ಕಾಯಿಲೆಯಿಂದ, ಆಕಸ್ಮಿಕಗಳಿಂದ ವ್ಯಕ್ತಿ ಬಹಳ ಬೇಗನೇ ಸಾಯಬಹುದು. ಹಿಂದಿನ ಜನ್ಮದ ಕರ್ಮದ ಫಲದಿಂದಲೂ ಸಾಯಬಹುದು. ಆದರೆ ಹೆಚ್ಚಿನ ಬಾರಿ ವ್ಯಕ್ತಿ ತನ್ನ ಗುಣಗಳಿಂದಲೇ ಆಯುಷ್ಯ ಕಡಿಮೆ ಮಾಡಿಕೊಳ್ಳುತ್ತಾನೆ. ಅವು ಯಾವುವು?
ವ್ಯಕ್ತಿಯ ಆಯುಸ್ಸು ಎಷ್ಟು? ಯಾರೂ ಹೇಳಲು ಸಾಧ್ಯವಾಗದು. ಆದರೆ ಕಲಿಯುಗದಲ್ಲಿ ವ್ಯಕ್ತಿಯ ಆಯಸ್ಸು 100 ವರ್ಷಗಳು ಎಂದು ವೇದಗಳಲ್ಲಿ ಹೇಳಲಾಗಿದೆ. ಆದರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುವವರನ್ನು ನಾವು ನೋಡಿದ್ದೇವೆ. ಯಾವ ಕಾರಣಗಳಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ. ಕಾಯಿಲೆಯಿಂದ, ಆಕಸ್ಮಿಕಗಳಿಂದ, ಭಯೋತ್ಪಾದಕರ ದಾಳಿಯಿಂದ, ಅಪಘಾತಗಳಿಂದ ವ್ಯಕ್ತಿ ಅರ್ಧ ಆಯುಷ್ಯದಲ್ಲಿಯೇ ಸಾಯಬಹುದು. ಹಿಂದಿನ ಜನ್ಮದ ಕರ್ಮದ ಫಲದಿಂದಲೂ ಸಾಯಬಹುದು. ಇವೆಲ್ಲವೂ ದೈವನಿರ್ಮಿತ ಅನ್ನಬಹುದು. ಆದರೆ ಹಲವು ಬಾರಿ ವ್ಯಕ್ತಿ ತನ್ನ ಗುಣಗಳಿಂದಲೇ ಆಯುಷ್ಯ ಕಡಿಮೆ ಮಾಡಿಕೊಳ್ಳುತ್ತಾನೆ. ಅವು ಯಾವುವು? ಈ ಪ್ರಶ್ನೆಗೆ ಉತ್ತರವನ್ನು ಚಾಣಕ್ಯ ನೀಡುತ್ತಾನೆ. ಅವನು ಹೇಳುವ ಪ್ರಕಾರ ಈ ಕೆಳಗಿನ ಏಳು ಕಾರಣಗಳಿಂದ ವ್ಯಕ್ತಿಯ ಆಯುಷ್ಯ ಕಡಿಮೆಯಾಗುತ್ತದಂತೆ. ಅದ್ಯಾವುದು ಅಂತ ನೋಡೋಣ.
1) ಅತಿ ಭೋಗ
ಅತಿ ಭೋಗದಿಂದ ವ್ಯಕ್ತಿಯ ಶರೀರ ಬಡಕಲಾಗಿಬಿಡುತ್ತದೆ. ಅವನ/ಳ ಚೈತನ್ಯವು ಭೋಗದ ಕ್ರಿಯೆಗಳಲ್ಲಿ ಸೋರಿಹೋಗುತ್ತದೆ. ಅವನ ಆತ್ಮದಲ್ಲಿ ಭೋಗದ ಕುರಿತಾದ ರಾಗದ್ವೇಷಾದಿಗಳು ತುಂಬಿಕೊಳ್ಳುತ್ತವೆ. ಅವನು ಭೋಗಕ್ಕಾಗಿ ಕಳವು, ಸುಳ್ಳು ಹೇಳುವುದು, ಸ್ವಾರ್ಥ, ಮೋಸ, ಕೊಲೆ ಮುಂತಾದವುಗಳನ್ನು ಮಾಡಬಹುದು. ನಕಾರಾತ್ಮಕತೆ ತುಂಬಿಕೊಳ್ಳುತ್ತದೆ. ಶರೀರವು ಕಾಯಿಲೆಗಳ ಗೂಡಾಗುತ್ತದೆ. ಇದರಿಂದ ಆಯುಷ್ಯ ಕಡಿಮೆಯಾಗುವುದು ಖಚಿತ.
2) ಅತಿ ಹೆಮ್ಮೆ
ಅತಿಯಾಗಿ ಹೆಮ್ಮೆ ಪಡುವ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ. ಇತರರಲ್ಲಿ ತಪ್ಪುಗಳನ್ನು ಮತ್ತು ತನ್ನಲ್ಲಿರುವ ಸದ್ಗುಣಗಳನ್ನು ನೋಡುವ ವ್ಯಕ್ತಿಯು ಹೆಮ್ಮೆಗೆ ಬಲಿಯಾಗುತ್ತಾನೆ. ಅಂತಹ ವ್ಯಕ್ತಿಯು ತನ್ನನ್ನು ತಾನು ಬಲಶಾಲಿ, ಬುದ್ಧಿವಂತ ಎಂದು ಪರಿಗಣಿಸುತ್ತಾನೆ. ಈ ಭೂಮಿಯಲ್ಲಿ ತನಗಿಂತ ಉತ್ತಮರು ಯಾರೂ ಇಲ್ಲ ಎಂದು ಭಾವಿಸುತ್ತಾನೆ. ತಮ್ಮನ್ನು ಸರ್ವಶಕ್ತರೆಂದು ಪರಿಗಣಿಸಲು ಪ್ರಾರಂಭಿಸುತ್ತಾರೆ. ಈ ಹೆಮ್ಮೆಯಿಂದಾಗಿ, ಮನುಷ್ಯನು ತನ್ನ ಆಯಸ್ಸನ್ನು ಕಳೆದುಕೊಳ್ಳುತ್ತಾನೆ. ಅವನ ಸ್ಥಾನದಿಂದ ಅವನತಿ ಹೊಂದುತ್ತಾನೆ. ಅಂತಹ ವ್ಯಕ್ತಿಯು ಭ್ರಷ್ಟನಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಯಾವಾಗಲೂ ತನ್ನನ್ನು ಹೊಗಳಿಕೊಳ್ಳುವ ವ್ಯಕ್ತಿಯನ್ನು ಜಗತ್ತು ಎಂದಿಗೂ ಇಷ್ಟಪಡುವುದಿಲ್ಲ.
3) ಅತಿ ವಾಚಾಳಿ
ವ್ಯರ್ಥ ಮಾತನಾಡುವ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ. ಅತಿಯಾಗಿ ಮಾತನಾಡುವುದರಲ್ಲಿ ಅವನು ತುಂಬಾ ಬ್ಯುಸಿಯಾಗುತ್ತಾನೆ. ಅವನು ಸತ್ಯವನ್ನು ಮಾತನಾಡಲು ಸಾಧ್ಯವಾಗುವುದಿಲ್ಲ. ಕೆಟ್ಟ ಫಲಿತಾಂಶವನ್ನು ನೀಡುವ ಕೆಲಸದಲ್ಲಿ ತೊಡಗುತ್ತಾನೆ. ಅಂತಹ ವ್ಯಕ್ತಿಯ ಆಯಸ್ಸು ಮತ್ತು ಬುದ್ಧಿವಂತಿಕೆ ಎರಡೂ ಕ್ರಮೇಣ ಕಡಿಮೆಯಾಗಲು ಆರಂಭವಾಗುತ್ತದೆ. ಆ ವ್ಯಕ್ತಿಯ ಮಾತುಗಳು ಯಾರ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ. ಅಂತಹ ವ್ಯಕ್ತಿಯು ತನ್ನ ಅಭ್ಯಾಸವನ್ನು ತೊಡೆದುಹಾಕಲು ದೇವರ ಹೆಸರನ್ನು ಹೆಚ್ಚು ಹೆಚ್ಚು ಜಪಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
4) ಕುಟುಂಬವನ್ನು ನೋಯಿಸುವವನು
ಸಮಾಜ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಗಾಗಿ, ಮನುಷ್ಯನಲ್ಲಿ ಸಮರ್ಪಣೆ ಮತ್ತು ತ್ಯಾಗದ ಭಾವನೆ ಇರಬೇಕು. ತ್ಯಜಿಸುವ ಮನೋಭಾವವನ್ನು ಹೊಂದಿರದ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತಲೇ ಇರುತ್ತದೆ. ಲೌಕಿಕ ಸಂತೋಷಗಳು ಮನುಷ್ಯನ ಆಯಸ್ಸನ್ನು ಕತ್ತರಿಸುತ್ತವೆ. ಪರಿತ್ಯಾಗದ ಕೊರತೆಯಿಂದಾಗಿ, ರಾವಣ, ದುರ್ಯೋಧನನ ಅವನತಿ ಉಂಟಾಯಿತು. ತ್ಯಜಿಸುವ ವ್ಯಕ್ತಿಯು ತನ್ನ ಜೀವನವನ್ನು ಶಾಂತಿಯಿಂದ ಬದುಕುವುದು ಮಾತ್ರವಲ್ಲ, ಅವನ ಆಯಸ್ಸು ಹೆಚ್ಚಾಗುತ್ತದೆ. ತಾನು ಈ ಜಗತ್ತಿನಲ್ಲಿ ಏನನ್ನೂ ತೆಗೆದುಕೊಳ್ಳಲು ಬಂದಿಲ್ಲ , ಇತರರಿಗೆ ಸಂತೋಷವನ್ನು ನೀಡಬೇಕೆಂದು ನೆನಪಿಟ್ಟುಕೊಳ್ಳಬೇಕು. ತನ್ನ ಬಗ್ಗೆ ಮಾತ್ರ ಯೋಚಿಸುವ ವ್ಯಕ್ತಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ.
5) ಅತಿ ಕೋಪಿ
ಕೋಪವು ಮನುಷ್ಯನ ಅತಿದೊಡ್ಡ ಶತ್ರು. ಕೋಪದಲ್ಲಿ ವ್ಯಕ್ತಿಯು ತಾನು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪವನ್ನು ಪಡುವ ಸ್ಥಿತಿಗೆ ಬರುತ್ತಾನೆ. ಕೋಪದಿಂದಾಗಿ ವ್ಯಕ್ತಿ ತನ್ನನ್ನು ತಾನೇ ಹಾನಿಗೊಳಿಸಿಕೊಳ್ಳುವುದಲ್ಲದೆ ಸುತ್ತಲಿನ ಜನರನ್ನು ನೋಯಿಸುತ್ತಾನೆ. ಈ ಕಾರಣದಿಂದಾಗಿ ವ್ಯಕ್ತಿಯು ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಾನೆ. ಏಕೆಂದರೆ ಅಂತಹ ವ್ಯಕ್ತಿಗೆ ತನ್ನ ಸುತ್ತಮುತ್ತ ಏನಾಗುತ್ತಿದೆ ಎನ್ನುವುದು ತಿಳಿಯುವುದಿಲ್ಲ. ಕೋಪಗೊಂಡ ವ್ಯಕ್ತಿಯು ಯಾವಾಗಲೂ ಭವಿಷ್ಯದಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕೋಪವು ನರಕದ ಬಾಗಿಲು. ಒಬ್ಬ ವ್ಯಕ್ತಿಯು ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿದರೂ ಆತನಲ್ಲಿನ ಕೋಪ ಆತನನ್ನು ನರಕಕ್ಕೆ ತಳ್ಳುತ್ತದೆ.
Chanakya Niti: ಈ 7 ಮಂದಿಯ ಮನೆಯಲ್ಲಿ ಊಟ ಮಾಡಬೇಡಿ ಅಂತಾರೆ ಚಾಣಕ್ಯ!
6) ಸ್ವಾರ್ಥಿ
ಸ್ವಾರ್ಥವೇ ಎಲ್ಲಾ ದುರದೃಷ್ಟಗಳಿಗೆ ಮೂಲ. ಒಬ್ಬ ಸ್ವಾರ್ಥಿಯು ತನ್ನ ಸ್ವಾರ್ಥಕ್ಕಾಗಿ ದೊಡ್ಡ ಪಾಪವನ್ನು ಮಾಡುವನು. ಆತನಲ್ಲಿ ಯಾವುದೇ ಉತ್ತಮ ಭಾವನೆ ಇರುವುದಿಲ್ಲ. ಅಸೂಯೆ ಹೊಂದುವ ವ್ಯಕ್ತಿಯು ತನ್ನ ಆಯಸ್ಸನ್ನು ಕಡಿಮೆ ಮಾಡುತ್ತಲೇ ಇರುತ್ತಾನೆ. ಏಕೆಂದರೆ ಅವನು ಯಾವಾಗ ಏನು ಮಾಡುತ್ತಾನೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಆದ್ದರಿಂದ ಸ್ವಾರ್ಥವನ್ನು ತಪ್ಪಿಸಬೇಕು ಮತ್ತು ಸ್ವಾರ್ಥವನ್ನು ತೊಡೆದುಹಾಕಲು, ಇತರರ ಸಂತೋಷದಲ್ಲಿ ಸಂತೋಷವಾಗಿರಿ ಮತ್ತು ದುಃಖದಲ್ಲಿ ಭಾಗಿಯಾಗುವುದನ್ನು ಅಭ್ಯಾಸ ಮಾಡಿಕೊಳ್ಳಿ.
7) ಮಿತ್ರದ್ರೋಹಿ
ಸ್ನೇಹಿತನಿಗೆ ದ್ರೋಹ ಮಾಡುವ ವ್ಯಕ್ತಿಯನ್ನು ಧರ್ಮಗ್ರಂಥಗಳಲ್ಲಿ ಅತ್ಯಂತ ಕೀಳು ವ್ಯಕ್ತಿ ಎಂದು ವಿವರಿಸಲಾಗಿದೆ. ನಿಜವಾದ ಸ್ನೇಹಿತನಾದವನು ಪ್ರತಿಯೊಂದು ಕಷ್ಟದಲ್ಲೂ ಭಾಗಿಯಾಗುತ್ತಾನೆ. ಆದರೆ ಸ್ನೇಹಿತರಿಗೆ ಮೋಸ ಮಾಡುವವರು ಎಂದಿಗೂ ಸಂತೋಷದ ಜೀವನ ನಡೆಸಲು ಸಾಧ್ಯವಿಲ್ಲ ಮತ್ತು ಅವರ ಆಯಸ್ಸು ಕೂಡ ಕಡಿಮೆಯಾಗುತ್ತದೆ. ನಮ್ಮ ಕುಟುಂಬ ಸದಸ್ಯರಿಗೆ ಹೇಳಲೂ ಸಾಧ್ಯವಾಗದ ಕೆಲವು ವಿಷಯಗಳನ್ನು ಸ್ನೇಹಿತರಿಗೆ ಹೇಳಿಕೊಳ್ಳುತ್ತೇವೆ. ಹಾಗಿರುವಾಗ, ಅಂಥವರಿಗೆ ಮೋಸ ಮಾಡಿದರೆ ದೇವರು ಮೆಚ್ಚುವನೇ?
