ಗದಗದಲ್ಲಿ ಈದ್ ಮಿಲಾದ್ ಹಬ್ಬದಂದು ಕಾರಿನ ಮೇಲೆ ಪಾಕಿಸ್ತಾನದ ಧ್ವಜ ಪ್ರದರ್ಶಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ದೇಶದ್ರೋಹದ ಆರೋಪ ಕೇಳಿಬಂದಿದೆ.

ಗದಗ (ಸೆ.11):ಕಾರೊಂದರ ಬಾನೆಟ್ ಮೇಲೆ ಪಾಕಿಸ್ತಾನ ಧ್ವಜ ಪ್ರದರ್ಶಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ನಗರ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ.

ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು , ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಹಸೀನ್ ಎಂಬಾತ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಾರಿನ ಬಾನೆಟ್ ಮೇಲೆ ಪಾಕಿಸ್ತಾನ ಧ್ವಜವನ್ನು ಪ್ರದರ್ಶಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾನೆ. ಈ ಫೋಟೋದಲ್ಲಿ ಇಸ್ಲಾಂ ಧರ್ಮದ ಬಾವುಟದ ಜೊತೆಗೆ ಪಾಕಿಸ್ತಾನ ಧ್ವಜದ ಚಿತ್ರವು ಸ್ಪಷ್ಟವಾಗಿ ಕಂಡುಬಂದಿದ್ದು, ಇದು ದೇಶದ ಸಾರ್ವಭೌಮತ್ವಕ್ಕೆ ವಿರೋಧ ಎಂದು ಆರೋಪಿಸಲಾಗಿದೆ.

ಈ ಪೋಸ್ಟ್ ಅನ್ನು ಅಬ್ದುಲ್ ಎಂಬಾತ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮತ್ತೊಮ್ಮೆ ಹಂಚಿಕೊಂಡು, ವ್ಯಾಪಕವಾಗಿ ಹರಡುವಂತೆ ಮಾಡಿದ್ದಾನೆ. ಘಟನೆಯು ಹಬ್ಬದ ದಿನ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯರು ಈ ಕೃತ್ಯವನ್ನು ದೇಶವಿರೋಧಿ ಎಂದು ಕಟುವಾಗಿ ಖಂಡಿಸಿದ್ದಾರೆ. ಇದು ನಮ್ಮ ರಾಷ್ಟ್ರೀಯ ಭಾವನೆಗಳನ್ನು ಧಿಕ್ಕರಿಸುವಂತಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ299, 353(2) ಮತ್ತು 3/5ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.