10ನೇ ತರಗತಿಯಲ್ಲಿ ಟಾಪರ್ ಆಗಿದ್ದಕ್ಕೆ ತನ್ನ ಮುಖದ ಮೇಲಿನ ಕೂದಲಿನ ಕಾರಣಕ್ಕೆ ಟ್ರೋಲ್ ಆಗಿದ್ದ ಪ್ರಾಚಿ ನಿಗಮ್, ಇದೀಗ ಪಿಯುಸಿಯಲ್ಲೂ 91.2% ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಟ್ರೋಲ್‌ಗಳನ್ನು ಕಡೆಗಣಿಸಿ, ಅಧ್ಯಯನದತ್ತ ಗಮನಹರಿಸಿದ ಅವರ ಯಶೋಗಾಥೆ ಅನೇಕರಿಗೆ ಸ್ಫೂರ್ತಿಯಾಗಿದೆ.

ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳದೇ ಶೈಕ್ಷಣಿಕ ಶಿಖರವೇರಿದ ಸೀತಾಪುರದ ಸುಪುತ್ರಿ.

ಉತ್ತರ ಪ್ರದೇಶದ ವಿದ್ಯಾರ್ಥಿನಿ ಪ್ರಾಚಿ ನಿಗಮ್ ಯಾರಿಗೆ ಗೊತ್ತಿಲ್ಲ ಹೇಳಿ. 10ನೇ ತರಗತಿಯಲ್ಲಿ ಅತ್ಯುತ್ತಮವಾಗಿ ಸ್ಕೋರ್‌ ಮಾಡಿ ಸಾಧನೆ ಮಾಡಿದವರು ಪ್ರಾಚಿ ನಿಗಮ್. ಆದರೆ ಕೆಲವು ಕಿಡಿಗೇಡಿಗಳು ಆಕೆಯನ್ನು ಗುರುತಿಸಿದ್ದು ಆಕೆಯ ಸಾಧನೆಯ ಬದಲಾಗಿ ಆಕೆಯ ಮುಖದ ಮೇಲಿದ್ದ ಅತೀಯಾದ ಕೂದಲಿನ ಕಾರಣಕ್ಕೆ. ಆದರೆ ತಮ್ಮ ಉತ್ತಮ ಅಂಕಕ್ಕೆ ಶ್ಲಾಘಿಸದೇ ತಮ್ಮನ್ನು ಟ್ರೋಲ್ ಮಾಡಿದ ನೆಟ್ಟಿಗರಿಗೆ ಆಕೆ ಅಂಕಗಳಿಂದಲೇ ತಿರುಗೇಟು ನೀಡಿದ್ದರು. ಹೌದು ಎರಡು ವರ್ಷಗಳ ಹಿಂದೆ 10ನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಟಾಪರ್ ಆಗಿರುವ ಪ್ರಾಚಿ ಈಗ ಉತ್ತರ ಪ್ರದೇಶ ಪಿಯು ಬೋರ್ಡ್ ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ಪಾಸಾಗುವ ಮೂಲಕ ಟ್ರೋಲಿಗರಿಗೆ ಉತ್ತರ ನೀಡಿದ್ದಾರೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಾಚಿ ನಿಗಮ್ ಅವರು 91.2 ಶೇಕಡಾ ಅಂಕ ಗಳಿಸಿದ್ದಾರೆ.

ಉತ್ತರ ಪ್ರದೇಶದ ಸೀತಾಪುರ ಮೂಲದವರಾದ ಪ್ರಾಚೀ ನಿಗಮ್ ಅವರು ತಮ್ಮ ನೋಟದ ಬಗ್ಗೆ ಸೋಶಿಯಲ್ ಮೀಡಿಯಾದ ಟ್ರೋಲ್‌ಗಳನ್ನೆಲ್ಲಾ ಕಡೆಗಣಿಸಿ ತಮ್ಮ ಗುರಿಯನ್ನು ಅಧ್ಯಯನದತ್ತ ಕೇಂದ್ರಿಕರಿಸಿದ್ದು, ಮತ್ತೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಗಣಿತದಲ್ಲಿ 99 ಅಂಕ, ಹಿಂದಿಯಲ್ಲಿ 96 ಹಾಗೂ ರಸಾಯನಶಾಸ್ತ್ರದಲ್ಲಿ 95 ಹಾಗೂ ಭೌತಶಾಸ್ತ್ರದಲ್ಲಿ 93 ಅಂಕ ಗಳಿಸಿದ್ದು, ಮುಂದೆ ಎಂಜಿನಿಯರ್ ಪ್ರವೇಶ ಪರೀಕ್ಷೆಗೆ ಸಿದ್ಧರಾಗಿದ್ದಾರೆ.

ಇದಕ್ಕೂ ಮೊದಲು ಅವರು 10ನೇ ತರಗತಿ ಪರೀಕ್ಷೆಯಲ್ಲಿ ಅವರು 600 ಅಂಕಗಳಲ್ಲಿ 591 ಅಂಕ ಗಳಿಸಿದ್ದಾರೆ. ಆದರೆ ಎಸ್‌ಎಸ್ಎಲ್‌ಸಿ ಫಲಿತಾಂಶದ ವೇಳೆ ಅವರು ಅನಗತ್ಯ ಕಾರಣಕ್ಕೆ ಟ್ರೋಲ್ ಆಗಿದ್ದರು. ಆದರೆ ಆಕೆ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಓದಿನತ್ತ ಗಮನಹರಿಸಿದ ಪರಿಣಾಮ ಆಕೆ ಈಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕ ಗಳಿಸುವ ಮೂಲಕ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಪರಿಚಿತ ಗನ್‌ಮ್ಯಾನ್‌ಗಳಿಂದ ಮುಂದುವರಿದ ಉಗ್ರರ ಬೇಟೆ: ಹಫೀಜ್ ಸಯೀದ್ ಆಪ್ತ ಸಹಚರ ಅಫ್ರಿದಿ ಗುಂಡಿಗೆ ಬಲಿ

ಮುಂದೆ ಇಂಜಿನಿಯರಿಂಗ್‌ನಲ್ಲಿ ಕೆರಿಯರ್ ಮುಂದುವರೆಸಲು ಬಯಸಿರುವ ಅವರು ಐಐಟಿ ಜೆಇಇಯತ್ತ ಗಮನ ಕೇಂದ್ರಿಕರಿಸಿದ್ದಾರೆ. ಅವರ ಈ ಪ್ರಯಾಣವು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆ, ನಿರಂತರತೆ ಹಾಗೂ ಸ್ಪೂರ್ತಿಯ ಸಂಕೇತವಾಗಿದೆ. ಶೈಕ್ಷಣಿಕ ಅರ್ಹತೆ ಆತ್ಮವಿಶ್ವಾಸದ ಮುಂದೆ ಈ ಡಿಜಿಟಲ್ ಟ್ರೋಲಿಂಗ್ ಏನು ಅಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ಅನಗತ್ಯ ಕಾರಣಕ್ಕೆ ಟ್ರೋಲ್ ಆಗಿದ್ದಕ್ಕೆ ಪ್ರಾಚಿ ಹೇಳಿದ್ದೇನು?

ಉತ್ತರ ಪ್ರದೇಶ ಪರೀಕ್ಷಾ ಬೋರ್ಡ್‌ ಫಲಿತಾಂಶ ಹೊರ ಬಂದಾಗ ನನ್ನ ಫೋಟೋ ವೈರಲ್ ಆಯ್ತು, ಅನೇಕರು ನನಗೆ ಟ್ರೋಲ್ ಮಾಡಿದರು. ಆದರೆ ಅದೇ ಸಮಯದಲ್ಲಿ ಅನೇಕರು ನನಗೆ ಬೆಂಬಲಿಸಿದರು ಅವರಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದು ಪ್ರಾಚಿ ಹೇಳಿದ್ದಾರೆ. ಜೊತೆಗೆ ದೇವರು ನನ್ನನ್ನು ಯಾವ ರೀತಿ ಸೃಷ್ಟಿಸಿದ್ದಾರೋ ಅದರ ಬಗ್ಗೆ ನನಗೆ ಬೇಸರವಿಲ್ಲ. ನನಗೆ ಅದರಲ್ಲಿ ತೃಪ್ತಿ ಇದೆ. ಚಾಣಕ್ಯನನ್ನೂ ಸಹ ಟ್ರೋಲ್ ಮಾಡಲಾಗಿತ್ತು ಆದರೆ ಅವನು ಅದನ್ನು ಲೆಕ್ಕಿಸಲಿಲ್ಲ, ನನ್ನಲ್ಲೇನೋ ವ್ಯತ್ಯಾಸವಿದೆ ಎಂದು ನೀವು ಭಾವಿಸಿದರೂ ಅದು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಪ್ರಾಚೀ ದಿಟ್ಟತನದ ಉತ್ತರ ನೀಡುವ ಮೂಲಕ ಎಲ್ಲರ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು.

ಅದೇನೆ ಇರಲಿ ಪ್ರಂಪಂಚದಲ್ಲಿ ವ್ಯಕ್ತಿತ್ವಕ್ಕಿಂತ ಬಾಹ್ಯ ಸೌಂದರ್ಯಕ್ಕೆ ಮರಳಾಗುವವರೆ ಹೆಚ್ಚು. ಆದರೆ ಕೊನೆಗೆ ಉಳಿಯುವುದು ನಾವು ಮಾಡಿದ ಸಾಧನೆಗಳು ಹಾಗೂ ವ್ಯಕ್ತಿತ್ವವೇ ಹೊರತು ಸೌಂದರ್ಯವಲ್ಲ ಎಂಬುದು ಅನೇಕರ ಅನುಭವಕ್ಕೆ ಬಂದಿರಬಹುದು.

ಇದನ್ನೂ ಓದಿ: ಮುಖಕ್ಕೆ ಕೇಕ್ ಹಚ್ಚಿದ್ದಕ್ಕೆ ಬಿತ್ತು ಮೂರು ಹೆಣ:ಮೂವರು ಸ್ನೇಹಿತರ ಮೇಲೆ ಗುಂಡಿನ ಮಳೆಗರೆದ ಬರ್ತ್‌ಡೇ ಬಾಯ್!