ಬೀದರ್ ಜಿಲ್ಲೆಯ ಯುವಕನೊಬ್ಬ ಫೇಸ್ಬುಕ್ ಲೈವ್ನಲ್ಲಿ ಹಿಂದೂ ದೇವತೆಗಳಾದ ಶ್ರೀರಾಮ, ಶ್ರೀಕೃಷ್ಣ ಮತ್ತು ಮಹಾತ್ಮ ಗಾಂಧೀಜಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಈ ಘಟನೆಯಿಂದಾಗಿ ಹಿಂದೂ ಸಂಘಟನೆಗಳು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಬೀದರ್ (ಫೆ.12): ಗಡಿ ಜಿಲ್ಲೆ ಬೀದರ್ನಲ್ಲಿ ಯುವಕನೊಬ್ಬ ಹಿಂದೂ ಧರ್ಮ ಹಾಗೂ ಆರಾಧ್ಯ ದೈವಗಳ ಬಗ್ಗೆ ಫೇಸ್ಬುಕ್ ಲೈವ್ನಲ್ಲಿ ಅವಹೇಳನಕಾರಿ ಮಾತುಗಳನ್ನಾಡಿರುವುದು ಹಿಂದೂಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಘಟನೆಯ ಬೆನ್ನಲ್ಲೇ ಹಿಂದೂ ಸಂಘಟನೆಗಳು ಹಾಗೂ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ದೇವತೆಗಳ ಕುರಿತು ಅವಹೇಳನಕಾರಿ ಹಾಡು
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಟ್ಟರಗಾ ಗ್ರಾಮದ ಕಾಳಿದಾಸ ಸೂರ್ಯವಂಶಿ ಎಂಬ ಯುವಕ ತನ್ನ ಫೇಸ್ಬುಕ್ ಖಾತೆಯ ಲೈವ್ನಲ್ಲಿ ಶ್ರೀರಾಮ, ಶ್ರೀಕೃಷ್ಣ ಹಾಗೂ ಮಹಾತ್ಮ ಗಾಂಧೀಜಿಯವರ ಕುರಿತು ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾನೆ. 'ಶ್ರೀರಾಮನ ಇತಿಹಾಸ ತಿಳಿಯಬೇಕಾದರೆ ಪೆರಿಯಾರ್ ರಾಮಸ್ವಾಮಿ ರಾಮಾಯಣ ಓದಿ, ಆಗ ರಾಮನ ಬಣ್ಣ ಗೊತ್ತಾಗುತ್ತದೆ' ಎಂದು ಹೇಳಿರುವುದಲ್ಲದೆ, ಶ್ರೀರಾಮ ಹಾಗೂ ಶ್ರೀಕೃಷ್ಣ ಮಹಿಳೆಯರ ಕುರಿತು ಕೆಟ್ಟ ದೃಷ್ಟಿ ಹೊಂದಿದ್ದರು ಎಂಬ ಅರ್ಥ ಬರುವಂತೆ ಹಾಡು ಹಾಡಿ ವಿಕೃತಿ ಮೆರೆದಿದ್ದಾನೆ.
ಮಹಾತ್ಮ ಗಾಂಧೀಜಿ ಬಗ್ಗೆಯೂ ವ್ಯಂಗ್ಯ
ಕೇವಲ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕುರಿತೂ ಈ ಯುವಕ ಅವಹೇಳನ ಮಾಡಿದ್ದಾನೆ. ಗಾಂಧೀಜಿಯವರು ಮೀಸಲಾತಿ ನೀಡುವ ಹೋರಾಟ ಮಾಡಿದ್ದರು ಎಂಬ ವಿಚಾರವನ್ನು ಪ್ರಸ್ತಾಪಿಸುತ್ತಾ ಲೇವಡಿ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಠಾಣೆ ಎದುರು ಪ್ರತಿಭಟನೆ, ಪ್ರಕರಣ ದಾಖಲು
ಯುವಕನ ಈ ಹುಚ್ಚಾಟದ ವಿರುದ್ಧ ನಿನ್ನೆ ರಾತ್ರಿ ಭಾಲ್ಕಿ ತಾಲೂಕಿನ ಮೆಹಕರ್ ಪೊಲೀಸ್ ಠಾಣೆಯ ಎದುರು ನೂರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಕಾಳಿದಾಸ ಸೂರ್ಯವಂಶಿಯನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ ಮೆಹಕರ್ ಪೊಲೀಸರು ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.



