ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ರದ್ದು ಬೆನ್ನಲ್ಲೇ ತಮ್ಮ ಪತ್ನಿ ಹಾಗೂ ಮಗನ ಭೇಟಿ ಬಳಿಕ ನಟ ದರ್ಶನ್ ಅವರು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಹಾದಿ ತುಳಿದಿದ್ದಾರೆ.

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ರದ್ದು ಬೆನ್ನಲ್ಲೇ ತಮ್ಮ ಪತ್ನಿ ಹಾಗೂ ಮಗನ ಭೇಟಿ ಬಳಿಕ ನಟ ದರ್ಶನ್ ಅವರು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಹಾದಿ ತುಳಿದಿದ್ದಾರೆ.

ಕೊಡಗು ಜಿಲ್ಲೆಯ ಫಾರ್ಮ್ ಹೌಸ್‌ವೊಂದರಲ್ಲಿ ತಮ್ಮ ಆಪ್ತ ಸ್ನೇಹಿತರ ಜತೆ ಇದ್ದ ದರ್ಶನ್ ಅವರಿಗೆ ಜಾಮೀನು ರದ್ದು ವಿಚಾರ ತಿಳಿದು ಕನಲಿದ್ದಾರೆ. ಇತ್ತ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ಆರಂಭವಾದ ದಿನದಿಂದಲೂ ದರ್ಶನ್ ಹಾಗೂ ಅವರ ಸಹಚರರ ಚಲನವಲನಗಳ ಮೇಲೆ ಎಸಿಪಿ ಚಂದನ್ ಕುಮಾರ್‌ ನೇತೃತ್ವದ ತಂಡ ಕಣ್ಣಿಟ್ಟಿತ್ತು.

ಕೊಡಗಿನಲ್ಲಿ ದರ್ಶನ್ ಅವರ ಇರುವಿಕೆ ತಿಳಿದಿದ್ದ ಪೊಲೀಸರು, ಜಾಮೀನು ರದ್ದು ಆದೇಶ ಹೊರಬಿದ್ದ ಕೂಡಲೇ ದರ್ಶನ್ ಅವರಿಗೆ ಕರೆ ಮಾಡಿ ಬಂಧನ ವಿಚಾರ ತಿಳಿಸಿದ್ದಾರೆ. ತಕ್ಷಣ ಮಡಿಕೇರಿಯಿಂದ ಹೊರಟ ದರ್ಶನ್ ಅವರು ಸೀದಾ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಫ್ಲ್ಯಾಟ್‌ಗೆ ತೆರಳಿದರು. ಅಲ್ಲಿ ಪತ್ನಿ ಹಾಗೂ ಮಗನನ್ನು ಅಪ್ಪಿ ಭಾವುಕರಾಗಿ ಕಣ್ಣೀರಿಟ್ಟರು. ಇದೇ ವೇಳೆ ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‌ಪೆಕ್ಟರ್ ನಾಗೇಶ್ ನೇತೃತ್ವದ ತಂಡ ಬಂಧಿಸಿದೆ.

ಬಳಿಕ ಅಲ್ಲಿಂದ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದರ್ಶನ್ ಅವರನ್ನು ಕರೆತಂದರು. ಹ್ಯಾಟ್ ಧರಿಸಿದ್ದ ದರ್ಶನ್‌ ಅವರು ತಮ್ಮ ಭೇಟಿಗೆ ಠಾಣೆಗೆ ಬಂದ ಸೋದರ ದಿನಕರ್ ಕಡೆ ತಿರುಗಿ ಎಲ್ಲ ಮುಗಿಯಿತು ಎನ್ನುವಂತೆ ಭಾವನೆ ವ್ಯಕ್ತಪಡಿಸಿ ತೆರಳಿದರು.