ಕೊಪ್ಪಳದಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿ ಸಾಧಿಕ್ ಸೇರಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಕೊಲೆಗೆ ಮುನ್ನ ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಮಚ್ಚು ಹಿಡಿದು ರೀಲ್ಸ್ ಅಪ್‌ಲೋಡ್ ಮಾಡಿದ್ದ.
ಕೊಪ್ಪಳ (ಆ.4): ಮುಸ್ಲಿಂ ಯುವತಿಯನ್ನು ಪ್ರೀತಿಸಿದ ವಿಚಾರಕ್ಕೆ ಹಿಂದೂ ಯುವಕ ಗವಿಸಿದ್ದಪ್ಪನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಪ್ಪಳ ನಗರದ ವಾರ್ಡ್ ನಂಬರ್ 3ರ ಮಸೀದಿ ಮುಂಭಾಗದಲ್ಲಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.
ಆರೋಪಿ ಸಾಧಿಕ್ ಸೇರಿದಂತೆ ನಾಲ್ವರ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ. ಗವಿಸಿದ್ದಪ್ಪನ ತಂದೆ ನಿಂಗಜ್ಜ ದೂರು ದಾಖಲಿಸಿದ್ದು, ಸಾಧಿಕ್ ಮತ್ತು ಇತರ ಮೂವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ.
ದೂರಿನ ಪ್ರಕಾರ, ಗವಿಸಿದ್ದಪ್ಪ ಕೆಲ ವರ್ಷಗಳ ಹಿಂದೆ ಶಾಂತಿ ಆಗ್ರೋದಲ್ಲಿ ಕೆಲಸ ಮಾಡುತ್ತಿದ್ದಾಗ, ಅಲ್ಲಿಯೇ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವತಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಇದೇ ಯುವತಿಯನ್ನು ಸಾದಿಕ್ ಮದುವೆಯಾಗುತ್ತಿದ್ದ ವಿಷಯ ಗೊತ್ತಾಗಿದೆ. ತಾನು ಮದುವೆಯಾಗಲಿರುವ ಹುಡುಗಿಯನ್ನ ಗವಿಸಿದ್ದಪ್ಪ ಪ್ರೀತಿಸುವ ವಿಚಾರ ತಿಳಿದು ಸಾಧಿಕ್ ಮತ್ತು ಇತರರು ಗವಿಸಿದ್ದಪ್ಪನ ಮೇಲೆ ಕೋಪಗೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೊಲೆಗೆ ಮುನ್ನ ರೀಲ್ಸ್‌ನಲ್ಲಿ ಸುಳಿವು:
ಆರೋಪಿ ಸಾಧಿಕ್ ಕೊಲೆಗೂ ಮುನ್ನ ಇನ್ಸ್ಟಾಗ್ರಾಮ್‌ನಲ್ಲಿ ಮಚ್ಚು ಹಿಡಿದು ಹಿಂದಿ ಹಾಡಿನೊಂದಿಗೆ ರೀಲ್ಸ್ ಅಪ್‌ಲೋಡ್ ಮಾಡಿದ್ದಾನೆ. ಸಾಧಿಕ್‌ನ ರೀಲ್ಸ್‌ನಲ್ಲಿ ಕೊಲೆಗೆ ಸಂಬಂಧಿಸಿದ ಸುಳಿವು ಇದ್ದರೂ, ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರ ನಿರ್ಲಕ್ಷ್ಯದಿಂದಲೇ ಕೊಲೆ ನಡೆಯಿತಾ? ಎಂಬುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
ಕೊಂದು ಪೊಲೀಸರಿಗೆ ಶರಣಾದ ಹಂತಕ:
ಕೊಲೆಯಾದ ಸ್ಥಳದಲ್ಲಿ ಎರಡು ಮಚ್ಚುಗಳು ಪತ್ತೆಯಾಗಿದ್ದು, ಸಾಧಿಕ್ ಬೈಕ್‌ನಲ್ಲಿ ಬಂದು ಗವಿಸಿದ್ದಪ್ಪನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಸಾಧಿಕ್ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ. ಕೊಪ್ಪಳ ನಗರ ಠಾಣೆಯಲ್ಲಿ ಸಾಧಿಕ್ ಮತ್ತು ಇತರ ಮೂವರ ವಿರುದ್ಧ BNS 2023 ಸೆಕ್ಷನ್ 103(1) ಮತ್ತು SC/ST ಕಾಯ್ದೆ 1989ರ ಕಲಂ 3(2)V ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕರ ಭೇಟಿ: ಕೊಲೆಯಾದ ಗವಿಸಿದ್ದಪ್ಪನ ಕುಟುಂಬಕ್ಕೆ ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಗವಿಸಿದ್ದಪ್ಪನ ಚಿಕ್ಕಪ್ಪ ಯಮನೂರಪ್ಪ ನಾಯಕ್ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು, ಶಾಸಕರ ಆಪ್ತರಾಗಿದ್ದಾರೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಕೊಲೆಯ ಹಿಂದಿನ ಇತರ ಕಾರಣಗಳ ಬಗ್ಗೆಯೂ ತಿಳಿಯಲು ಪ್ರಯತ್ನಿಸುತ್ತಿದ್ದಾರೆ.


