ಕಳೆದ 15 ವರ್ಷಗಳಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 17 ಲಕ್ಷ ಮಕ್ಕಳ ದಾಖಲಾತಿ ಕುಸಿದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಆಂಗ್ಲ ಮಾಧ್ಯಮದತ್ತ ಒಲವು, ವಲಸೆ ಮತ್ತು ಖಾಸಗಿ ಶಾಲೆಗಳ ಹೆಚ್ಚಳವೇ ಇದಕ್ಕೆ ಕಾರಣವಾಗಿದ್ದು, ದಾಖಲಾತಿ ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ವಿಧಾನಸಭೆ: ಕಳೆದ 15 ವರ್ಷಗಳಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ 17 ಲಕ್ಷ ದಷ್ಟು(ಶೇ.30) ಕಡಿಮೆಯಾಗಿರುವುದು ನಿಜ ಎಂದು ರಾಜ್ಯ ಸರ್ಕಾರ ಸದನದಲ್ಲೇ ಒಪ್ಪಿಕೊಂಡಿದೆ. ಅಲ್ಲದೆ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆ ರೀತಿಯಲ್ಲಿ ಮಕ್ಕಳ ದಾಖಲಾತಿ ಕುಸಿತವೂ ಸೇರಿ ಶಾಲಾ ಶಿಕ್ಷಣದ ಸಮಸ್ಯೆಗಳೂ ಗಂಭೀರವಾದವಾಗಿದ್ದು ಈ ಬಗ್ಗೆ ಸವಿವರವಾಗಿ ಚರ್ಚಿಸಲು ಒಂದು ದಿನ ವಿಶೇಷ ಕಾಲಾವಕಾಶ ನಿಗದಿಗೆ ವಿವಿಧ ಸದಸ್ಯರು ಮನವಿ ಮಾಡಿದ್ದು, ಇದಕ್ಕೆ ಸ್ಪೀಕರ್ ಸಮ್ಮತಿಸಿದರು.
ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಕಲಾಪ ವೇಳೆ ಮಾಜಿ ಶಿಕ್ಷಣ ಸಚಿವರೂ ಆದ ಬಿಜೆಪಿ ಸದಸ್ಯ ಎಸ್.ಸುರೇಶ್ ಕುಮಾರ್ ಅವರು ಕೇಳಿರುವ ‘ಶಿಕ್ಷಣ ಇಲಾಖೆಯ 10-15 ವರ್ಷಗಳ ಶೈಕ್ಷಣಿಕ ಮಾಹಿತಿ ವಿಶ್ಲೇಷಣಾ ವರದಿಗಳನ್ನು ಅವಲೋಕಿಸಿದಾಗ 15 ವರ್ಷಗಳಲ್ಲಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ 17 ಲಕ್ಷ ಕುಸಿದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ‘ಹೌದು ಬಂದಿದೆ’ ಎಂದು ಉತ್ತರ ನೀಡಿದ್ದಾರೆ.
ದಾಖಲಾತಿ ಕುಸಿತಕ್ಕೆ ಕಾರಣಗಳೇನು
ಅಲ್ಲದೆ, ದಾಖಲಾತಿ ಕುಸಿತಕ್ಕೆ ಕಾರಣಗಳೇನು ಎಂಬ ಪ್ರಶ್ನೆಗೆ, ಆಂಗ್ಲ ಮಾಧ್ಯಮ ಶಿಕ್ಷಣ, ಕೇಂದ್ರೀಯ ಪಠ್ಯಕ್ರಮದತ್ತ ಪೋಷಕರ ಒಲವು, ಪೋಷಕರ/ವಿದ್ಯಾರ್ಥಿಗಳ ವಲಸೆ ಮತ್ತು ಹೆಚ್ಚು ಸಂಖ್ಯೆಯ ಖಾಸಗಿ ಶಾಲೆಗಳು ರಾಜ್ಯದಲ್ಲಿ ಸ್ಥಾಪನೆಯಾಗುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿರುವುದಕ್ಕೆ ಕಾರಣ ಎಂದು ಸಚಿವರು ಉತ್ತರ ನೀಡಿದ್ದಾರೆ.
ಉಳಿದಂತೆ ದಾಖಲಾತಿ ಹೆಚ್ಚು ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತ ಪ್ರಶ್ನೆಗೆ, ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ವಿತರಣಾ ಸೌಲಭ್ಯಗಳ ಜೊತೆಗೆ ತಾವು ಅಧಿಕಾರಕ್ಕೆ ಬಂದ ಬಳಿಕ ಕೈಗೊಂಡಿರುವ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲೂ ಪ್ರತಿ 3 ತಿಂಗಳಿಗೊಮ್ಮೆ ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಚರ್ಚಿಸುವುದು, ಗ್ರಾಪಂಗೊಂದು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ ಅಲ್ಲಿ ಎಲ್ಕೆಜಿಯಿಂದ 12ನೇ ತರಗತಿ ವರೆಗೆ ಒಂದೇ ಕಡೆ ಶಿಕ್ಷಣ ಒದಗಿಸುವ ಗುರಿ ಇದ್ದು, ಸದ್ಯ 900 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. 9500ಕ್ಕೂ ಹೆಚ್ಚು ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮವನ್ನೂ ಆರಂಭಿಸಿರುವುದು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ಕೈಗೊಂಡಿರುವ ಸುಧಾರಣಾ ಕ್ರಮಗಳು ಸೇರಿ ಅನೇಕ ವಿಚಾರಗಳನ್ನು ಉತ್ತರದಲ್ಲಿ ನೀಡಿದ್ದಾರೆ.
ಕೆಸೆಟ್ನಲ್ಲಿ ತಪ್ಪಾಗಿ ಒಳಮೀಸಲಾತಿ ಕ್ಲೇಮ್, ಪರಿಶೀಲನೆ ಬಳಿಕ ಕ್ರಮ: ಕೆಇಎ
ಬೆಂಗಳೂರು: ಕೆಸೆಟ್ 2025ರ ಪರೀಕ್ಷೆಯ ಒಳಮೀಸಲಾತಿಯ ತಪ್ಪಾದ ಕ್ಲೇಮುಗಳಿಗೆ ಸಂಬಂಧಿಸಿದಂತೆ ದಾಖಲೆ ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ಎಚ್. ಪ್ರಸನ್ನ ಸ್ಪಷ್ಟಪಡಿಸಿದ್ದಾರೆ. ‘ಅಭ್ಯರ್ಥಿಗಳು ಕ್ಲೇಮ್ ಮಾಡಿರುವ ಒಳ ಮೀಸಲಾತಿ (ಎಸ್.ಸಿ ಎ, ಎಸ್.ಸಿ ಬಿ, ಎಸ್.ಸಿ ಸಿ) ಆಧಾರದ ಮೇಲೆಯೇ ದಾಖಲೆಗಳನ್ನು ಪರಿಶೀಲಿಸಿ, ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ಕೆಲವರು ಎಸ್.ಸಿ ಎ ಬದಲಿಗೆ ಎಸ್.ಸಿ ಬಿ ಹಾಗೂ ಎಸ್.ಸಿ ಸಿ ಎಂದು ತಪ್ಪಾಗಿ ನಮೂದಿಸಿರುವುದಾಗಿ ಹೇಳುತ್ತಿದ್ದು, ಈ ಕುರಿತು ಪರಿಶೀಲಿಸಲಾಗುವುದು’ ಎಂದು ಪ್ರಸನ್ನ ತಿಳಿಸಿದ್ದಾರೆ.
ಆ.22ರಂದು ಕೆಸೆಟ್ ಅಧಿಸೂಚನೆ ಹೊರಡಿಸಿತ್ತು. ಆ.25ರಂದು ಸಮಾಜ ಕಲ್ಯಾಣ ಇಲಾಖೆಯು ಒಳಮೀಸಲಾತಿ ಜಾರಿ ಸಂಬಂಧ ಆದೇಶ ಹೊರಡಿಸಿತ್ತು. ನಂತರ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಜತೆಗೂ ಮಾತುಕತೆ ನಡೆಸಿ, ಆರ್ಡಿ ಸಂಖ್ಯೆ ಇರುವ ಪ್ರಮಾಣ ಪತ್ರಗಳ ಲಭ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ, ಆರ್ಡಿ ಸಂಖ್ಯೆಯ ಅಲಭ್ಯತೆ ವಿಚಾರವಾಗಿ ಕೆಲವರು ತಪ್ಪು ಮಾಹಿತಿ ಹಾಕಿರುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ, ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಪ್ರಸನ್ನ ಹೇಳಿದ್ದಾರೆ.

