ರಾಮನಗರದ ವಾಜರಹಳ್ಳಿಯಲ್ಲಿ ಜೋರಾಗಿ ಕೆಮ್ಮಿದ್ದಕ್ಕೆ ನೆರೆಮನೆಯವರಿಂದ ಹಲ್ಲೆಗೊಳಗಾದ ರಾಜಸ್ಥಾನ ಮೂಲದ ಯುವಕ ಸಾವನ್ನಪ್ಪಿದ್ದಾನೆ. ಚಿಕಿತ್ಸೆ ಫಲಿಸದೆ ವಿನೋದ್ ಕುಮಾರ್ ಜೈನ್ ಮೃತಪಟ್ಟಿದ್ದು, ಆರೋಪಿ ಹೊಂಬಯ್ಯ ಮತ್ತು ಆತನ ಕುಟುಂಬ ತಲೆಮರೆಸಿಕೊಂಡಿದೆ.

ರಾಮನಗರ (ಫೆ.11): ಸಣ್ಣ ವಿಚಾರಕ್ಕೆ ಮನುಷ್ಯ ಎಷ್ಟು ವಿಕೃತನಾಗಬಲ್ಲ ಎಂಬುದಕ್ಕೆ ರಾಮನಗರದಲ್ಲಿ ನಡೆದ ಈ ಆಘಾತಕಾರಿ ಘಟನೆಯೇ ಸಾಕ್ಷಿ. ಜೋರಾಗಿ ಕೆಮ್ಮಿದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ನೆರೆಮನೆ ವ್ಯಕ್ತಿ ನಡೆಸಿದ ಮನಸೋ ಇಚ್ಛೆ ಹಲ್ಲೆಯಿಂದಾಗಿ ರಾಜಸ್ಥಾನ ಮೂಲದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

ವಾಜರಹಳ್ಳಿಯಲ್ಲಿ ಕೆಮ್ಮಿನ ವಿಚಾರಕ್ಕೆ ಕಿರಿಕ್

ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ವಾಜರಹಳ್ಳಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ಮೃತಪಟ್ಟ ವ್ಯಕ್ತಿಯನ್ನು ರಾಜಸ್ಥಾನ ಮೂಲದ ವಿನೋದ್ ಕುಮಾರ್ ಜೈನ್ (33) ಎಂದು ಗುರುತಿಸಲಾಗಿದೆ. ಬಿಡದಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ವಿನೋದ್, ವಾಜರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ನಿನ್ನೆ ರಾತ್ರಿ ವಿನೋದ್ ಮನೆಯಲ್ಲಿ ಜೋರಾಗಿ ಕೆಮ್ಮುತ್ತಿದ್ದರು ಎನ್ನಲಾಗಿದ್ದು, ಇದೇ ವಿಚಾರಕ್ಕೆ ಪಕ್ಕದ ಮನೆಯ ಹೊಂಬಯ್ಯ ಎಂಬಾತನಿಗೆ ಕಿರಿಕಿರಿಯಾಗಿದೆ. ಕೆಮ್ಮಿದ್ದಕ್ಕೆ ಕೋಪಗೊಂಡಿದ್ದಾನೆ.

ಕೆಮ್ಮಿದ್ದಕ್ಕೆ ವಿನೋದ್ ಮೇಲೆ ಮುಗಿಬಿದ್ದ ಹೊಂಬಯ್ಯ ಕುಟುಂಬ

ಪದೇ ಪದೇ ಜೋರಾಗಿ ಕೆಮ್ಮಿ ನಮಗೆ ತೊಂದರೆ ಕೊಡುತ್ತೀಯಾ? ಎಂದು ಕಿರಿಕ್ ತೆಗೆದ ಆರೋಪಿ ಹೊಂಬಯ್ಯ ಹಾಗೂ ಆತನ ಕುಟುಂಬಸ್ಥರು ವಿನೋದ್ ಮೇಲೆ ಏಕಾಏಕಿ ಮುಗಿಬಿದ್ದಿದ್ದಾರೆ. ಒಂಟಿಯಾಗಿದ್ದ ವಿನೋದ್‌ನನ್ನು ಅಟ್ಟಾಡಿಸಿ, ಮನಸೋ ಇಚ್ಛೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿನೋದ್‌ನನ್ನು ತಕ್ಷಣವೇ ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಿಸದೆ ಯುವಕ ಸಾವು

ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿನೋದ್ ಕುಮಾರ್ ಜೈನ್, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಸಣ್ಣ ಕೆಮ್ಮಿನ ವಿಚಾರಕ್ಕೆ ಶುರುವಾದ ಜಗಳ ಈಗ ಕೊಲೆಯಲ್ಲಿ ಅಂತ್ಯವಾಗಿದ್ದು, ಉತ್ತರ ಭಾರತದ ಯುವಕನ ಕುಟುಂಬ ಈಗ ಬೀದಿಗೆ ಬಿದ್ದಿದೆ. ಹಲ್ಲೆ ಮಾಡಿದ ಹೊಂಬಯ್ಯ ಮತ್ತು ಆತನ ಮನೆಯವರು ಸದ್ಯ ತಲೆಮರೆಸಿಕೊಂಡಿದ್ದಾರೆ.

ಹಂತಕನಿಗಾಗಿ ಬಿಡದಿ ಪೊಲೀಸರ ಬಲೆ

ಘಟನೆಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಹೊಂಬಯ್ಯ ಮತ್ತು ಆತನ ಕುಟುಂಬಸ್ಥರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಬ್ಬ ಅನ್ಯರಾಜ್ಯದ ಯುವಕನ ಮೇಲೆ ಈ ರೀತಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಜೀವ ತೆಗೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

YouTube video player