ಹೊಸ ವರ್ಷಕ್ಕೆ ಹೊಸ ಫಾಸ್ಟಾಗ್ ನೀತಿ, ಟೋಲ್ ಪ್ಲಾಜಾದಲ್ಲಿ ಗೇಟ್ ಇರಲ್ಲ,ಸ್ಲೋ ಮಾಡಬೇಕಿಲ್ಲ , ಕಾರು 80 ಕಿಲೋಮೀಟರ್ ವೇಗದಲ್ಲಿ ಟೋಲ್ ಗೇಟ್ ಮೂಲಕ ಪಾಸ್ ಆಗಬಹುದು. ಏನಿದು ಹೊಸ ವಿಧಾನ? ನಿತಿನ್ ಗಡ್ಕರಿ ಹೇಳಿದ್ದಾರೆ ನೋಡಿ.
ನವದೆಹಲಿ (ಡಿ.18) ಹೊಸ ವರ್ಷ ಸಮೀಪಿಸುತ್ತಿದೆ. ಇದರ ಜೊತೆಗೆ ಹಲವು ಹೊಸ ನೀತಿ ನಿಯಮಗಳು ಜಾರಿಯಾಗುತ್ತಿದೆ. ಈ ಪೈಕಿ ಫಾಸ್ಟ್ಯಾಗ್ ನೀತಿಯಲ್ಲೂ ಮಹತ್ತರ ಬದಲಾವಣೆಯಾಗುತ್ತಿದೆ. ಹೆದ್ದಾರಿ, ಎಕ್ಸ್ಪ್ರೆಸ್ ವೇ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಟೋಲ್ ಪ್ಲಾಜಾ ಮೂಲಕ ಪಾವತಿ ಮಾಡಿ ಸಾಗಬೇಕು. ವಾಹನಗಳಿಗೆ ಫಾಸ್ಟಾಗ್ ಕಡ್ಡಾಯ ಮಾಡಲಾಗಿದೆ. ಇವೆಲ್ಲವೂ ಹಳೇ ನಿಯಮ. ಆದರೆ 2026ರಲ್ಲಿ ಟೋಲ್ ಪ್ಲಾಜಾಗಳಲ್ಲಿನ ನೀತಿ ನಿಯಮಗಳಲ್ಲಿ ಹೊಸ ವೇಗ ತರಲಾಗಿದೆ. ಸದ್ಯ ಟೋಲ್ ಪ್ಲಾಜಾ ಬಳಿ ಸರದಿ ಸಾಲಿನಲ್ಲಿ ನಿಧಾನವಾಗಿ ವಾಹನ ಸಾಗಬೇಕು. ಫಾಸ್ಟಾಗ್ ಸ್ಕ್ಯಾನ್ ಆಗಿ ಪಾವತಿಯಾಗುತ್ತಿದ್ದಂತೆ ಟೋಲ್ ಗೇಟ್ ತೆರೆದುಕೊಳ್ಳಲಿದೆ. ವಾಹನ ಸಂಖ್ಯೆ ಹೆಚ್ಚಾದಂತೆ ಟೋಲ್ ಪ್ಲಾಜಾಗಳಲ್ಲಿ ಸಮಯವೂ ಹೆಚ್ಚಾಗಲಿದೆ. ಆದರೆ ಹೊಸ ವರ್ಷದಲ್ಲಿ ಹೀಗಲ್ಲ, ಟೋಲ್ ಪ್ಲಾಜಾ ಬಳಿ ಕಾರು ಸ್ಲೋ ಮಾಡಬೇಕಿಲ್ಲ, ಗೇಟ್ ತೆರೆಯುವ ವರೆಗೆ ಕಾಯಬೇಕಿಲ್ಲ. ಕಾರಣ ಟೋಲ್ ಪ್ಲಾಜಾದಲ್ಲಿ 80ರ ವೇಗದಲ್ಲಿ ಸಾಗಲು ಸಾಧ್ಯವಾಗಲಿದೆ.
ಸ್ಯಾಟಲೈಟ್ ಆಧಾರಿತ ಟೋಲ್ ಸಿಸ್ಟಮ್
ಹೊಸ ವರ್ಷದಲ್ಲಿ ಟೋಲ್ ಪ್ಲಾಜಾಗಳಲ್ಲಿರುವ ಕ್ಯಾಮೆರಾ, ಸ್ಕ್ಯಾನಿಂಗ್, ಪಾವತಿ ವ್ಯವಸ್ಥೆ ಬದಲಾಗುತ್ತಿದೆ. ಹೊಸ ವ್ಯವಸ್ಥೆಯಲ್ಲಿ ಹೈ ಸ್ಪೀಡ್ನಲ್ಲೂ ವಾಹನಗಳ ಫಾಸ್ಟಾಗ್, ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಬಲ್ಲ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತದೆ. ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ಒಂದೇ ಸಾರಿ ಹಲವು ಕಾರುಗಳು ಬಂದರೂ ಪ್ರತಿ ಕಾರುಗಳ ಸ್ಕ್ಯಾನ್ ಮಾಡಲು ಸಾಧ್ಯವಾಗಲಿದ. ಟೋಲ್ ಗೇಟ್ಗಳು ಇರುವುದಿಲ್ಲ. ವಾಹನಗಳು ಯಾವುದೇ ಅಡೆ ತಡೆ ಇಲ್ಲದೆ ಟೋಲ್ ಪ್ಲಾಜಾ ಮೂಲಕ ಸಾಗಬಹುದು. ಈ ವೇಳೆ ಹೈಸ್ಪೀಡ್ ಕ್ಯಾಮೆರಾ ಮೂಲಕ ಫಾಸ್ಟಾಗ್, ನಂಬರ್ ಪ್ಲೇಟ್ ಸ್ಕ್ಯಾನ್ ಆಗಲಿದೆ. ಈ ಮೂಲಕ ಆಟೋಮ್ಯಾಟಿಕ್ ಆಗಿ ಫಾಸ್ಟಾಗ್ ಖಾತೆಯಿಂದ ಹಣ ಕಡಿತಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇದು ಸ್ಯಾಟಲೈಟ್ ಆಧಾರಿತ ಟೋಲ್ ಸಿಸ್ಟಮ್ ಆಗಿದೆ. ಈ ಕುರಿತು ಮಾತನಾಡಿದ ನಿತಿನ್ ಗಡ್ಕರಿ, 2026ರಲ್ಲಿ ಟೋಲ್ ವ್ಯವಸ್ಥೆ ಬದಲಾಗಲಿದೆ. ಈ ಕುರಿತು ನಾನು ಭರವಸೆ ನೀಡುತ್ತಿದ್ದೇನೆ, ಟೋಲ್ ಪ್ಲಾಜಾ ಬರುತ್ತಿದ್ದಂತೆ ವಾಹನ ವೇಗ ಕಡಿಮೆ ಮಾಡಬೇಕಿಲ್ಲ. ವೇಗವಾಗಿ ಸಾಗಲು ಸಾಧ್ಯವಾಗಲಿದೆ. 80 ಕಿಲೋಮೀಟರ್ ವೇಗದಲ್ಲಿ ಟೋಲ್ ಪ್ಲಾಜಾ ದಾಟಬಹುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಇಂಧನ ಉಳಿತಾಯ, ಸರ್ಕಾರಕ್ಕೂ ಉಳಿತಾಯ
ಟೋಲ್ ಪ್ಲಾಜಾ ಬಳಿ ಸರದಿ ಸಾಲಿನಲ್ಲಿ ವಾಹನ ಸಾಗುವ ಕಾರಣ ಇಂಧನ ಖರ್ಚು ಹೆಚ್ಚಾಗಲಿದೆ. ವಾಹನದ ವೇಗ ಕಡಿತಗೊಳ್ಳಲಿದೆ, ಜೊತೆಗೆ ಹೆಚ್ಚಿನ ಸಂಚಾರ ದಟ್ಟಣೆ ಇದ್ದರೆ, ಟೋಲ್ ಪ್ಲಾಜಾಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯೂ ಎದುರಾಗಲಿದೆ. ಹೀಗಾಗಿ ಟೋಲ್ ಬಳಿ ಸೃಷ್ಟಿಯಾಗುವ ಟ್ರಾಫಿಕ್ ಜಾಮ್ಗಿಂದ ವಾರ್ಷಿಕವಾಗಿ 1,500 ಕೋಟಿ ರೂಪಾಯಿ ಇಂಧನ ಹೆಚ್ಚು ಖರ್ಚಾಗುತ್ತದೆ. ಆದರೆ ಹೊಸ ಟೋಲ್ ಪ್ಲಾಜಾ ನೀತಿಗಳಿಂದ ಇಂಧನ ಉಳಿತಾಯವಾಗಲಿದೆ. ಜೊತೆಗೆ ಸರ್ಕಾರದ ಬೊಕ್ಕಸಕ್ಕೆ 6,000 ಕೋಟಿ ರೂಪಾಯಿ ನೀಡಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ವೇಗ ಅತಿಯಾದರೆ ಅಲ್ಲೇ ಬೀಳುತ್ತೆ ದಂಡ
ವಿಶೇಷ ಅಂದರೆ ಹೆದ್ದಾರಿಯಲ್ಲಿ ನೀವು ನಿಗದಿತ ವೇಗಕ್ಕಿಂತ ವೇಗದಲ್ಲಿ ಸಾಗಿದರೆ ಅಂದರೆ ಒಂದು ಟೋಲ್ ಪ್ಲಾಜದಿಂದ ಮತ್ತೊಂದು ಟೋಲ್ ಪ್ಲಾಜೆಗೆ ತಲುಪಿದ ಸಮಯ ಹಾಗೂ ನಿಮ್ಮ ವೇಗದಲ್ಲಿ ನಿಯಮ ಉಲ್ಲಂಘನೆಯಾದರೆ ಅಲ್ಲಿ ಬೀಳುತ್ತೆ ದಂಡ. ಎಲ್ಲಾ ವ್ಯವಸ್ಥೆಗಳ ಟೋಲ್ ಪ್ಲಾಜಾ ಹಾಗೂ ಹೊಸ ಪದ್ಧತಿಯೂ ಜಾರಿಯಾಗುವ ಸಾಧ್ಯತೆ ಇದೆ.


