MBA graduate caught stealing ಖರೀದಿ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ತೆರಳಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಉಂಗುರ ಕಳವು ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಎಂಬಿಎ ಪದವೀಧರೆಯಾದ ಆರೋಪಿಯಿಂದ ಸುಮಾರು 1 ಲಕ್ಷ ಮೌಲ್ಯದ ಉಂಗುರವನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು (ಏ.19): ಖರೀದಿ ಸೋಗಿನಲ್ಲಿ ಚಿನ್ನಾಭರಣ ಮಳಿಗೆಯ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಉಂಗುರ ಕಳವು ಮಾಡಿದ್ದ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪದ ನಿವಾಸಿ ಆಕಾಂಕ್ಷ ನಾರಾಯಣ್ (24) ಬಂಧಿತಳಾಗಿದ್ದು, ಆರೋಪಿಯಿಂದ 1 ಲಕ್ಷ ರು. ಮೌಲ್ಯದ ಉಂಗುರ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜೀವಾ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಚಿನ್ನ ಖರೀದಿ ಸೋಗಿನಲ್ಲಿ ತೆರಳಿ ಆರೋಪಿ ಈ ಕೃತ್ಯ ಎಸಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಅಂಡಮಾನ್-ನಿಕೋಬಾರ್ ಮೂಲದ ಆಕಾಂಕ್ಷ ಎಂಬಿಎ ಸ್ನಾತಕೋತ್ತರ ಪದವೀಧರಳಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದ ಬಳಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾಳೆ. ನೀಲಾಂದ್ರಿ ರಸ್ತೆಯ ಪಿಜಿಯಲ್ಲಿ ನೆಲೆಸಿದ್ದಳು. ಅಂಡಮಾನ್ನಲ್ಲಿ ಆಕೆಯ ತಂದೆ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಆರ್ಥಿಕವಾಗಿ ಈಕೆಯ ಕುಟುಂಬ ಉತ್ತಮ ಸ್ಥಿತಿಯದೆ..
ಮಾ.22ರಂದು ಜೀವಾ ಜ್ಯುವೆಲರ್ಸ್ಗೆ ಗ್ರಾಹಕಿ ಸೋಗಿನಲ್ಲಿ ತೆರಳಿದ್ದ ಆಕಾಂಕ್ಷ, ಕೆಲ ಹೊತ್ತು ಆಭರಣ ಖರೀದಿಸುವಂತೆ ನಟಿಸಿದ್ದಳು. ಬಳಿಕ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಎರಡು ಉಂಗುರಗಳನ್ನು ಕದ್ದು ಆಕೆ ಪರಾರಿಯಾಗಿದ್ದಳು. ಮಳಿಗೆಯಲ್ಲಿ ಸಂಜೆ ಉಂಗುರ ನಾಪತ್ತೆ ಬಗ್ಗೆ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆಕಾಂಕ್ಷ ಕೈಚಳಕ ಬೆಳಕಿಗೆ ಬಂದಿದೆ.
ಈ ಬಗ್ಗೆ ಆಭರಣ ಮಳಿಗೆ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.


