ಪುಷ್ಪ ಫ್ರಾಂಚೈಸಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಅಲ್ಲು ಅರ್ಜುನ್, ಈ ಚಿತ್ರಕ್ಕಾಗಿ ಅಡ್ವಾನ್ಸ್ ಸಂಭಾವನೆಯನ್ನೇ ಪಡೆದಿರಲಿಲ್ಲ. ಬದಲಿಗೆ, ಸಿನಿಮಾ ಗಳಿಸಿದ ಲಾಭದಲ್ಲಿ ಪಾಲು ಪಡೆಯುವ ಒಪ್ಪಂದ ಮಾಡಿಕೊಂಡಿದ್ದರು. ಇದರ ಅಸಲಿ ಲೆಕ್ಕಾಚಾರ ಇಲ್ಲಿದೆ.
ಕಳೆದ ಎರಡು ದಶಕಗಳಿಂದ ಚಿತ್ರರಂಗದಲ್ಲಿದ್ದರೂ, ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರೂ, 'ಪುಷ್ಪ' ಫ್ರಾಂಚೈಸಿ ಅಲ್ಲು ಅರ್ಜುನ್ಗೆ ತಂದುಕೊಟ್ಟ ಯಶಸ್ಸು ಮಾತ್ರ ಸರಿಸಾಟಿಯಿಲ್ಲದ್ದು. ಅಲ್ಲಿಯವರೆಗೂ ದಕ್ಷಿಣ ಭಾರತದಲ್ಲಿ ಮಾತ್ರ ಜನಪ್ರಿಯರಾಗಿದ್ದ ಈ ನಟನನ್ನು ಉತ್ತರ ಭಾರತದ ಪ್ರೇಕ್ಷಕರು ಗುರುತಿಸಿದ್ದು 'ಪುಷ್ಪರಾಜ್' ಎಂಬ ಒಂದೇ ಪಾತ್ರದಿಂದ. ಈ ಪಾತ್ರಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿಕ್ಕ ಭರ್ಜರಿ ರೆಸ್ಪಾನ್ಸ್ನಿಂದಾಗಿ ಅಲ್ಲು ಅರ್ಜುನ್ ಅವರ ಸ್ಟಾರ್ಡಮ್ ಕೂಡ ಹಲವು ಪಟ್ಟು ಹೆಚ್ಚಾಯ್ತು.
ಹಾಗಿದ್ರೆ, ಇಷ್ಟೊಂದು ದೊಡ್ಡ ಹಿಟ್ ಆದ 'ಪುಷ್ಪ' ಫ್ರಾಂಚೈಸಿಗಾಗಿ ಅಲ್ಲು ಅರ್ಜುನ್ಗೆ ಸಿಕ್ಕ ಸಂಭಾವನೆ ಎಷ್ಟು? ಇತ್ತೀಚೆಗೆ ತಮಿಳು ನಿರ್ಮಾಪಕ ಜಿ. ಧನಂಜಯನ್ ಸಂದರ್ಶನವೊಂದರಲ್ಲಿ ಈ ಲೆಕ್ಕಾಚಾರವನ್ನು ಬಿಚ್ಚಿಟ್ಟಿದ್ದಾರೆ. 'ಪುಷ್ಪ' ಮೊದಲ ಭಾಗ ಭಾರತದಲ್ಲಿ ಗಳಿಸಿದ ನೆಟ್ ಕಲೆಕ್ಷನ್ 267.55 ಕೋಟಿ ರೂಪಾಯಿ. ವಿದೇಶದಿಂದ 36.3 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ವಿಶ್ವಾದ್ಯಂತ ಒಟ್ಟು 352 ಕೋಟಿ ರೂಪಾಯಿ ಗಳಿಸಿತ್ತು.
ಇನ್ನು, ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡ 'ಪುಷ್ಪ 2' ಭಾರತದಿಂದಲೇ 1265.97 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ವಿದೇಶದಿಂದ 292 ಕೋಟಿ ರೂಪಾಯಿ ಬಾಚಿಕೊಂಡಿದೆ. ಹೀಗೆ ಒಟ್ಟು 1727.23 ಕೋಟಿ ರೂಪಾಯಿ ಗಳಿಸಿದೆ. ಎರಡು ಚಿತ್ರಗಳಿಂದ 'ಪುಷ್ಪ' ಫ್ರಾಂಚೈಸಿ ಗಳಿಸಿದ್ದು ಬರೋಬ್ಬರಿ 2079.23 ಕೋಟಿ ರೂಪಾಯಿ. ಶಾರುಖ್ ಖಾನ್ ಸೇರಿದಂತೆ ಹಲವು ಸ್ಟಾರ್ ನಟರು ಮಾಡುವಂತೆ, ಅಲ್ಲು ಅರ್ಜುನ್ ಕೂಡ ಈ ಚಿತ್ರಕ್ಕೆ ಅಡ್ವಾನ್ಸ್ ಸಂಭಾವನೆ ಪಡೆದಿರಲಿಲ್ಲ.
ಲಾಭ ಹಂಚಿಕೆಯ ಒಪ್ಪಂದ
ಬದಲಿಗೆ, ತಮ್ಮ ವೃತ್ತಿಜೀವನವನ್ನೇ ಬದಲಿಸಿದ ಈ ಚಿತ್ರಕ್ಕಾಗಿ ಲಾಭ ಹಂಚಿಕೆಯ ಒಪ್ಪಂದ ಮಾಡಿಕೊಂಡಿದ್ದರು. ಕಲೆಕ್ಷನ್ನ ಪ್ರತಿ ಒಂದು ರೂಪಾಯಿಗೆ 30 ಪೈಸೆಯಂತೆ ಅಲ್ಲು ಅರ್ಜುನ್ಗೆ ಸಿಗುವ ಹಾಗೆ ಡೀಲ್ ಆಗಿತ್ತು. ಈ ಒಪ್ಪಂದದ ಪ್ರಕಾರ, 'ಪುಷ್ಪ' ಫ್ರಾಂಚೈಸಿ ಮೂಲಕ ಅಲ್ಲು ಅರ್ಜುನ್ಗೆ ಒಟ್ಟು 623.76 ಕೋಟಿ ರೂಪಾಯಿ ಸಿಕ್ಕಿದೆ ಎಂದು 'ಕೊಯ್ಮೊಯ್' ವರದಿ ಮಾಡಿದೆ. ಭಾರತದ ಬಹುತೇಕ ಬಿಗ್ ಬಜೆಟ್ ಸೂಪರ್ಸ್ಟಾರ್ ಚಿತ್ರಗಳಲ್ಲಿ ಈಗ ಇದೇ ಬಿಸಿನೆಸ್ ಮಾಡೆಲ್ ಟ್ರೆಂಡ್ ಆಗಿದೆ.
ಈಗಾಗಲೇ ದೊಡ್ಡ ಬಜೆಟ್ನಲ್ಲಿ ತಯಾರಾಗುವ ಚಿತ್ರಕ್ಕೆ ನಾಯಕನಿಗೆ ಮುಂಗಡವಾಗಿ ದೊಡ್ಡ ಮೊತ್ತದ ಸಂಭಾವನೆ ಕೊಡುವ ಹೊರೆ ನಿರ್ಮಾಪಕರಿಗೆ ತಪ್ಪುತ್ತದೆ. ಒಂದು ವೇಳೆ ಸಿನಿಮಾ ಸೋತರೆ ನಷ್ಟದ ಪ್ರಮಾಣವೂ ಕಡಿಮೆಯಾಗುತ್ತದೆ. ಸಿನಿಮಾ ಯಶಸ್ವಿಯಾದರೆ, ಅದರ ಲಾಭದಲ್ಲಿ ನಿಗದಿತ ಪಾಲನ್ನು ನಟನಿಗೆ ನೀಡಬಹುದು. 'ಪಠಾಣ್', 'ಜವಾನ್' ನಂತಹ ಚಿತ್ರಗಳಲ್ಲಿ ಶಾರುಖ್ ಖಾನ್ ಕೂಡ ಇದೇ ಮಾದರಿಯಲ್ಲಿ ಸಂಭಾವನೆ ಪಡೆದಿದ್ದರು.

