ಬೆಂಗಳೂರಿನ ಉದ್ಯಾನವನದಲ್ಲಿ ಜಾಗಿಂಗ್ ನಿಷೇಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಉದ್ಯಾನಕ್ಕೆ ಬರುವವರು ಗಡಿಯಾರದ ದಿಕ್ಕಿನಲ್ಲಿ ಮಾತ್ರ ನಡೆಯಬೇಕು, ಜಾಗಿಂಗ್ ಮಾಡುವಂತಿಲ್ಲ ಎಂಬ ನಿಯಮ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕೆಲವರು ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಡುಪು ಮತ್ತು ವ್ಯಾಯಾಮದ ಶೈಲಿಯ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿಗೆ ಉದ್ಯಾನ ನಗರಿ ಎಂತಲೂ ಹೇಳಲಾಗುತ್ತದೆ. ಆದರೆ, ಇದೀಗ ಬೆಂಗಳೂರಿನ ಈ ಉದ್ಯಾನಗಳಲ್ಲಿ ಜಾಗಿಂಗ್ ಮಾಡುವುದನ್ನು ನಿಷೇಧಿಸುವ ಮೂಲಕ ಸ್ಥಳೀಯ ಜನರಿಗೆ ಶಾಕ್ ನೀಡಿದೆ. ಇದಕ್ಕೆ ಕಾರಣವನ್ನು ಕೇಳಿದರೂ ನಿಮಗೆ ಶಾಕ್ ಆಗಬಹುದು..

ಹೌದು, ಇಲ್ಲೊಬ್ಬ ಮಹಿಳೆ ಹಂಚಿಕೊಂಡಿರುವ ಎಕ್ಸ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಉದ್ಯಾನವನಕ್ಕೆ ಬರುವವರು ಜಾಗಿಂಗ್ ಮಾಡಬಾರದು ಮತ್ತು 'ಗಡಿಯಾರದ ದಿಕ್ಕಿನಲ್ಲಿ' ಮಾತ್ರ ನಡೆಯಬೇಕು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಈ ಪೋಸ್ಟ್ ಅನ್ನು @sahana_srik ಎನ್ನುವವರು ಹಂಚಿಕೊಂಡದ್ದಾರೆ. ಈ ಪೋಸ್ಟ್‌ನಲ್ಲಿ 'ಈ ಉದ್ಯಾನವನಕ್ಕೆ ಬರುವ ಜನರು ಜಾಗಿಂಗ್ ಮಾಡಬಾರದು, ಗಡಿಯಾರದ ದಿಕ್ಕಿನಲ್ಲಿ ಮಾತ್ರ ನಡೆಯಬೇಕು ಮತ್ತು ಗೇಮಿಂಗ್ ಚಟುವಟಿಕೆಗಳಲ್ಲಿ ಭಾಗವಹಿಸಬಾರದು' ಎಂದು ಪೋಸ್ಟರ್ ಅಳವಡಿಕೆ ಮಾಡಿರುವುದನ್ನು ತಿಳಿಸಿದ್ದಾರೆ.

ಈ ಫೋಟೋವನ್ನು ಹಂಚಿಕೊಂಡು ಅಸಮಾಧಾನ ಹೊರಹಾಕಿದ ಮಹಿಳೆ, 'ನೀವು ತಮಾಷೆ ಮಾಡ್ತಾ ಇದ್ದೀರಾ? ಇಂದಿರಾನಗರ ಪಾರ್ಕ್‌ನಲ್ಲಿ ಜಾಗಿಂಗ್ ಮಾಡಬಾರದೇ? ಮುಂದೇನು ಮಾಡಬೇಕು ನಾವು. ಪಾರ್ಕ್‌ಗಳಲ್ಲಿ ಪಾಶ್ಚಾತ್ಯ ಬಟ್ಟೆ ಬೇಡವೇ? ಜಾಗಿಂಗ್ ಮಾಡುವವರು ಪಾರ್ಕ್‌ಗಳಿಗೆ ಏನು ಮಾಡಿದ್ದಾರೆ? ಎಂದು ಸಹನಾ ಶ್ರಿಕ್ ಎನ್ನುವವರು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳ ಕೊರತೆ ಒಂದು ಸಮಸ್ಯೆಯಾದರೆ, ಯಾರೂ ಮಾತನಾಡದ ಇನ್ನೊಂದು ಸಮಸ್ಯೆ ಕೂಡ ಇದೆ. ಉದ್ಯಾನದಲ್ಲಿ ಬೆಳಗ್ಗೆ ವಾಕಿಂಗ್ ಮಾಡಲು ಬರುವವರು ನಡಿಗೆದಾರರ ಸಂಘವನ್ನು ಮಾಡಿಕೊಂಡು, ಸಾರ್ವಜನಿಕ ಆಸ್ತಿಗಳ ಬಳಸಲು ಬರುವವರ ಮೇಲೆ ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ. ಇವರು ನಿರ್ವಹಣೆ ಕೆಲಸದ ಮೂಲಕ ಈ ಸ್ಥಳಗಳ ಕೃತಕ ಮಾಲೀಕತ್ವವನ್ನು ಪಡೆದುಕೊಂಡಿದ್ದಾರೆ. ಇವರು ಕೆಲವು ಸ್ಥಳಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ರಚಿಸಿ ಅಂಟಿಸುತ್ತಾರೆ. ಇವುಗಳಿಗೆ ವಾಸ್ತವ ಸಂಗತಿಗಳಿಗೆ ಯಾವುದೇ ಸಂಬಂಧವೂ ಇರುವುದಿಲ್ಲ ಎಂದು ಸಹನಾ ಅವರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Earning App : ವಾಕಿಂಗ್ ಮಾಡ್ತಾ ಹಣ ಗಳಿಸೋಕೆ ಇಲ್ಲಿದೆ ಅವಕಾಶ

ನಾನು ಅನೇಕ ಉದ್ಯಾನವನಗಳಲ್ಲಿ ಒಂದೇ ದಿಕ್ಕಿನಲ್ಲಿ ನಡೆಯುವುದು ಮತ್ತು ಜಾಗಿಂಗ್ ಮಾಡುವ ನಿಯಮವನ್ನು ನೋಡಿದ್ದೇನೆ. ಜನರು ವಿರುದ್ಧ ದಿಕ್ಕಿನಲ್ಲಿ ನಡೆಯುವಾಗ ಪರಸ್ಪರ ಡಿಕ್ಕಿ ಹೊಡೆಯುವುದನ್ನು ತಡೆಯಲು ಇದು ಎಂದು ಅರ್ಥಮಾಡಿಕೊಳ್ಳಬಹುದು. ಆದರೆ, ಪಾಶ್ಚಾತ್ಯ ಶೈಲಿಯ ಜಾಗಿಂಗ್ ಉಡುಗೆಗಳನ್ನು ಧರಿಸಿಕೊಂಡು ಬರುವುದಕ್ಕೆ ಇಲ್ಲಿ ನಿಷೇಧ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಮ್ಮ ದೇಶದಲ್ಲಿ ಎಲ್ಲರೂ ಸಮಾನರು ಎಂದು ಹೇಳಲಾಗುತ್ತಿದ್ದರೂ, ಸಾರ್ವಜನಿಕ ಸ್ಥಳದ ಮೇಲೆ ಕೆಲವರನ್ನು ಅವರ ಉಡುಪಿನ ಮೇಲೆ ಅನರ್ಹತೆ ಮಾಡುವುದು ಸಹ್ಯವಲ್ಲ ಎಂದು ತಿಳಿಸಿದ್ದಾರೆ. 

Scroll to load tweet…

ಈ ಉದ್ಯಾನದಲ್ಲಿ ಅಂಕಲ್ ಮತ್ತು ಆಂಟಿಯರು ನಡೆಯುವಂತಹ ಶೈಲಿಯ ನಡಿಗೆಯನ್ನು ಹೊರತುಪಡಿಸಿ ಯಾವುದೇ ವ್ಯಾಯಾಮ ಮಾಡಲು ಬಿಡುವುದಿಲ್ಲ. ದುಬಾರಿ ಜಿಮ್‌ಗಳಿಗೆ ಪರ್ಯಾಯವಾಗಿ ಇಲ್ಲಿ ಕೆಲವು ಉಪಕರಣ ಅಳವಡಿಕೆ ಮಾಡಿದ್ದು, ಅವುಗಳನ್ನು ಬಳಸುವುದಕ್ಕೆ ಕೂಡ ಬಿಡುವುದಿಲ್ಲ. ಬಹಳ ದಿನಗಳ ಬಳಿಕ ನಾನು ಜಿಮ್‌ ಬಿಟ್ಟಿದ್ದು, ಸಾರ್ವಜನಿಕ ಸ್ಥಳವಾದ ಉದ್ಯಾನದಲ್ಲಿ ಜಾಗಿಂಗ್ ಮಾಡೋಣ ಎಂದು ನಿರ್ಧರಿಸಿದ್ದೆನು. ಇದಕ್ಕಾಗಿ ನಾನು ಕಚೇರಿ ಕೆಲಸ ಮುಗಿದಿ ವ್ಯಾಯಾಮದ ಬಟ್ಟೆಗಳನ್ನು ಹಾಕಿಕೊಂಡು ಮೊದಲ ದಿನ ಜಾಗಿಂಗ್ ಮಾಡಲು ಉದ್ಯಾನಕ್ಕೆ ಬದಿದ್ದೆನು. ಆದರೆ, ಅಲ್ಲಿ ನಾನು ಉದ್ಯಾನದಲ್ಲಿ ಜಾಗಿಂಗ್ ಮಾಡುವುದಕ್ಕೆ ಅವಕಾಶವಿಲ್ಲದೇ ಉದ್ಯಾನದ ಸುತ್ತಲೂ ಸುಸ್ತಾಗುವವರೆಗೂ ಜಾಗಿಂಗ್ ಮಾಡಿ ಮನೆ ಸೇರಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 10 ನಿಮಿಷ ಜಾಗಿಂಗ್ vs 45 ನಿಮಿಷ ವಾಕಿಂಗ್: ಇದರಲ್ಲಿ ಯಾವುದು ಬೆಸ್ಟ್?