Chikkamagaluru Congress leader murder: ಚಿಕ್ಕಮಗಳೂರು ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು(ಡಿ.6): ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ರಾಜಕೀಯ ದ್ವೇಷ, ಹಣಕಾಸಿನ ವಿವಾದ ಅಥವಾ ವೈಯಕ್ತಿಕ ಕಾರಣಗಳೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬ್ಯಾನರ್ ಬಿಚ್ಚುವ ವಿಚಾರಕ್ಕೆ ಜಗಳ, ಅರ್ಧ ಗಂಟೆಯಲ್ಲೇ ಕೊಲೆ:
ನಿನ್ನೆ ರಾತ್ರಿ ಬ್ಯಾನರ್ ಬಿಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಏಕಾಏಕಿ ಗಲಾಟೆ ಶುರುವಾಗಿದ್ದು, ಗಲಾಟೆ ನಡೆದ ಅರ್ಧ ಗಂಟೆಯಲ್ಲೇ ಗಣೇಶ್ ಗೌಡ ಅವರ ಕೊಲೆ ನಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ
ಈ ಕೊಲೆ ಪ್ರಕರಣದಲ್ಲಿ ಬಜರಂಗದಳದ ಕಾರ್ಯಕರ್ತರಾದ ಸಂಜಯ್, ನಿತಿನ್ ಮತ್ತು ನಾಗಭೂಷಣ್ ಗುಂಪಿನ ಮೇಲೆ ಅನುಮಾನ ವ್ಯಕ್ತವಾಗಿದೆ. ಘರ್ಷಣೆಯ ವೇಳೆ ಗಾಯಗೊಂಡಿರುವ ಸಂಜಯ್ ಮತ್ತು ನಿತಿನ್ ಅವರನ್ನು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪೊಲೀಸರು ಅವರನ್ನು ಆಸ್ಪತ್ರೆಯಲ್ಲೇ ಜೈಲ್ ಗಾರ್ಡ್‌ನಲ್ಲಿ ಇರಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಎಸ್ಪಿ ವಿಕ್ರಮ್ ಆಮ್ಟೆ ಹೇಳಿಕೆ: ಆರೋಪಿಗಳ ಪತ್ತೆಗೆ 4 ವಿಶೇಷ ತಂಡ
ಪ್ರಕರಣದ ಕುರಿತು ಮಾಹಿತಿ ನೀಡಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಕ್ರಮ್ ಆಮ್ಟೆ, 'ಗಣೇಶ್ ಗೌಡ ಎಂಬುವವರ ಮರ್ಡರ್ ಆಗಿದೆ. ಯಾವ ಕಾರಣಕ್ಕೆ ಮರ್ಡರ್ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಗಲಾಟೆಯಲ್ಲಿ ಗಾಯಗೊಂಡ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಸ್ಪಿ ಖಚಿತಪಡಿಸಿದ್ದಾರೆ.
ಸದ್ಯ, ಕೊಲೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಖರಾಯಪಟ್ಟಣ ವ್ಯಾಪ್ತಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಎಸ್ಪಿ ವಿಕ್ರಮ್ ಆಮ್ಟೆ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಬಳಿ ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಮಗಳೂರು ಪೊಲೀಸರು ಪ್ರಕರಣದ ಬೆನ್ನು ಬಿದ್ದಿದ್ದು, ಹತ್ಯೆಯ ಹಿಂದಿನ ಸತ್ಯಾಂಶ ಶೀಘ್ರವೇ ಹೊರಬೀಳುವ ಸಾಧ್ಯತೆ ಇದೆ.


