ಮಲಯಾಳಂನ ದಿಗ್ಗಜ ನಟರಾದ ಮೋಹನ್ಲಾಲ್ ಮತ್ತು ಮಮ್ಮುಟ್ಟಿ ಅವರನ್ನು ಯಾಕೆ 'ಲೆಜೆಂಡ್ಸ್' ಎಂದು ಕರೆಯುತ್ತಾರೆ ಎಂಬುದರ ಬಗ್ಗೆ ಮಿಲನ ನಟಿ ಪಾರ್ವತಿ ತಿರುವೊತ್ತು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಮಲಯಾಳಂ ಚಿತ್ರರಂಗದ ದಂತಕಥೆಗಳು ಅಂದ್ರೆ ಅದು ಮಮ್ಮುಟ್ಟಿ ಮತ್ತು ಮೋಹನ್ಲಾಲ್. ಯಾವುದೇ ನಟ-ನಟಿಯರಿಗೆ ಅವರ ಜೊತೆ ಸಿನಿಮಾ ಮಾಡಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ನಟಿ ಪಾರ್ವತಿ ತಿರುವೊತ್ತು ಕೂಡ ಇಬ್ಬರ ಜೊತೆ ತಲಾ ಒಂದೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಸಿಬಿ ಮಲಯಿಲ್ ನಿರ್ದೇಶನದ 'ಫ್ಲ್ಯಾಶ್' ಚಿತ್ರದಲ್ಲಿ ಮೋಹನ್ಲಾಲ್ ಜೊತೆ ಮತ್ತು 'ಪುಳು' ಚಿತ್ರದಲ್ಲಿ ಮಮ್ಮುಟ್ಟಿ ಜೊತೆ ಪಾರ್ವತಿ ತೆರೆ ಹಂಚಿಕೊಂಡಿದ್ದರು. ಈಗ, ಮೋಹನ್ಲಾಲ್ ಮತ್ತು ಮಮ್ಮುಟ್ಟಿ ಅವರನ್ನು ಯಾಕೆ ಲೆಜೆಂಡ್ಸ್ ಅಂತ ಕರೆಯುತ್ತಾರೆ ಅನ್ನೋದಕ್ಕೆ ಪಾರ್ವತಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 'ಪಿಂಕ್ವಿಲ್ಲಾ'ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಪಾರ್ವತಿ ತಿರುವೊತ್ತು ಹೇಳಿದ್ದೇನು?
"ನಾನು ಮೋಹನ್ಲಾಲ್ ಜೊತೆ ಕೆಲಸ ಮಾಡಿದ್ದು ಬಹಳ ವರ್ಷಗಳ ಹಿಂದೆ. ಆಗ ನನಗೆ 19 ವರ್ಷ, ಈಗ 38. ಒಬ್ಬ ನಟನಾಗಿ ಪಾತ್ರದಿಂದ ಹೊರಬಂದು ಮತ್ತೆ ಪಾತ್ರಕ್ಕೆ ಹೋಗುವ ಅವರ ಪ್ರೆಸೆನ್ಸ್ ಆಫ್ ಮೈಂಡ್ ನೋಡಿ ನನಗೆ ಅಚ್ಚರಿಯಾಗಿತ್ತು. ಆ ಸೆಟ್ನಲ್ಲಿ ಜಗತಿ ಶ್ರೀಕುಮಾರ್ ಕೂಡ ಇದ್ದರು. ಅವರಿಬ್ಬರ ನಟನೆ ನೋಡಿದಾಗಲೇ ನನಗೊಬ್ಬ ನಟಿಯಾಗಿ ಇರಬೇಕಾದ ಕ್ವಾಲಿಟಿ ಯಾವುದು ಅಂತ ಅರ್ಥವಾಯ್ತು."
"ಈಗ ನಾನೂ ಕೂಡ ಹಾಗೆ ಪಾತ್ರಗಳ ನಡುವೆ ಸ್ವಿಚ್ ಆಗಬಲ್ಲೆ ಅಂತ ಹೆಮ್ಮೆಯಿಂದ ಹೇಳಿಕೊಳ್ತೀನಿ. ಅಷ್ಟೇ ಅಲ್ಲ, ಸೆಟ್ನಲ್ಲಿ ಜೊತೆಗಿರುವವರ ಬಗ್ಗೆ ಅವರು ತೋರಿಸುವ ಕಾಳಜಿ ಕೂಡ ಮುಖ್ಯ. ಈ ಲೆಜೆಂಡ್ಗಳು ಸೆಟ್ನಲ್ಲಿ ತುಂಬಾ ಒಳ್ಳೆಯ ಮನುಷ್ಯರಾಗಿರುತ್ತಾರೆ. ಎಷ್ಟು ಬಾಕ್ಸ್ ಆಫೀಸ್ ಹಿಟ್ ಕೊಟ್ಟಿದ್ದಾರೆ ಅನ್ನೋದು ಮುಖ್ಯವಲ್ಲ. ಅವರು ಕೆಟ್ಟ ವ್ಯಕ್ತಿಗಳಾಗಿದ್ದರೆ ಬೇರೆ ಯಾವುದಕ್ಕೂ ಬೆಲೆ ಇರಲ್ಲ. ಕೆಲ ನಟರನ್ನು ಜನ ಲೆಜೆಂಡ್ ಅಂತ ನೋಡೋಕೆ ಇದೇ ಕಾರಣ. ಅವರು ಸೆಟ್ಗೆ ಬಂದು, ಆ ಜಾಗವನ್ನು ಇನ್ನಷ್ಟು ಉತ್ತಮಗೊಳಿಸುತ್ತಾರೆ."
"ಮಮ್ಮುಟ್ಟಿ ಅವರೊಂದಿಗೂ ನನಗಾದ ಅನುಭವ ಇದೇ ರೀತಿ ಇತ್ತು. ಖಂಡಿತ, ಇಂಥವರು ಸೆಟ್ಗೆ ಬಂದಾಗ ಎಲ್ಲರೂ ಸೈಲೆಂಟ್ ಆಗ್ತಾರೆ. ಆದರೆ, ಅವರ ಮುಂದೆ ನಟಿಸುವಾಗ ಅವರು ಅಷ್ಟು ದೊಡ್ಡ ಲೆಜೆಂಡ್ಸ್ ಅನ್ನೋದನ್ನು ನಾವು ಮರೆಯಬೇಕು. ಇಲ್ಲದಿದ್ದರೆ ಒಟ್ಟಿಗೆ ನಟಿಸೋಕೆ ಹೇಗೆ ಸಾಧ್ಯ?"
"ಉದಾಹರಣೆಗೆ, ಒಂದು ಸೀನ್ನಲ್ಲಿ ನಾನು ಅವರಿಗೆ ಹೊಡೆಯಬೇಕಿದ್ದರೆ, ನಾನು ಅವರನ್ನೇ ಆಶ್ಚರ್ಯದಿಂದ ನೋಡ್ತಾ ನಿಂತ್ರೆ ಹೇಗೆ ಸಾಧ್ಯ? ಈ ಲೆಜೆಂಡ್ಸ್ ಮತ್ತು ಸೂಪರ್ಸ್ಟಾರ್ಗಳು ತಮ್ಮ ಕಲೆಗೆ ಅಥವಾ ತಾವು ಮಾಡುವ ಕೆಲಸಕ್ಕೆ ಯಾವುದೂ ಅಡ್ಡಿಯಾಗಲು ಬಿಡುವುದಿಲ್ಲ ಅನ್ನೋದು ನನಗೆ ಇಷ್ಟ. ನಾನು ಹೊಸಬಳಾಗಿರಬಹುದು, ಆದರೆ ಕ್ಯಾಮೆರಾ ಮುಂದೆ ನಾವಿಬ್ಬರೂ ಸಮಾನರು," ಎಂದು ಪಾರ್ವತಿ ವಿವರಿಸಿದ್ದಾರೆ.


