ಶ್ರೀಮಸ್ತು ಶುಭಮಸ್ತು ದತ್ತ ತಾತಾನನ್ನು ತನ್ನ ಡಾರ್ಲಿಂಗ್ ಎಂದು ಪರಿಚಯಿಸಿದ ದೀಪಿಕಾ- ಹೀಗೆ ಹೇಳುತ್ತಿದ್ದಂತೆಯೇ ತಾತನ ರಿಯಾಕ್ಷನ್ ನೋಡಿ...
ಮೊಮ್ಮಗ ಸಮರ್ಥ್ ಗೆ ದಂಡಪಿಂಡ, ಅವನ ಹೆಂದತಿ ಸಿರಿಗೆ ಸೋಗಲಾಡಿ, ಮೊಮ್ಮಗಳು ಸಂಧ್ಯಾ ಓಡಿ ಹೋಗಿ ಮದುವೆಯಾಗಿರೋದ್ರಿಂದ ಆಕೆಗೆ ಓಡಿಹೋದೋಳೆ, ಅಭಿಗೆ ಉತ್ತರ ಕುಮಾರ, ಅವಿಗೆ ಮುಂಗೋಪಿ, ಇನ್ನು ಪೂರ್ಣಿಗೆ ಗಿರ್ ಗಿಟ್ಲೆ, ಮಾಧವನಿಗೆ ಚಪ್ಪಲ್ ಕಳ್ಳ... ಹೀಗೆ ಎಲ್ಲಾ ಪಾತ್ರಗಳಿಗೂ ತಮ್ಮದೇ ಹೆಸರಿಡೋ ಮೂಲಕ ಆ ಪಾತ್ರದ ನಿಜ ಹೆಸರುಗಳನ್ನೇ ಮರೆಸಿದಂತಹ ಪಾತ್ರ ಅಂದ್ರೆ ಅದು ಶ್ರೀರಸ್ತು ಶುಭಮಸ್ತು ದತ್ತ ತಾತನದ್ದು. ತಾತನ ಪಾತ್ರದ ಮೂಲಕ ಜೀವತುಂಬ್ತಿರೋ ನಟನ ಹೆಸರು ವೆಂಕಟ ರಾವ್ (Venkat Rao) .ಇಳಿ ವಯಸ್ಸಿನಲ್ಲೂ ಬಹಳಷ್ಟು ಆತ್ವವಿಶ್ವಾಸದಿಂದ ಈ ಪಾತ್ರ ನಿರ್ವಹಿಸುತ್ತಿರುವ ನಟ ವೆಂಕಟರಾವ್ ತಮ್ಮ ಪಾತ್ರದ ಮೂಲಕ ಹಲವಾರು ಹಿರಿಯರಿಗೆ ಸ್ಫೂರ್ತಿಯಾಗಿದ್ದಾರೆ.ಪಾತ್ರ ಎಂದಿಗೂ ಪಾತ್ರವೇ. ಅದು ನಟ, ನಟಿ, ಪೋಷಕ ಯಾವುದಾದರೂ ಆಗಿರಬಹುದು ಎನ್ನುತ್ತಲೇ ಎಂಥ ಪಾತ್ರಕ್ಕೂ ಸೈ ಎನ್ನಿಸಿಕೊಳ್ಳುತ್ತಿದ್ದಾರೆ ವೆಂಕಟ ರಾವ್.
ಇದೀಗ ಶ್ರೀರಸ್ತು ಶುಭಮಸ್ತು ತಂಡವು ಶೂಟಿಂಗ್ ಸ್ಪಾಟ್ನಲ್ಲಿ ದತ್ತ ತಾತನನ್ನು ನನ್ನ ಡಾರ್ಲಿಂಗ್ ಎಂದು ಪರಿಚಯ ಮಾಡಿಸಿದ್ದಾಳೆ ದೀಪಿಕಾ. ದೀಪಿಕಾ ಬಗ್ಗೆ ಸೀರಿಯಲ್ ಪ್ರಿಯರಿಗೆ ತಿಳಿದೇ ಇದೆ. ಇಷ್ಟು ದಿನ ನೆಗೆಟಿವ್ ಷೇಡ್ನಲ್ಲಿ ಕಾಣಿಸಿಕೊಳ್ತಿದ್ದ ದೀಪಿಕಾ ಈಗ ಒಳ್ಳೆಯವಳಾಗಿದ್ದಾಳೆ. ಎಲ್ಲರ ಪ್ರೀತಿ ಗಳಿಸುತ್ತಿದ್ದಾಳೆ. ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ರೋಲ್ಗಳಿಂದ ಮನ ಗೆದ್ದಿರುವ ಇವರ ನಿಜವಾದ ಹೆಸರು ದರ್ಶಿನಿ ಡೆಲ್ಟಾ. ದರ್ಶಿನಿ ಕುರಿತು ಹೇಳುವುದಾದರೆ, ಇವರು ನಟಿಯಾಗೋ ಮೊದಲು ಮಾಡೆಲ್ (Model), ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.
ಇದೀಗ ಇವರು ಶೂಟಿಂಗ್ ಸೆಟ್ನಲ್ಲಿ ವೆಂಕಟ್ ರಾವ್ ಅವರನ್ನು ನನ್ನ ಡಾರ್ಲಿಂಗ್ ಎಂದು ಪರಿಚಯಿಸಿದ್ದಾರೆ. ಅಷ್ಟಕ್ಕೂ ಡಾರ್ಲಿಂಗ್ ಎಂದಾಕ್ಷಣ ಅದು ಬೇರೆಯದ್ದೇ ಅರ್ಥ ಕಲ್ಪಿಸುತ್ತದೆ. ಹಾಗೆಂದು ಪ್ರೀತಿಯಿಂದ ಯಾರು ಯಾರನ್ನು ಬೇಕಾದರೂ ಡಾರ್ಲಿಂಗ್ ಎಂದು ಕರೆಯಬಹುದು. ಅದಕ್ಕೆ ಇಂಥದ್ದೇ ಸಂಬಂಧ ಅಂತೇನಿಲ್ಲ. ತುಂಬಾ ಪ್ರೀತಿಯಿಂದ ಯಾರನ್ನು ಬೇಕಾದರೂ ಹಾಗೆ ಕರೆಯಬಹುದಾದರೂ ದರ್ಶಿನಿ ಅವರು ವೆಂಕಟ್ರಾವ್ ಅವರನ್ನು ಹಾಗೆ ಕರೆದು, ಇರಲಿ ಬಿಡಿ ಸ್ವಲ್ಪ ಗಾಸಿಪ್ ಆಗಲಿ ಎಂದು ತಮಾಷೆ ಮಾಡಿದ್ದಾರೆ. ಆದರೆ ಡಾರ್ಲಿಂಗ್ ಎಂದು ಕ್ಯಾಮೆರಾ ಎದುರೇ ಕರೆದದ್ದಕ್ಕೆ ವೆಂಕಟ್ ರಾವ್ ಅವರಿಗೆ ಸ್ವಲ್ಪ ಇರುಸು ಮುರುಸು ಆದಂತೆ ಕಾಣುತ್ತಿದೆ. ಇದೇನಮ್ಮಾ ಎಂದು ಕೇಳಿದ್ದಾರೆ. ಅವರು ಹೀಗೆ ಪ್ರತಿಕ್ರಿಯೆ ಕೊಟ್ಟಿರೋದನ್ನು ನೋಡಿದ ದರ್ಶಿನಿ, ಇದನ್ನು ಮತ್ತೆ ಅಪ್ಲೋಡ್ ಮಾಡಬೇಡಿ ಎಂದಿದ್ದಾರೆ. ಆದರೂ ಅದೀಗ ಅಪ್ಲೋಡ್ ಆಗಿದೆ.
ಇನ್ನು ದರ್ಶಿನಿ ಕುರಿತು ಹೇಳುವುದಾದರೆ, ಅಪ್ಪನ ಕನಸಿನಂತೆ ಡ್ಯಾನ್ಸರ್ (dancer) ಆಗಿ ಕರಿಯರ್ ಆರಂಭಿಸಿದ ದರ್ಶಿನಿ, ಮೊದಲಿಗೆ ತಮಿಳು ಮತ್ತು ತೆಲುಗು ರಿಯಾಲಿಟಿ ಶೋಗಳಲ್ಲಿ ಬಾಲ್ಯದಲ್ಲಿಯೇ ಭಾಗವಹಿಸಿದ್ದರು. ಕನ್ನಡದಲ್ಲಿ ನಟಿಯಾಗೋ ಮುನ್ನವೇ ಅವರು ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. ಇದೀಗ ಕನ್ನಡ, ತೆಲುಗಿನ ಸೂಪರ್ ಸ್ಟಾರ್ ನಾಯಕರಿಗೆ ಅಂದರೆ ಪುನೀತ್ ರಾಜ್ ಕುಮಾರ್, ಯಶ್, ಸುದೀಪ್, ಶರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ನಾನಿಯಂತಹ ಮಹಾನ್ ನಟರಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ತಮಿಳಿನಲ್ಲಿ ಜಾನಿ ಮಾಸ್ಟರ್ (Jani Master) ಅವರಿಗೆ ಅಸಿಸ್ಟಂಟ್ ಆಗಿ ಪ್ರಭುದೇವ (Prabhudeva) ಅವರಿಗೆ ಕೊರಿಯೋಗ್ರಫಿ ಮಾಡಿದ ದರ್ಶಿನಿ ಡೆಲ್ಟಾ ನಾಗರಾಜ್, ಸದ್ಯ ಕನ್ನಡದ ಮೊದಲ ಡ್ಯಾನ್ಸ್ ಕೊರಿಯೋಗ್ರಫರ್ ಆಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.


