ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಮೊದಲೇ ಫಲಿತಾಂಶದ ಸಂಭಾವ್ಯ ದಿನಾಂಕವನ್ನು ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶ ಏಪ್ರಿಲ್‌ 7 ರಂದು, ಎಸ್ಸೆಸ್ಸೆಲ್ಸಿ ಪರೀಕ್ಷೆ 1ರ ಫಲಿತಾಂಶ ಏಪ್ರಿಲ್‌ 24ಕ್ಕೆ ಪ್ರಕಟಿಸುವ ಗುರಿ

ಬೆಂಗಳೂರು : ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಮೊದಲೇ ಫಲಿತಾಂಶದ ಸಂಭಾವ್ಯ ದಿನಾಂಕವನ್ನು ಪ್ರಕಟಿಸಿದೆ.

ಫೆ.28ರಿಂದ ಮಾರ್ಚ್‌ 17ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಇದೇ ಫೆ.28ರಿಂದ ಮಾರ್ಚ್‌ 17ರವರೆಗೆ ನಡೆಯಲಿರುವ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶವನ್ನು ಏಪ್ರಿಲ್‌ 7 ರಂದು ಹಾಗೂ ಮಾರ್ಚ್‌ 18ರಿಂದ ಏಪ್ರಿಲ್ 2ರವರೆಗೆ ನಿಗದಿಯಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರ ಫಲಿತಾಂಶವನ್ನು ಏಪ್ರಿಲ್‌ 24ಕ್ಕೆ ಪ್ರಕಟಿಸುವ ಗುರಿ ಇಟ್ಟುಕೊಂಡಿರುವುದಾಗಿ ಘೋಷಿಸಲಾಗಿದೆ.

ಪರೀಕ್ಷೆ 2ರ ಸಂಭಾವ್ಯ ಫಲಿತಾಂಶದ ದಿನಾಂಕವನ್ನೂ ಪ್ರಕಟಿಸಲಾಗಿದೆ

ಪರೀಕ್ಷೆ 1 ಮಾತ್ರವಲ್ಲದೆ ಪರೀಕ್ಷೆ 2ರ ಸಂಭಾವ್ಯ ಫಲಿತಾಂಶದ ದಿನಾಂಕವನ್ನೂ ಪ್ರಕಟಿಸಲಾಗಿದೆ. ಏಪ್ರಿಲ್‌ 25ರಿಂದ ಮಾರ್ಚ್‌ 9ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶವನ್ನು ಮೇ 22ರಂದು ಹಾಗೂ ಮೇ 18ರಿಂದ 25ರವರೆಗೆ ನಿಗದಿಯಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ -2ರ ಫಲಿತಾಂಶವನ್ನು ಜೂನ್‌ 1ಕ್ಕೆ ಪ್ರಕಟಿಸುವ ಸಂಭಾವ್ಯ ದಿನಾಂಕವನ್ನು ಘೋಷಿಸಲಾಗಿದೆ.

ಇದುವರೆಗೆ ಮಂಡಳಿಯು ತನ್ನ ಅನುಕೂಲಕ್ಕಾಗಿ ಸಂಭಾವ್ಯ ಫಲಿತಾಂಶದ ದಿನಾಂಕವನ್ನು ನಿಗದಿಪಡಿಸಿಕೊಳ್ಳುತ್ತಿದ್ದಾದರೂ ಅದನ್ನು ಮಾಧ್ಯಮಗಳ ಮೂಲಕ ಅಥವಾ ಸಾರ್ವನಿಕವಾಗಿ ಬಹಿರಂಗಪಡಿಸುತ್ತಿರಲಿಲ್ಲ. ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡು, ಫಲಿತಾಂಶವನ್ನು ಡಿಜಿಟಲೀಕರಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇಲಾಖಾ ಸಚಿವರ ಅನುಮತಿ ಪಡೆದು ಫಲಿತಾಂಶ ಪ್ರಕಟಣೆಗೆ ಅಂತಿಮ ದಿನಾಂಕ ನಿಗದಿಪಡಿಸಿ ಪ್ರಕಟಿಸಲಾಗುತ್ತಿತ್ತು. ಆದರೆ, ಈ ಬಾರಿ ಪರೀಕ್ಷೆ-1 ಮತ್ತು 2ರ ಮೊದಲೇ ಸಂಭಾವ್ಯ ಫಲಿತಾಂಶದ ದಿನಾಂಕವನ್ನೂ ಪ್ರಕಟಿಸಲಾಗಿದೆ.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ನೋಂದಣಿ, ಪರೀಕ್ಷೆಯ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ಇದೇ ಮೊದಲ ಬಾರಿಗೆ ಎರಡೂ ಪರೀಕ್ಷೆಗಳ ಸಂಭಾವ್ಯ ಫಲಿತಾಂಶದ ದಿನಾಂಕವನ್ನೂ ಘೋಷಿಸಿದರು.

ಎರಡೂ ಪರೀಕ್ಷೆಗಳಿಗೆ ಪ್ರತೀ ವರ್ಷ ತಲಾ ಮೂರು ಪರೀಕ್ಷೆಗಳನ್ನು ನಡೆಸಬೇಕಿರುವುದರಿಂದ ಮುಂದಿನ ಪರೀಕ್ಷೆಗಳಿಗೆ ತಡವಾಗಬಾರದು ಎಂದು ಫರೀಕ್ಷೆ1 ಮತ್ತು 2ರ ಫಲಿತಾಂಶ ಪ್ರಕಟಣೆಗೆ ಗುರಿ ಇಟ್ಟುಕೊಳ್ಳಲಾಗಿದೆ. ಮೌಲ್ಯಮಾಪನ ಪ್ರಕ್ರಿಯೆ, ಫಲಿತಾಂಶ ಡಿಜಿಟಲೀಕರಣ ಎಲ್ಲವು ಅಂದುಕೊಂಡಂತೆ ನಡೆದರೆ ಸಂಭಾವ್ಯ ದಿನಾಂಕವೇ ಫಲಿತಾಂಶ ಪ್ರಕಟಣೆಯ ಅಂತಿಮ ದಿನಾಂಕವೂ ಆಗಬಹುದು. ಒಂದು ವೇಳೆ ಪ್ರಕ್ರಿಯೆ ಬೇಗ ಮುಗಿದರೆ ಅಥವಾ ಕೊಂಚ ತಡವಾದರಲ್ಲಿ ಸಂಭಾವ್ಯ ದಿನಾಂಕದಲ್ಲಿ ವ್ಯತ್ಯಾಸ ಆಗಲೂ ಬಹುದು ಎಂದು ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.