ರೀಲ್ಸ್​ ಮಾಡಲು ಸಮಯ ಸಿಗದೇ ಇಬ್ಬರು ಫಾಲೋವರ್ಸ್​ ಕಳೆದುಕೊಂಡ ಮಹಿಳೆಯೊಬ್ಬಳು ಪತಿಯ ವಿರುದ್ಧ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ನಡೆದಿದೆ. ಮುಂದೇನಾಯ್ತು ನೋಡಿ! 

ಮಹಿಳೆಯರು ದೌರ್ಜನ್ಯದ ಕೇಸ್​ ದಾಖಲು ಮಾಡಿ ಪತಿಯ ಮನೆಯವರ ವಿರುದ್ಧ ದೂರು ದಾಖಲು ಮಾಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ಇನ್​ಸ್ಟಾಗ್ರಾಮ್​ನಲ್ಲಿ ಇಬ್ಬರು ಫಾಲೋವರ್ಸ್ಸ್ ಕಡಿಮೆ ಆದ ಕಾರಣದಿಂದ ಗಂಡ ಮತ್ತು ಆತನ ಮನೆಯವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ! ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಪಿಲ್ಖುವಾ ಮೂಲದ ನಿಶಾ ಎಂಬ ಮಹಿಳೆ ಈಗ ಪತಿಯ ಮನೆಯವರ ವಿರುದ್ಧ ದೂರು ದಾಖಲಿಸಿದ್ದಾಳೆ. ಮನೆಗೆಲಸದ ನಡುವೆ ರೀಲ್ಸ್​ ಮಾಡಲು ಸಮಯವೇ ಸಿಗುತ್ತಿಲ್ಲವಾದ್ದರಿಂದ ಇಬ್ಬರು ಫಾಲೋವರ್ಸ್​ ಕಡಿಮೆ ಆಗಿದ್ದಾರೆ ಎನ್ನುವುದು ಆಕೆಯ ಆರೋಪ. ಪತಿ, ನೋಯ್ಡಾ ನಿವಾಸಿ ವಿಜೇಂದ್ರ ಅವರ ವಿರುದ್ಧ ಪತ್ನಿ ಸಿಡಿದೆದ್ದಿದ್ದಾಳೆ! ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಮಾಡುತ್ತಲೇ ಫೇಮಸ್​ ಆಗಿದ್ದ ನಿಶಾ, ತಮ್ಮ ಫಾಲೋವರ್‌ಗಳ ಸಂಖ್ಯೆಯಲ್ಲಿ ಕುಸಿತವನ್ನು ಗಮನಿಸಿ ನೋವಿನಿಂದ ದೂರು ದಾಖಲು ಮಾಡಿದ್ದಾರೆ.

ಪಾತ್ರೆ ತೊಳೆಯೋದು, ಅಡುಗೆ ಕೆಲಸದಲ್ಲಿಯೇ ಇರಬೇಕಾದ ಕಾರಣ ರೀಲ್ಸ್ ಮಾಡಲು ಸಮಯ ಸಿಗಲಿಲ್ಲ. ಇದರಿಂದ ಫಾಲೋವರ್ಸ್ ಕಳೆದುಕೊಂಡಿದ್ದೇನೆ. ಫಾಲೋವರ್ಸ್‌ ಕಳೆದುಕೊಳ್ಳಲು ಪತಿಯೇ ಕಾರಣ ಎಂದು ಆಕೆ ದೂರು ನೀಡಿದ್ದಾಳೆ. "ನನ್ನ ಗಂಡ ಪಾತ್ರೆ ತೊಳೆಯಲು ಮತ್ತು ಮನೆಯನ್ನು ಸ್ವಚ್ಛಗೊಳಿಸಲು ಹೇಳುತ್ತಿದ್ದನು. ಇದರಿಂದ ನನಗೆ ರೀಲ್ಸ್ ಮಾಡಲು ಸಮಯ ಸಿಗಲಿಲ್ಲ. ಹಾಗಾಗಿ ನನ್ನ ಫಾಲೋವರ್ಸ್ ಕಡಿಮೆಯಾದರು" ಎಂದು ನಿಶಾ ಪೊಲೀಸರಿಗೆ ತಿಳಿಸಿದಳು. ಪ್ರತಿದಿನ ಎರಡು ರೀಲ್ಸ್ ಮಾಡುತ್ತಿದ್ದೆ. ಆದರೆ ಈಗ ಕೆಲಸ ಹೆಚ್ಚಾಗಿರುವ ಕಾರಣದಿಂದ ರೀಲ್ಸ್​ ಮಾಡಲು ಟೈಮ್​ ಸಿಗುತ್ತಿಲ್ಲ ಎಂದು ಹೇಳಿದ್ದಾಳೆ.

ನಂತರ ಪೊಲೀಸರು ಪತಿ-ಪತ್ನಿ ಇಬ್ಬರೂ ಕರೆಸಿದಾಗ, ಪತಿ ಕೂಡ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾನೆ. ನಿಶಾ ಇತ್ತೀಚೆಗೆ ಯಾವಾಗಲೂ ಮೊಬೈಲ್​ನಲ್ಲಿಯೇ ಇರುತ್ತಿದ್ದಳು. ದಿನ ನಿತ್ಯ ರೀಲ್ಸ್‌ ಮಾಡಿ ಅದನ್ನು ಅಪ್ಲೋಡ್‌ ಮಾಡಿ ಅದಕ್ಕೆ ಬಂದ ಕಾಮೆಂಟ್‌ ನೋಡುವುದರಲ್ಲಿ ತಲ್ಲೀನಳಾಗಿದ್ದಳು. ಮನೆ ಕೆಲಸ ಮಕ್ಕಳ ಬಗ್ಗೆ ಅಷ್ಟಾಗಿ ಗಮನ ಹರಿಸುತ್ತಿರಲಿಲ್ಲ. ಇದರಿಂದ ಆಕೆಗೆ ಬುದ್ಧಿ ಹೇಳುತ್ತಿದ್ದೆ. ಇದೇ ಕಾರಣಕ್ಕೆ ಮನೆಯಲ್ಲಿ ಪ್ರತಿನಿತ್ಯ ಜಗಳವಾಗುತ್ತಿತ್ತು ಎಂದು ಹೇಳಿದ್ದಾನೆ. ಇಷ್ಟೆಲ್ಲಾ ಬುದ್ಧಿ ಹೇಳಿದ ಮೇಲೆ ಸಿಟ್ಟಿನಲ್ಲಿ ಪತ್ನಿ ನಿಶಾ ರೀಲ್ಸ್‌, ಸೋಷಿಯಲ್‌ ಮೀಡಿಯಾ ಬಳಕೆ ಸಮಯ ಕಡಿಮೆ ಮಾಡಿದಳು ಎಂದಿದ್ದಾನೆ.

ಆದರೆ ಇದರಿಂದ ಇಬ್ಬರು ಫಾಲೋವರ್ಸ್ ಕಡಿಮೆಯಾದರು ಎನ್ನುವುದು ಪತ್ನಿ ನಿಶಾ ದೂರು. ಇದರಿಂದ ಕೋಪಗೊಂಡ ನಿಶಾ ತನ್ನ ವಸ್ತುಗಳನ್ನು ತೆಗೆದುಕೊಂಡು ತವರು ಮನೆಗೆ ಹೋದಳು. ಹಾಪುರ್ ಜಿಲ್ಲೆಯ ಪಿಲ್ಖುವಾದಲ್ಲಿರುವ ತನ್ನ ತಾಯಿಯ ಮನೆಗೆ ಹೋದಳು. ಅಲ್ಲಿ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಗಂಡನ ವಿರುದ್ಧ ದೂರು ದಾಖಲಿಸಿದಳು. ಬಳಿಕ ಇಬ್ಬರ ಮಾತುಗಳನ್ನು ಕೇಳಿಸಿಕೊಂಡ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಅರುಣಾ ರೈ, ಸುಮಾರು ನಾಲ್ಕು ಗಂಟೆ ಇಬ್ಬರ ಮನವೊಲಿಸಿದರು. ದಾಂಪತ್ಯ ಜೀವನದ ಮಹತ್ವ ಮತ್ತು ಕುಟುಂಬದ ಬಗ್ಗೆ ಇಬ್ಬರಿಗೂ ಬುದ್ಧಿ ಹೇಳಿ ವಾಪಸ್‌ ಕಳುಹಿಸಿದ್ದಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡು, ಮನೆಗೆ ತೆರಳಿದ್ದಾರೆ. ಮುಂದೇನಾಗುತ್ತದೆಯೋ ಸದ್ಯ ಗೊತ್ತಿಲ್ಲ!