ಅಂಕೋಲಾ ತಾಲೂಕಿನ ಬಾಳೆಗುಳಿ ಕ್ರಾಸ್‌ನಿಂದ ಯಲ್ಲಾಪುರದತ್ತ ಸಾಗುವ ತಿರುವಿನಲ್ಲಿ ನಿನ್ನೆ ತಡರಾತ್ರಿ 12:30ರ ಸುಮಾರಿಗೆ ಗಂಭೀರ ಘಟನೆಯೊಂದು ನಡೆದಿದೆ.
ಉತ್ತರಕನ್ನಡ (ಮೇ.3): ಅಂಕೋಲಾ ತಾಲೂಕಿನ ಬಾಳೆಗುಳಿ ಕ್ರಾಸ್‌ನಿಂದ ಯಲ್ಲಾಪುರದತ್ತ ಸಾಗುವ ತಿರುವಿನಲ್ಲಿ ನಿನ್ನೆ ತಡರಾತ್ರಿ 12:30ರ ಸುಮಾರಿಗೆ ಗಂಭೀರ ಘಟನೆಯೊಂದು ನಡೆದಿದೆ.
ಮಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಂಜುನಾಥ್ ಅವರ ಮುಂದೆ, ರಾಂಗ್ ರೂಟ್‌ನಲ್ಲಿ ಬೊಲೆರೋ ವಾಹನ ಚಲಾಯಿಸಿಕೊಂಡು ಬಂದ ಆರೋಪಿ ಪ್ರಶಾಂತ್ ಶಾಂತಪ್ಪ ದುಂಡನ್ನನವರ್ (ಹಾವೇರಿ, ಹಾನಗಲ್ ನಿವಾಸಿ) ಮಚ್ಚು ಝಳಪಳಿಸಿ ರೌಡಿಸಂ ತೋರಿಸಿದ ಘಟನೆ ಪ್ರಯಾಣಿಕರನ್ನೇ ಬೆಚ್ಚಿಬೀಳಿಸಿದೆ.
ಘಟನೆಯ ವಿವರ:
ಬಾಳೆಗುಳಿ ಕ್ರಾಸ್‌ನ ತಿರುವಿನಲ್ಲಿ ರಾಂಗ್ ರೂಟ್‌ನಲ್ಲಿ ಬಂದ ಬೊಲೆರೋ ವಾಹನದಿಂದಾಗಿ ಬಸ್‌ಗೆ ಅಪಘಾತದ ಸಾಧ್ಯತೆ ಎದುರಾಯಿತು. ಆದರೆ, ಚಾಲಕ ಮಂಜುನಾಥ್ ಅವರು ತಮ್ಮ ಕೌಶಲ್ಯದಿಂದ ಬಸ್‌ನ ಟಯರ್ ಚರಂಡಿಗೆ ಬೀಳುವುದನ್ನು ತಡೆದು, ಪಲ್ಟಿಯಾಗುವ ಅವಘಡವನ್ನು ತಪ್ಪಿಸಿದರು. ರಾಂಗ್ ರೂಟ್‌ನಲ್ಲಿ ಬಂದ ಬೊಲೆರೋ ಚಾಲಕ ಪ್ರಶಾಂತ್‌ನನ್ನು ಪ್ರಶ್ನಿಸಿದಾಗ, ತನ್ನ ತಪ್ಪನ್ನು ಒಪ್ಪಿಕೊಳ್ಳದೆ, ಮಚ್ಚು ಹಿಡಿದು ಇಳಿದು ಹಲ್ಲೆಗೆ ಮುಂದಾದ ಆರೋಪಿ.
ಇದನ್ನೂ ಓದಿ: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಹ ತ್ಯೆ; ದ.ಕ ಈಗ ನೆತ್ತರ ಕನ್ನಡ
ಮಚ್ಚಿನಿಂದ ಒಂದೇಟು ಬೀಸಿದ್ದರೂ ಜೀವಕ್ಕೆ ಹಾನಿಯಾಗಬಹುದಾದ ಸ್ಥಿತಿಯಲ್ಲೂ, 19 ವರ್ಷಗಳ ಕಾಲ ಕೆಎಸ್‌ಆರ್‌ಟಿಸಿ ಬಸ್ ಚಾಲಕನಾಗಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ್ ಧೈರ್ಯದಿಂದ ಆರೋಪಿಯನ್ನು ಎದುರಿದ್ದಾರೆ. ಈ ವೇಳೆ, ಸಿಟ್ಟಿಗೆದ್ದ ಪ್ರಯಾಣಿಕರು ಮತ್ತು ಇತರ ವಾಹನ ಚಾಲಕರು ಒಟ್ಟಾಗಿ ಆರೋಪಿ ಪ್ರಶಾಂತ್‌ಗೆ ಎರಡೇಟು ಬಿಗಿದಿದ್ದಾರೆ.
ಘಟನೆ ವಿವರ ಸಂಗ್ರಹಿಸಿದ ಪೊಲೀಸರು:
ಘಟನೆಯ ಬಗ್ಗೆ ಮಂಜುನಾಥ್ ಅವರು ಔಪಚಾರಿಕ ದೂರು ನೀಡದ ಕಾರಣ, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ, ಮಾಧ್ಯಮದ ಮೂಲಕ ತಿಳಿದ ಬಳಿಕ ಪೊಲೀಸರು ಮಂಜುನಾಥ್ ಮತ್ತು ಆರೋಪಿ ಪ್ರಶಾಂತ್‌ನಿಂದ ವಿವರಗಳನ್ನು ಸಂಗ್ರಹಿಸಿದ್ದಾರೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಹ ತ್ಯೆ ಪ್ರಕರಣ: ಹಂತಕರು ಬಳಸಿದ್ದ ವಾಹನಗಳು ಯಾರ ಮಾಲೀಕತ್ವದ್ದು ಗೊತ್ತಾ?
ಕಳೆದ 19 ವರ್ಷಗಳಿಂದ ಮಂಗಳೂರು ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್, ಮೂಲತಃ ಬಾದಾಮಿ ತಾಲೂಕಿನ ಬಡ ಕುಟುಂಬದವರು. ಈ ಘಟನೆಯಲ್ಲಿ ರೌಡಿ ಪ್ರಶಾಂತ್ ಮಚ್ಚು ಹಿಡಿದು ಹಲ್ಲೆಗೆ ಮುಂದಾದರೂ ಹೆದರದೇ ಧೈರ್ಯವಾಗಿ ಪುಂಡನ ವಿರುದ್ಧ ತಿರುಗಿಬಿದ್ದಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇಂಥ ರೌಡಿಸಂಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳುವಂತೆ, ರಸ್ತೆ ನಿಯಮಗಳನ್ನು ಬಿಗಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.


