ರಜನಿಕಾಂತ್ ಸರ್ ಅವರನ್ನು ಭೇಟಿಯಾಗಿದ್ದು ನನ್ನ ಕನಸು ನನಸಾದ ಕ್ಷಣ. ಅವರ ಸರಳತೆ ಮತ್ತು ಸೌಜನ್ಯವನ್ನು ಕಂಡು ನಾನು ಮೂಕವಿಸ್ಮಿತನಾದೆ. ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ನನ್ನ ಈಜು ಪಯಣ, ನಾನು ಎದುರಿಸಿದ ಸವಾಲುಗಳು, ಪ್ಯಾರಾ ಕ್ರೀಡಾಪಟುವಾಗಿ ನನ್ನ ಸಾಧನೆಗಳು

ಬೆಂಗಳೂರು: ಭಾರತದ ಹೆಮ್ಮೆಯ ಪ್ಯಾರಾ ಈಜುಪಟು, ರಾಷ್ಟ್ರೀಯ ಪ್ರಶಸ್ತಿ (National Award) ಪುರಸ್ಕೃತ ಬೆಂಗಳೂರಿನ ನಿರಂಜನ್ ಮುಕುಂದನ್ (Niranjan Mukundan) ಅವರ ಬಹುದಿನಗಳ ಕನಸೊಂದು ನನಸಾಗಿದೆ. ತಮ್ಮ ಆರಾಧ್ಯ ದೈವ, ತಲೈವಾ ಎಂದೇ ಖ್ಯಾತರಾದ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಇತ್ತೀಚೆಗೆ ಮೈಸೂರಿನಲ್ಲಿ ಭೇಟಿಯಾಗಿ, ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಈ ಭೇಟಿಯ ಕುರಿತು ನಿರಂಜನ್ ಅವರು ತಮ್ಮ ಸಂತಸ ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಬಾಲ್ಯದ ಹೀರೋ ಜೊತೆ ಅಮೂಲ್ಯ ಕ್ಷಣಗಳು:

ಚಿಕ್ಕಂದಿನಿಂದಲೂ ರಜನಿಕಾಂತ್ ಅವರ ಪಕ್ಕಾ ಅಭಿಮಾನಿಯಾಗಿರುವ ನಿರಂಜನ್, ಅವರ 'ಬಾಷಾ' ಚಿತ್ರವನ್ನು 200ಕ್ಕೂ ಹೆಚ್ಚು ಬಾರಿ ನೋಡಿದ್ದಾರಂತೆ. ಅಂತಹ ಮಹಾನ್ ನಟನನ್ನು ಭೇಟಿಯಾಗುವುದು ಅವರ ಜೀವಮಾನದ ಕನಸಾಗಿತ್ತು. ಈ ಕನಸನ್ನು ನನಸು ಮಾಡಲು ಅವರು ಕಂಡುಕೊಂಡ ದಾರಿ ವಿಡಿಯೋ. ಅಂದರೆ, ನಿರಂಜನ್ ಮುಕುಂದನ್ ಅವರು ತಾವು ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಎಂಬುದನ್ನು ಹೇಳುವ ವಿಡಿಯೋ ಮಾಡಿ, ಅದನ್ನು ರಜನಿಕಾಂತ್ ಅವರಿಗೆ ತಲುಪುವಂತೆ ಮಾಡಿದ್ದಾರೆ. ಅದನ್ನು ನೋಡಿದ ನಟ ರಜನಿಕಾಂತ್ ಅವರು ಮೈಸೂರಿನಲ್ಲಿ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಸುಮಾರು 25 ರಿಂದ 30 ನಿಮಿಷಗಳ ಕಾಲ ನಡೆದ ಈ ಭೇಟಿಯ ಬಗ್ಗೆ ಮಾತನಾಡಿದ ನಿರಂಜನ್, "ರಜನಿಕಾಂತ್ ಸರ್ ಅವರನ್ನು ಭೇಟಿಯಾಗಿದ್ದು ನನ್ನ ಕನಸು ನನಸಾದ ಕ್ಷಣ. ಅವರ ಸರಳತೆ ಮತ್ತು ಸೌಜನ್ಯವನ್ನು ಕಂಡು ನಾನು ಮೂಕವಿಸ್ಮಿತನಾದೆ. ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ನನ್ನ ಈಜು ಪಯಣ, ನಾನು ಎದುರಿಸಿದ ಸವಾಲುಗಳು, ಪ್ಯಾರಾ ಕ್ರೀಡಾಪಟುವಾಗಿ ನನ್ನ ಸಾಧನೆಗಳು ಮತ್ತು ನನಗೆ ಸಂದ ರಾಷ್ಟ್ರೀಯ ಪ್ರಶಸ್ತಿ (National Award) ಬಗ್ಗೆ ಬಹಳ ಆಸಕ್ತಿಯಿಂದ ಕೇಳಿ ತಿಳಿದುಕೊಂಡರು" ಎಂದು ಹೇಳಿದರು.

ಬೆಂಗಳೂರಿನ ನಂಟು ಮತ್ತು ಸ್ಪೂರ್ತಿದಾಯಕ ಮಾತುಗಳು:

ನಿರಂಜನ್ ಅವರು ಬೆಂಗಳೂರಿನವರು ಎಂದು ತಿಳಿದಾಗ ರಜನಿಕಾಂತ್ ಅವರಿಗೆ ಇನ್ನಷ್ಟು ಸಂತೋಷವಾಯಿತು. ತಮಗೂ ಬೆಂಗಳೂರಿಗೂ ಇರುವ ಹಳೆಯ ನಂಟನ್ನು ನೆನಪಿಸಿಕೊಂಡ ಅವರು, ತಮ್ಮ ಹಿಂದಿನ ದಿನಗಳ ಬಗ್ಗೆ ಕೆಲ ಮಾತುಗಳನ್ನಾಡಿದರು. ನಿರಂಜನ್ ಅವರ ಸಾಧನೆಗಳನ್ನು ಕೇಳಿ ಬಹಳಷ್ಟು ಪ್ರಭಾವಿತರಾದ ರಜನಿಕಾಂತ್, ಅವರ ಹೋರಾಟದ ಮನೋಭಾವವನ್ನು ಶ್ಲಾಘಿಸಿದರು. "ನಿಮ್ಮಂತಹ ಯುವಕರು ದೇಶಕ್ಕೆ ಸ್ಪೂರ್ತಿ. ನಿಮ್ಮ ಸಾಧನೆ ನಿಜಕ್ಕೂ ದೊಡ್ಡದು," ಎಂದು ಬೆನ್ನುತಟ್ಟಿದ್ದಾರೆ.

ಈ ಸಂದರ್ಭದಲ್ಲಿ ನಿರಂಜನ್ ಅವರು ರಜನಿಕಾಂತ್ ಅವರಿಗೆ ತಾವು್ 100ನೇ ಅಂತರಾಷ್ಟ್ರೀಯ ಮೆಡಲ್‌ನಲ್ಲಿ ಗೆದ್ದಿರುವ ಸ್ವಿಮ್ ಕಪ್ (Swim Cup, 100th International Medal) ಅನ್ನು ಉಡುಗೊರೆಯಾಗಿ ನೀಡಿದರು. ಇದಕ್ಕೆ ಪ್ರತಿಯಾಗಿ, ರಜನಿಕಾಂತ್ ಅವರು ನೆನಪಿನ ಕಾಣಿಕೆಯನ್ನು ನಿರಂಜನ್ ಅವರಿಗೆ ನೀಡಿ ಹರಸಿದರು. 

ಈ ಭೇಟಿಯು ನನಗೆ ಹೊಸ ಚೈತನ್ಯ ಮತ್ತು ಪ್ರೇರಣೆಯನ್ನು ನೀಡಿದೆ. ಅವರ ಆಶೀರ್ವಾದ ಪಡೆದಿದ್ದು ನನ್ನ ಭಾಗ್ಯ. ಮುಂಬರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತರುವುದೇ ನನ್ನ ಮುಂದಿನ ಗುರಿ. ತಲೈವಾ ಅವರ ಮಾತುಗಳು ಆ ಗುರಿಯನ್ನು ತಲುಪಲು ನನಗೆ ಮತ್ತಷ್ಟು ಶಕ್ತಿ ನೀಡಿದೆ ಎಂದು ನಿರಂಜನ್ ಮುಕುಂದನ್ ಭಾವನಾತ್ಮಕವಾಗಿ ನುಡಿದರು.