ಅಭಿಪ್ರಾಯ ಕೇಳಿದ್ರೆ ಪೊಲೀಸ್ ಕಂಪ್ಲೇಂಟ್ ಕೊಡ್ತೇನೆ ಎಂದು ಗದರಿಸಿದ್ದಾರೆ ಆ್ಯಂಕರ್ ಅನುಶ್ರೀ! ವಿಡಿಯೋ ವೈರಲ್ ಆಗಿದ್ದು, ಏನಿದು ನೋಡಿ.
ಆ್ಯಂಕರ್ ಅನುಶ್ರೀ ಎಂದರೆ ಸಾಕು, ಅವರ ಅಸಂಖ್ಯ ಅಭಿಮಾನಿಗಳಿಗೆ ಒಂದೇ ಚಿಂತೆ. ಅದು ಅವರ ಮದುವೆಯ ಬಗ್ಗೆ. ಅನುಶ್ರೀ ಅವರು ತಲೆ ಕೆಡಿಸಿಕೊಳ್ಳದಷ್ಟು ಹೆಚ್ಚು ತಲೆ ಕೆಡಿಸಿಕೊಂಡವರು ಅವರ ಫ್ಯಾನ್ಸ್. ಅಷ್ಟಕ್ಕೂ ಕೆಲ ದಿನಗಳ ಹಿಂದಷ್ಟೇ ಆ್ಯಂಕರ್ ಅನುಶ್ರೀ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದರು. ಇದೇ ವರ್ಷ ತಮ್ಮ ಮದುವೆ ಆಗುತ್ತದೆ ಎನ್ನುವ ಮೂಲಕ, ಹಲವು ವರ್ಷಗಳಿಂದ ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು. ನಟಿಯರಾದ ಮಲೈಕಾ ವಸುಪಾಲ್ ಮತ್ತು ನಾಗಭೂಷಣ್ ಅವರು ನಟಿಸಿರುವ ವಿದ್ಯಾಪತಿ ಸಿನಿಮಾ ರಿಲೀಸ್ಗೂ ಮೊದಲು, ಆ ಚಿತ್ರದ ಪ್ರಮೋಷನ್ಗಾಗಿ ನಟರು ಬಂದಿದ್ದಾಗ, ಅನುಶ್ರೀ ಅವರು, ಈ ವಿಷಯ ಬಹಿರಂಗಪಡಿಸಿದ್ದರು. ಮಲೈಕಾ ವಸುಪಾಲ್ ಅವರು ನಿಮ್ಮ ಗಂಡ ಹೇಗಿರಬೇಕು ಎಂದು ಪ್ರಶ್ನಿಸಿದ್ದರು. ಆಗ ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದರು. ಕೊನೆಗೆ ಮಲೈಕಾ ಅವರು ಯಾವಾಗ ಮದುವೆ ಎಂದು ಕೇಳಿದಾಗ, ಈ ವರ್ಷ 'ಅನುಪತಿ' ಬಂದೇ ಬರ್ತಾನೆ ಎಂದಿದ್ದರು.
ಅದರ ಬೆನ್ನಲ್ಲೇ ಅವರ ಮದುವೆ ಆಗ, ಈಗ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಇದೀಗ ಐಷಾರಾಮಿ ಕಾರು ಖರೀದಿ ಮಾಡಿರುವುದಾಗಿಯೂ ಸುದ್ದಿಯಾಗುತ್ತಿದೆ. ಇದರ ನಡುವೆಯೇ, ಅನುಶ್ರೀ ಅವರು ಕನ್ನಡದ ಡಬ್ಬಿಂಗ್ ವಿಷಯದಲ್ಲಿ ಅಭಿಪ್ರಾಯ ಕೇಳಿದ್ರೆ ಪೊಲೀಸ್ ಕಂಪ್ಲೇಂಟ್ ಕೊಡುವವರೆಗೆ ಹೋಗಿರುವ ಘಟನೆ ನಡೆದಿದೆ. ಅಷ್ಟಕ್ಕೂ ಇದು ಹೊಸ ವಿಡಿಯೋ ಅಲ್ಲ. ಬದಲಿಗೆ ಕನ್ನಡದ ಸಿನಿಮಾ ಡಬ್ಬಿಂಗ್ ವಿವಾದ ತಾರಕಕ್ಕೇರಿದ ಕೆಲ ವರ್ಷಗಳ ಹಿಂದಿನ ವಿಡಿಯೋ ಇದಾಗಿದೆ. ಈ ಸಮಯದಲ್ಲಿ ಆರ್ಜೆ ಸುನಿಲ್ ಅವರು ತಮಾಷೆಗೆ ಅನುಶ್ರೀ ಅವರಿಗೆ ಪ್ರಾಂಕ್ ಕಾಲ್ ಮಾಡಿದ್ದಾರೆ. ಕನ್ನಡ ಸಿನಿಮಾದ ಡಬ್ಬಿಂಗ್ ಪರವಾಗಿ ಮಾತನಾಡುವಂತೆ ಕೇಳಿಕೊಂಡಿದ್ದಾರೆ. ಇದರಿಂದ ಅನುಶ್ರೀ ಅವರಿಗೆ ಉರಿ ಹತ್ತಿದೆ. ಇಡೀ ಇಂಡಸ್ಟ್ರಿ ಇದರ ವಿರುದ್ಧವಾಗಿ ಇದ್ದರೆ ಇದೇನ್ರಿ ನೀವು ಹೀಗೆ ಹೇಳ್ತಾ ಇದ್ದೀರಾ ಎಂದಿದ್ದಾರೆ.
ಆದರೆ ಸುನಿಲ್ ಅವರು ಅಷ್ಟಕ್ಕೆ ಬಿಡದೇ 10 ಸೆಕೆಂಡ್ ರಿಯಾಕ್ಷನ್ ಕೊಡಿ ಎಂದಿದ್ದಾರೆ. ಅದಕ್ಕೆ ಅನುಶ್ರೀ 10 ಸೆಕೆಂಡ್ ಅಲ್ಲ, ದುಡ್ಡು ಕೊಡ್ತೇನೆ ಎಂದ್ರೂ ನಾನು ಹೇಳುವುದಿಲ್ಲ ಎಂದಿದ್ದಾರೆ. ಆದರೂ ಸುನಿಲ್ ಅವರು ಬಿಡದ ಹಿನ್ನೆಲೆಯಲ್ಲಿ, ಇನ್ನು ಹೆಚ್ಚು ಮಾತನಾಡಿದ್ರೆ ಪೊಲೀಸ್ ಕಂಪ್ಲೇಂಟ್ ಕೊಡ್ತೇನೆ ಎಂದು ಬೈದಿದ್ದಾರೆ. ಕೊನೆಗೆ ಸುನಿಲ್ ಅವರು ಇದು ಪ್ರಾಂಕ್ ಕಾಲ್ ಎಂದು ಹೇಳಿ ತಮ್ಮ ಪರಿಚಯ ಮಾಡಿಕೊಂಡಾಗ ಅನುಶ್ರೀ ಒಹ್ ಸಾರಿ ಎಂದಿದ್ದಾರೆ! ಒಟ್ಟಿನಲ್ಲಿ ಅನುಶ್ರೀ ಅವರೂ ಮೋಸಹೋದರು ಎಂದು ಹಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಎಲ್ಲರೂ ಕಾಯುತ್ತಿರುವ ಅನುಶ್ರೀ ಅವರ ಮದುವೆಯ ಕುರಿತು ಹೇಳುವುದಾದರೆ, ಈಚೆಗಷ್ಟೇ ಜೀ ಕನ್ನಡದ ಬ್ಯಾಚುಲರ್ಸ್ ಪಾರ್ಟಿ ಕಾರ್ಯಕ್ರಮದಲ್ಲಿ, ರವಿಚಂದ್ರನ್ ಅವರು ಅನುಶ್ರೀ ಮದ್ವೆ ಫಿಕ್ಸ್ ಆಗಿದೆ ಎಂದು ಹೇಳುವ ಮೂಲಕ ಹಿಂಟ್ ಕೊಟ್ಟಿದ್ದರು. ಅಷ್ಟಕ್ಕೂ, ರವಿಚಂದ್ರನ್ ಅವರು ಸೀರಿಯಸ್ ಆಗಿ ಇದನ್ನೇನೂ ಹೇಳಿದ್ದಲ್ಲ. ಭರ್ಜರಿ ಬ್ಯಾಚುಲರ್ಸ್ನ ಸುನೀಲ್ ಮತ್ತು ಅಮೃತಾ ಸಕತ್ ಹಾಟ್ ಆಗಿ ಡಾನ್ಸ್ ಮಾಡಿದರು. ಆ ಡಾನ್ಸ್ಗೆ ಮಳೆ ನೀರನ್ನು ಸುರಿಸಲಾಗಿತ್ತು. ನೃತ್ಯ ಮುಗಿಯುತ್ತಿದ್ದಂತೆ ಅಮೃತಾ ನನಗೆ ತುಂಬಾ ಚಳಿಯಾಗುತ್ತಿದೆ ಎಂದು ಹೇಳಿದರು. ಆಗ ಅಲ್ಲಿಯೇ ಇದ್ದ ಅನುಶ್ರೀ ನಿಮಗೆ ಚಳಿಯಾಗುತ್ತಿದೆ. ಆದರೆ, ನೋಡಿದವರಿಗೆ ಬಿಸಿಯಾಗುತ್ತಿದೆ ಎಂದು ಹೇಳಿದರು. ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದ ರವಿಚಂದ್ರನ್ ಅವರು, ಅನುಗೆ ಬಿಸಿ ಆಯ್ತು ಅಂದ್ರೆ ಮದುವೆ ಫಿಕ್ಸ್ ಆಯ್ತು ಅಂತ ಎಂದು ಈ ಸಂದರ್ಭದಲ್ಲಿ ಹೇಳಿದ್ದರು. ಆಗ ಅನುಶ್ರೀ ನಾಚಿ ನೀರಾಗಿದ್ದರು.



