ತಾನು ಹೆತ್ತ ಮಗ ತನ್ನ ಕಣ್ಣೆದುರಿಗೆ ಪೊಲೀಸ್ ಠಾಣೆಗೆ ಹೋದರೆ ಹೇಗೆ, ಆತನಿಗೆ ಪೊಲೀಸರು ಬಹಳ ಕಷ್ಟಕೊಟ್ಟು ಬಿಡ್ತಾರೆ ಎಂದು ತನ್ನ ಮಗನಿಗಾಗಿ ಮಮ್ಮಲ ಮರುಗಿದ್ದರು ಆ ತಾಯಿ. ಆದರೆ ಅದೇ ಮಗನಿಂದಲೇ ಬರ್ಭರವಾಗಿ ಹತ್ಯೆಯಾಗಿ ಬೀದಿ ಹೆಣವಾಗಿ ಹೋಗಿದ್ದಾಳೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.20): ತಾನು ಹೆತ್ತ ಮಗ ತನ್ನ ಕಣ್ಣೆದುರಿಗೆ ಪೊಲೀಸ್ ಠಾಣೆಗೆ ಹೋದರೆ ಹೇಗೆ, ಆತನಿಗೆ ಪೊಲೀಸರು ಬಹಳ ಕಷ್ಟಕೊಟ್ಟು ಬಿಡ್ತಾರೆ ಎಂದು ತನ್ನ ಮಗನಿಗಾಗಿ ಮಮ್ಮಲ ಮರುಗಿದ್ದರು ಆ ತಾಯಿ. ಆದರೆ ಅದೇ ಮಗನಿಂದಲೇ ಬರ್ಭರವಾಗಿ ಹತ್ಯೆಯಾಗಿ ಬೀದಿ ಹೆಣವಾಗಿ ಹೋಗಿದ್ದಾಳೆ. ಇಷ್ಟೊಂದು ಕರುಣಾಮಯಿಯಾದ ತಾಯಿಯನ್ನೇ ಆ ಪಾಪಿ ಮಗ ಹತ್ಯೆ ಮಾಡಿದ್ದೇಕೆ ನೀವೆ ಓದಿ. ಗಂಡು ಮಗನ ಯಾಕೆ ಹಡೆದೆ ನನ್ನವ್ವ. ಒಂದು ಕಣ್ಣು ಕಣ್ಣಲ್ಲ, ಒಬ್ಬ ಮಗನು ಮಗನಲ್ಲ ಎನ್ನುವ ಪ್ರಸಿದ್ಧ ಜಾನಪದ ಗೀತೆಯನ್ನು ನೀವೆಲ್ಲಾ ಕೇಳಿಯೇ ಇರುತ್ತೀರಾ ಅಲ್ವಾ. ಹೌದು ಗಂಡು ಮಕ್ಕಳಾದರೆ ಮುಪ್ಪಿನ ಕಾಲದಲ್ಲಿ ನಮ್ಮ ಕಷ್ಟ, ಸುಖ ನೋಡುತ್ತಾರೆ ಎನ್ನುವ ಮಹದಾಸೆಯಿಂದ ಆ ತಾಯಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಇಳಿವಯಸ್ಸಿನ ತಾಯಿಯನ್ನು ಕಣ್ಣಾಗಿ ನೋಡಿಕೊಳ್ಳಬೇಕಾದವನೇ ಆಕೆಯ ಜೀವವನ್ನು ತೆಗೆದಿದ್ದಾನೆ. 

ಹೌದು ಕೊಡಗು, ಮೈಸೂರು ಜಿಲ್ಲೆಗಳ ಗಡಿಭಾಗವಾದ ಪಿರಿಯಾಪಟ್ಟಣ ತಾಲ್ಲೂಕಿನ ನವಿಲೂರಿನಲ್ಲಿ ಹೆತ್ತ ತಾಯಿಯನ್ನೇ ಪಾಪಿ ಮಗ ಹಣಕ್ಕಾಗಿ ಹತ್ಯೆ ಮಾಡಿದ್ದಾನೆ. ನವಿಲೂರಿನ ತಮ್ಮಯ್ಯ, ಗೌರಮ್ಮ ಎಂಬುವವರು ಕೇವಲ ಒಂದು ಎಕರೆ ಜಮೀನಿನಲ್ಲಿ ಸಣ್ಣ ಗುಡಿಸಲು ಹಾಕಿಕೊಂಡು ಬದುಕು ದೂಡುತ್ತಿದ್ದವರು. ಗೌರಮ್ಮ ಒಬ್ಬ ಮಗ ಇದ್ದರೆ ಸಾಲದು ಅಂತ ಮೂವರಿಗೆ ಜನ್ಮಕೊಟ್ಟಿದ್ರು. ಎಲ್ಲರಿಗಿಂತ ಹಿರಿಯವನು ಇದೇ ಸ್ವಾಮಿ. ಇವನೇ ಒಂಭತ್ತು ತಿಂಗಳು ಹೆತ್ತು, ಹೊತ್ತು ಜನ್ಮವಿತ್ತ ತಾಯಿ ಎನ್ನುವುದನ್ನು ನೋಡದೆ ಭೀಕರವಾಗಿ ಕೊಲೆ ಮಾಡಿರುವ ಪಾಪಿ. ತಮ್ಮಯ್ಯ, ಗೌರಮ್ಮ ದಂಪತಿಯ ಹಿರಿಯ ಪುತ್ರ ಇದೇ ಪಾಪಿ ಸ್ವಾಮಿ. 

ಹತ್ತು ದಿನಗಳಲ್ಲಿ ಐದು ಜಾನುವಾರುಗಳ ಕೊಂದ ಹುಲಿ: ಅರಣ್ಯ ಇಲಾಖೆ ಕಾರ್ಯಾಚರಣೆ

ಮದುವೆಯಾಗಿ ಸಂಸಾರ ಕಟ್ಟಿಕೊಂಡು ಬೇರೆ ಬದುಕುತ್ತಿದ್ದರೂ ತನಗೆ ಹಣ ಕೊಡು, ಆಸ್ತಿಯಲ್ಲಿ ಪಾಲು ಕೊಡು ಅಂತ ತಂದೆ, ತಾಯಿಗಳೊಂದಿಗೆ ನಿತ್ಯ ಜಗಳವಾಡುತ್ತಿದ್ದನಂತೆ. ಕುಡಿದು ಬಂದು ಹೆತ್ತವರು ಎನ್ನುವುದನ್ನು ಮರೆತು ಮನಸ್ಸೋ ಇಚ್ಛೆ ಥಳಿಸುತ್ತಿದ್ದನಂತೆ. ಇತ್ತೀಚೆಗೆ ಗೌರಮ್ಮ ಅವರ ಪತಿ ತಮ್ಮಯ್ಯ ಉಬ್ಬಸ ಕಾಯಿಲೆಗೆ ಒಳಗಾಗಿದ್ದರು. ಹೀಗಾಗಿ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮನೆಯಲ್ಲಿದ್ದ ಹೋರಿಗಳನ್ನು 90 ಸಾವಿರಕ್ಕೆ ಮಾರಿದ್ದರಂತೆ. ಬಂದ ಹಣದಿಂದ ತಂದೆಗೆ ಚಿಕಿತ್ಸೆ ಕೊಡಿಸುತ್ತಿದ್ದರಂತೆ. ಆದರೆ ಈ ಪಾಪಿ ಸ್ವಾಮಿ ಈ ಹಣವನ್ನು ನನಗೆ ಕೊಡಿ ಅಂತ ಹಲವು ತಿಂಗಳಿನಿಂದ ಗಲಾಟೆ ಮಾಡುತ್ತಲೇ ಇದ್ದನಂತೆ. ಶನಿವಾರವೂ ಕೂಡ ಇದೇ ವಿಷಯ ಇಟ್ಟುಕೊಂಡು ತಂದೆ ತಾಯಿಗಳಿದ್ದ ಗುಡಿಸಲಿನ ಬಳಿಗೆ ಬಂದಿದ್ದ ಪಾಪಿ ತಾಯಿಗೆ ಹೊಡೆದಿದ್ದಾನೆ. 

ವಯಸ್ಸಾದ ತಾಯಿ ಗೌರಮ್ಮನ ಕಿವಿ, ಮೂಗು ಬಾಯಿಗಳಲ್ಲಿ ರಕ್ತ ಚಿಮ್ಮಿ ಅಲ್ಲಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಸ್ವಾಮಿ ತಂದೆ ತಾಯಿಗಳೊಂದಿಗೆ ಗಲಾಟೆ ಮಾಡುತ್ತಿರುವುದು ಇದೇ ಮೊದಲೇನಲ್ಲವಂತೆ. ಇಂತಹ ಮಗ ಯಾಕಾದರೂ ಹುಟ್ಟಿದನೋ ಎಂದು ಊರಿನವರೆಲ್ಲಾ ಬೈದುಕೊಳ್ಳುವಂತೆ ಯಾವಾಗಲೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದನಂತೆ. ಹೆತ್ತವರನ್ನು ಹಿಡಿದು ಬಡಿಯುತ್ತಿದ್ದನಂತೆ. ಇದರಿಂದ ಬೇಸತ್ತಿದ್ದ ಕಿರಿಯ ಮಗ ಸುರೇಶ ಬೈಲುಕೊಪ್ಪ ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದನಂತೆ. ಪಾಪ ಎಷ್ಟಾದರೂ ತಾಯಿ ಹೃದಯ ಅಲ್ಲವೆ. 

ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ ಮಡಿಕೇರಿಯ ಕೂರ್ಗ್ ವಿಲೇಜ್: ವಿಫಲಗೊಂಡ ಪ್ರವಾಸಿ ತಾಣ

ನನ್ನ ಕಣ್ಣೆದುರಿಗೆ ಮಗ ಪೊಲೀಸ್ ಠಾಣೆ ಮೆಟ್ಟಿಲೇರುವುದನ್ನು ನೋಡಲಾಗಲ್ಲ ಅಂತ ಕಿರಿಯ ಮಗನಿಗೆ ಹೇಳಿ ತಾಯಿ ಗೌರಮ್ಮನೇ ಕೇಸನ್ನು ವಾಪಸ್ ತೆಗೆಸಿದ್ದರಂತೆ. ಇಷ್ಟಾದರೂ ಬುದ್ಧಿ ಕಲಿಯದ ಪಾಪಿ ಕೊನೆಗೂ ಹಣಕ್ಕಾಗಿ ಹೆತ್ತ ತಾಯಿಯನ್ನೇ ಹೊಡೆದು ಕೊಂದಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೈಸೂರು ಎಸ್.ಪಿ. ವಿಷ್ಣುವರ್ಧನ್ ಮತ್ತು ಎಎಸ್ಪಿ ನಾಗೇಶ್ ಸ್ಥಳಕ್ಕೆ ರಾತ್ರೋ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಲುಕುಪ್ಪೆ ಠಾಣೆ ಪೊಲೀಸರು ಆರೋಪಿ ಸ್ವಾಮಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಏನೇ ಆಗಲಿ ಹಣಕ್ಕಾಗಿ ಹೆತ್ತ ತಾಯಿಯನ್ನು ಬರ್ಭರವಾಗಿ ಹತ್ಯೆ ಮಾಡಿ ‘ತಾಮ್ರದ ದುಡ್ಡು ತಾಯಿ ಮಕ್ಕಳನ್ನು ತೊರೆಸಿತು’ ಎನ್ನುವ ಗಾದೆ ಮಾತನ್ನು ಈ ಪಾಪಿ ಮಗ ಸ್ವಾಮಿ ಸಾಬೀತು ಮಾಡಿಬಿಟ್ಟಿದ್ದಾನೆ. ಇಂತಹ ಪಾಪಿಗಳಿಗೆ ಸರಿಯಾದ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬೇಕಾಗಿದೆ.