ಬೆಂಗಳೂರಿನಲ್ಲಿ "ಡಿಜಿಟಲ್ ಅರೆಸ್ಟ್" ಎಂಬ ಹೊಸ ಸೈಬರ್ ವಂಚನೆಗೆ ಮಹಿಳಾ ಟೆಕ್ಕಿಯೊಬ್ಬರು ಬಲಿಯಾಗಿದ್ದಾರೆ. ಮುಂಬೈ ಪೊಲೀಸರ ಸೋಗಿನಲ್ಲಿ ಬೆದರಿಸಿದ ಸೈಬರ್ ಖದೀಮರು, ಆಕೆಯಿಂದ ಫ್ಲಾಟ್ ಮತ್ತು ಸೈಟ್ಗಳನ್ನು ಮಾರಾಟ ಮಾಡಿಸಿ ಹಂತ ಹಂತವಾಗಿ ಸುಮಾರು ₹2 ಕೋಟಿ ಹಣವನ್ನು ದೋಚಿದ್ದಾರೆ.
ಬೆಂಗಳೂರು: ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳಿಗೆ ಮತ್ತೊಂದು ಭಯಾನಕ ಉದಾಹರಣೆ ಬೆಳಕಿಗೆ ಬಂದಿದೆ. “ಡಿಜಿಟಲ್ ಅರೆಸ್ಟ್” ಎಂಬ ಹೊಸ ರೀತಿಯ ಬೆದರಿಕೆ ತಂತ್ರ ಬಳಸಿ ಸೈಬರ್ ಖದೀಮರು ವಿದ್ಯಾವಂತ ಮಹಿಳಾ ಟೆಕ್ಕಿಯೊಬ್ಬರನ್ನು ಭೀತಿಗೆ ತಳ್ಳಿದ್ದು, ಆಕೆ ತನ್ನ ಫ್ಲಾಟ್ ಮತ್ತು ಸೈಟ್ಗಳನ್ನು ಮಾರಾಟ ಮಾಡಿ ಸುಮಾರು ₹2 ಕೋಟಿ ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ. ವೈಟ್ ಫೀಲ್ಡ್ ಸಿಇಎನ್ (Cyber Crime) ಠಾಣೆಯಲ್ಲಿ ದಾಖಲಾಗಿದೆ. ಈ ಪ್ರಕರಣದ ಬಳಿಕ ಎಜುಕೇಟೆಡ್ ಜನಗಳೇ ಸೈಬರ್ ಖದೀಮರ ಟಾರ್ಗೆಟ್ ಎಂಬುದು ಮತ್ತೊಮ್ಮೆ ಬಯಲಾಗಿದೆ.
ಸೈಬರ್ ವಂಚಕರ ಜಾಲಕ್ಕೆ ಸಿಲುಕಿದ ಮಹಿಳೆಯನ್ನು ಬಬಿತಾ ದಾಸ್ ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ವಿಜ್ಞಾನ ನಗರ, ನ್ಯೂ ತಿಪ್ಪಸಂದ್ರ ನಿವಾಸಿ. ಬಬಿತಾ ದಾಸ್ ಐಟಿ ಉದ್ಯೋಗದಲ್ಲಿದ್ದು, ತಮ್ಮ 10 ವರ್ಷದ ಮಗನೊಂದಿಗೆ ವಾಸವಿದ್ದರು. ಕಳೆದ ಕೆಲ ತಿಂಗಳ ಹಿಂದೆ ಬ್ಲೂ ಡಾರ್ಟ್ ಕೋರಿಯರ್ ಎಂದು ವಂಚಕರು ಕರೆ ಮಾಡಿದ್ದರು. ಕರೆ ಮಾಡಿದ ವ್ಯಕ್ತಿಗಳು ತಮ್ಮನ್ನು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡು, ಬಳಿಕ ಬೆದರಿಕೆ ಹಾಕಲು ಶುರು ಮಾಡಿದ್ರು. ನಾವೀಗ ನಿಮ್ಮನ್ನ ಅರೆಸ್ಟ್ ಮಾಡ್ತೀವಿ. ನಾವು ನಿಮ್ಮನ್ನ ವೆರಿಫೈ ಮಾಡೋವರೆಗೂ ಎಲ್ಲೂ ಹೋಗೋ ಹಾಗಿಲ್ಲ. ನಾವು ಹೇಳೋ ಒಂದು ಆ್ಯಪನ್ನ ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಾವು ಹೇಳಿದಷ್ಟು ಹಣವನ್ನ ನಮ್ಮ ಖಾತೆಗೆ ಹಾಕ್ಬೇಕು ಎಂದು ಬೆದರಿಕೆ ಒಡ್ಡಿದ್ದಾರೆ. ಮಾತ್ರವಲ್ಲ ಹೇಳಿದ ಹಾಗೆ ಕೇಳಿಲ್ಲ ಅಂದ್ರೆ ಮಗನ ಜೀವನಕ್ಕೆ ಸಮಸ್ಯೆ ಆಗುತ್ತೆ ಎಂದು ಹೆದರಿಸಿದ್ದರು.
ಎಲ್ಲಾ ಆಸ್ತಿ ಮಾರಾಟ
ಮುಂಬೈ ಪೊಲೀಸರು ಎಂದು ನಂಬಿ ಸೈಬರ ವಂಚಕರ ಬೆದರಿಕೆಗೆ ಭಯ ಬಿದ್ದಿದ್ದ ಬಬಿತಾ ದಾಸ್ ಅರೆಸ್ಟ್ ಆಗುವ ಭಯದಲ್ಲಿ ಖದೀಮರಿಗೆ ಹಣ ಹಾಕಲು ತಮ್ಮ ಸೈಟು ಮಾರಾಟ ಮಾಡಿ ವಂಚಕರ ಅಕೌಂಟ್ ಗೆ ಹಣ ಹಾಕಿದ್ದಾರೆ. ಮಾಲೂರಿನಲ್ಲಿದ್ದ ಎರಡು ಸೈಟ್ ಅನ್ನು ಹಾಫ್ ರೇಟ್ ಗೆ ಸೇಲ್ ಮಾಡಿದ್ದರು. ವಿಜ್ಞಾನ ನಗರದಲ್ಲಿ ವಾಸವಿದ್ದ ತಮ್ಮ ಫ್ಲ್ಯಾಟನ್ನ ಕೂಡ ಮಾರಾಟ ಮಾಡಿ ಅದರಿಂದ ಸಿಕ್ಕ ಹಣವನ್ನು ವಂಚಕರ ಅಕೌಂಟ್ ಗೆ ಜಮಾ ಮಾಡಿದ್ದರು. ಇಷ್ಟು ಮಾತ್ರವಲ್ಲ ICICI ಬ್ಯಾಂಕ್ ನಲ್ಲೂ ಲೋನ್ ಮಾಡಿ ವಂಚಕರಿಗೆ ವರ್ಗಾವಣೆ ಮಾಡಿದ್ದರು. ಈ ಮೂಲಕ ಬಬಿತಾ ದಾಸ್ ಹಂತ ಹಂತವಾಗಿ 2 ಕೋಟಿ ಕಳೆದುಕೊಂಡಿದ್ದಾರೆ. ನಂತರ ಮೋಸ ಹೋಗಿರೋದು ಗೊತ್ತಾಗಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ವೈಟ್ ಫಿಲ್ಡ್ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕೂಡಲೇ 1930ಗೆ ಕರೆ ಮಾಡಿ
ಪ್ರಕರಣ ಸಂಬಂಧ ವೈಟ್ ಫಿಲ್ಡ್ ಡಿಸಿಪಿ ಪರಶುರಾಮ್ ಹೇಳಿಕೆ ನೀಡಿ, ಡಿಜಿಟಲ್ ಅರೆಸ್ಟ್ ಅಂತಾ ಬೆದರಿಸಿ ಹಣ ಹಾಕಿಸಿಕೊಂಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ. ಯಾರೂ ಕೂಡ ಡಿಜಿಟಲ್ ಅರೆಸ್ಟ್ ಗೆ ಹೆದರಬೇಡಿ. ಬೆಂಗಳೂರಿನಲ್ಲಿ ಇಂತಹ ಘಟನೆಗಳು ಹೆಚ್ಚಾಗ್ತಿದ್ದಾವೆ. ಯಾವ ಪೊಲೀಸರು ರೂಂನಲ್ಲಿ ಕೂರಿಸಿ ಅರೆಸ್ಟ್ ಮಾಡುವುದಿಲ್ಲ. ವಿಡಿಯೋ ಕಾಲ್ ಮೂಲಕ ಅರೆಸ್ಟ್ ಎಂದು ಹೇಳುವುದಿಲ್ಲ. ಇಂತಹ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಈ ರೀತಿ ಯಾರಾದರು ಕರೆ ಮಾಡಿದರೆ ಕೂಡಲೆ 1930ಗೆ ಕರೆ ಮಾಡಿ. ಇಂತಹ ವಿಚಾರಗಳಿಂದ ಎಚ್ಚರವಾಗಿರಿ ಎಂದು ಎಚ್ಚಕೆಯಿಂದ ಇರುವಂತೆ ಹೇಳಿದ್ದಾರೆ.


