ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣ ಸಂಬಂಧ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರ ಪಾಲಿಗೆ ಉತ್ತರಪ್ರದೇಶದ ಪ್ರಯಾಗರಾಜ್ನ ‘ಮಹಾ ಕುಂಭಮೇಳ ಯಾತ್ರೆ’ಗೆ ತೆರಳಿದ್ದ ವಿಮಾನದ ಟಿಕೆಟ್ಗಳೇ ಕಂಟಕವಾಗಿವೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಬೆಂಗಳೂರಿನ ಭಾರತೀನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣ ಸಂಬಂಧ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರ ಪಾಲಿಗೆ ಉತ್ತರಪ್ರದೇಶದ ಪ್ರಯಾಗರಾಜ್ನ ‘ಮಹಾ ಕುಂಭಮೇಳ ಯಾತ್ರೆ’ಗೆ ತೆರಳಿದ್ದ ವಿಮಾನದ ಟಿಕೆಟ್ಗಳೇ ಕಂಟಕವಾಗಿವೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.
ಈ ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಹಾಗೂ ಶಾಸಕರ ಆಪ್ತ ಎನ್ನಲಾದ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನ ಜತೆ ಬಸವರಾಜು ಒಡನಾಟಕ್ಕೆ ಕುಂಭಮೇಳ ಯಾತ್ರೆಯ ಟಿಕೆಟ್ಗಳನ್ನು ಪುರಾವೆಯಾಗಿ ನ್ಯಾಯಾಲಯಕ್ಕೆ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಅಧಿಕಾರಿಗಳು ಉಲ್ಲೇಖಿಸಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಬಿಕ್ಲು ಶಿವ ಕೊಲೆ ಸಂಬಂಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ನಲ್ಲಿ ಬೈರತಿ ಬಸವರಾಜು ಹೆಸರನ್ನು 5ನೇ ಆರೋಪಿ ಎಂದು ನಮೂದಿಸಲಾಗಿತ್ತು. ಈ ಹತ್ಯೆ ಬೆನ್ನಲ್ಲೇ ಪ್ರಮುಖ ಆರೋಪಿ ಜಗದೀಶ್ ಜತೆಗಿನ ಬಸವರಾಜು ಅವರ ಪೋಟೋಗಳು ವೈರಲ್ ಆಗಿದ್ದವು. ಆದರೆ ಈ ಸ್ನೇಹವನ್ನು ಬಲವಾಗಿ ಶಾಸಕರು ತಳ್ಳಿ ಹಾಕಿದ್ದರು. ತನಗೂ ಜಗದೀಶ್ಗೂ ಯಾವುದೇ ಸಂಬಂಧವಿಲ್ಲ. ನಾನು ಕುಂಭಮೇಳಕ್ಕೆ ಹೋದಾಗ ನನ್ನ ಕ್ಷೇತ್ರದ ಕೆಲವರು ಬಂದಿದ್ದರು. ಅವರೊಂದಿಗೆ ಜಗದೀಶ್ ಸಹ ಬಂದು ಫೋಟೋ ತೆಗೆಸಿಕೊಂಡಿರಬಹುದು ಎಂದಿದ್ದರು. ಆದರೆ ಈ ಪೋಟೋಗಳ ಮೂಲ ಸಿಐಡಿ ಕೆದಕಿದಾಗ ಶಾಸಕರ ಸ್ನೇಹಕ್ಕೆ ಪುರಾವೆ ಲಭಿಸಿದೆ ಎಂದು ಮೂಲಗಳು ಹೇಳಿವೆ.
ಒಂದೇ ಪಿಎನ್ಆರ್ನಲ್ಲಿ ಪಯಣ:
2025ರ ಫೆಬ್ರವರಿ ತಿಂಗಳಲ್ಲಿ ಪ್ರಯಾಗರಾಜ್ನ ಮಹಾಕುಂಭ ಮೇಳಕ್ಕೆ ಬಸವರಾಜು ತೆರಳಿದ್ದರು. ಕುಂಭ ಮೇಳದಲ್ಲಿ ಶಾಸಕರ ಜತೆ ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಗಳಾದ ಹೆಣ್ಣೂರು ಜಗದೀಶ್ ಹಾಗೂ ಅಜಿತ್ ಅಲಿಯಾಸ್ ಮಲೆಯಾಳಿ ಅಜಿತ್ ಸಹ ಕಾಣಿಸಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಕುಂಭಮೇಳ ಯಾತ್ರೆಯ ಪ್ರಯಾಣದ ಬಗ್ಗೆ ಪರಿಶೀಲಿಸಿದಾಗ ಟಿಕೆಟ್ಗಳು ಪತ್ತೆಯಾಗಿವೆ.
ಯಲಹಂಕ ಸಮೀಪದ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿ ಮೂಲಕ ಪ್ರಯಾಗ್ರಾಜ್ಗೆ ಒಂದೇ ಪಿಎನ್ಆರ್ ನಂಬರ್ನಲ್ಲಿ ಶಾಸಕ ಬಸವರಾಜು ಸೇರಿ ಅವರ ತಂಡದ ಆರು ಮಂದಿಗೆ ಟಿಕೆಟ್ ಬುಕ್ ಆಗಿತ್ತು. ಈ 6 ಮಂದಿ ಪೈಕಿ ಜಗ್ಗ ಸಹ ಇದ್ದ. ತನಗೆ ಪರಿಚಯವೇ ಇಲ್ಲದ ವ್ಯಕ್ತಿ ಜತೆ ಶಾಸಕರು ಪ್ರಯಾಣಿಸಿದ್ದು ಹೇಗೆ ಎಂಬುದು ಸಿಐಡಿ ಪ್ರಶ್ನೆ.
ಈ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ಸಿಐಡಿ ಅಧಿಕಾರಿಗಳು ತಂದಿದ್ದರು ಎಂದು ಮೂಲಗಳು ಹೇಳಿವೆ.
ಟಿಕೆಟ್ ಬುಕ್ ಮಾಡಿದ್ದು ಜಗ್ಗ?
ಇನ್ನು ಪ್ರಯಾಗ್ ರಾಜ್ಗೆ ತೆರಳಲು ಬೈರತಿ ಬಸವರಾಜು ಅವರಿಗೆ ಜಗ್ಗನೇ ಮುತುವರ್ಜಿ ವಹಿಸಿ ಟಿಕೆಟ್ ಬುಕ್ ಮಾಡಿಸಿದ್ದ ಎಂದು ತಿಳಿದು ಬಂದಿದೆ. ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ ಕಿತ್ತಗನೂರಿನಲ್ಲಿ ಸರ್ವೆ ನಂ.212ರ ಭೂಮಿ ವಿಚಾರವಾಗಿ ಜಗ್ಗ ಹಾಗೂ ಬಿಕ್ಲು ಶಿವನ ಮಧ್ಯೆ ವಿವಾದವಾಗಿತ್ತು. ಈ ಭೂ ವಿವಾದ ಹಿನ್ನೆಲೆಯಲ್ಲೇ ಬಿಕ್ಲು ಹತ್ಯೆ ಸಹ ಆಗಿದೆ. ಈ ಭೂಮಿ ವಿಚಾರವಾಗಿ ರಿಯಲ್ ಎಸ್ಟೇಟ್ ಉದ್ಯಮಿ ಪರ ಜಗ್ಗ ನಿಂತಿದ್ದ. ಹೀಗಾಗಿ ಈ ಉದ್ಯಮಿ ಮೂಲಕ ಪ್ರಯಾಗ್ರಾಜ್ ಪ್ರಯಾಣದ ಖುರ್ಚು ವೆಚ್ಚವನ್ನು ಜಗ್ಗ ಭರಿಸಿದ್ದ ಎಂದು ಮೂಲಗಳು ಹೇಳಿವೆ.
ಬರ್ತ್ ಡೇ ಪಾರ್ಟಿಯಲ್ಲಿ ಶಾಸಕರು:
ಶಾಸಕ ಬಸವರಾಜು ಅವರಿಗೆ ಜಗ್ಗನ ಜತೆ ಆತ್ಮೀಯತೆಗೆ ಮತ್ತಷ್ಟು ಪುರಾವೆಗಳನ್ನು ಸಿಐಡಿ ಸಂಗ್ರಹಿಸಿದೆ. ಶಾಸಕ ಬಸವರಾಜು ಹುಟ್ಟುಹಬ್ಬ ಆಚರಣೆಗೆ ಸಾರ್ವಜನಿಕ ಕಾರ್ಯಕ್ರಮವನ್ನು ಮುಂದೆ ನಿಂತು ಜಗ್ಗ ಆಯೋಜಿಸುತ್ತಿದ್ದ. ಅಲ್ಲದೆ, ಜಗ್ಗನ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಶಾಸಕರು ಕಾಣಿಸಿಕೊಂಡಿದ್ದರು. ಈ ಪಾರ್ಟಿಗಳ ಪೋಟೋಗಳು ಶಾಸಕರಿಗೆ ಮುಳ್ಳಾಗಿವೆ ಎನ್ನಲಾಗಿದೆ.
ಬಿಕ್ಲು ಶಿವನ ಹತ್ಯೆ ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ನರಸಿಂಹ, ಮುರುಗೇಶ್, ಸುದರ್ಶನ ಹಾಗೂ ಅವಿನಾಶ್ ದಿನ್ನಹಳ್ಳಿ ಬಂಧಿತರಾಗಿದ್ದರು. ಈ ನಾಲ್ವರು ಸಹ ಈ ಹಿಂದೆ ಶಾಸಕರ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಜಗ್ಗನ ಶಿಷ್ಯ ಕಿರಣ್ ಆಹ್ವಾನದ ಮೇರೆಗೆ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.


