ್‌ನಲ್ಲಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಆರೋಪಿಗಳು ಏಕಾಏಕಿ ಗಲಾಟೆ ತೆಗೆದು ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ಕೇಳಲು ಬಂದ ಟ್ರಾವೆಲ್ಸ್‌ನ ಇಂಚಾರ್ಜ್ ರಾಮ್ ಜೀ ರಾವ್‌ಗೂ ಆರೋಪಿಗಳು ಕೈಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ರಾಮ್ ಜೀ ರಾವ್ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಗಸ್ಟ್ 25, 2025 ರಂದು ಎನ್‌ಸಿಆರ್ (ನಾನ್-ಕಾಗ್ನಿಜಬಲ್ ರಿಪೋರ್ಟ್) ದಾಖಲಾಗಿದೆ. ಇಂದು (ಆಗಸ್ಟ್ 26, 2025) ಭಜರಂಗದಳ ಮತ್ತು ಹಿಂದೂಪರ ಸಂಘಟನೆಯ ಗೋವರ್ಧನ್ ಸಿಂಗ್ ನೇತೃತ್ವದಲ್ಲಿ 10 ರಿಂದ 15 ಜನರು ಕಲಾಸಿಪಾಳ್ಯ ಠಾಣೆಗೆ ತೆರಳಿ, ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಲಿದ್ದಾರೆ.

ಪೊಲೀಸರು ಈ ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಮುಂದಿನ ಕ್ರಮಕ್ಕಾಗಿ ದೂರಿನ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.