ಬೇಸಿಗೆ ರಜಾ ದಿನಗಳಾಗಿರುವುದರಿಂದ ಹಿಂದೂ ಪವಿತ್ರ ಕ್ಷೇತ್ರಗಳ ತೀರ್ಥಯಾತ್ರೆ ಚಾರ್‌ಧಾಮ್ ಯಾತ್ರೆಗೆ ಜನ ಭಾರಿ ಸಂಖ್ಯೆಯಲ್ಲಿ ಸೇರುತ್ತಿದ್ದು, ಯಾತ್ರಾರ್ಥಿಗಳ ನಿರ್ವಹಣೆ ಮಾಡುವುದೇ ಉತ್ತರಾಖಂಡ್ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡ್ ಪೊಲೀಸರು ಕನಿಷ್ಠ ಕೆಲ ದಿನಗಳ ಮಟ್ಟಿಗಾದರೂ ಈ ಚಾರ್‌ಧಾಮ್ ಯಾತ್ರೆಯನ್ನು ಮುಂದೂಡುವಂತೆ ಭಕ್ತರಿಗೆ ಮನವಿ ಮಾಡುತ್ತಿದ್ದಾರೆ.  

ಡೆಹ್ರಾಡೂನ್: ಬೇಸಿಗೆ ರಜಾ ದಿನಗಳಾಗಿರುವುದರಿಂದ ಹಿಂದೂ ಪವಿತ್ರ ಕ್ಷೇತ್ರಗಳ ತೀರ್ಥಯಾತ್ರೆ ಚಾರ್‌ಧಾಮ್ ಯಾತ್ರೆಗೆ ಜನ ಭಾರಿ ಸಂಖ್ಯೆಯಲ್ಲಿ ಸೇರುತ್ತಿದ್ದು, ಯಾತ್ರಾರ್ಥಿಗಳ ನಿರ್ವಹಣೆ ಮಾಡುವುದೇ ಉತ್ತರಾಖಂಡ್ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡ್ ಪೊಲೀಸರು ಕನಿಷ್ಠ ಕೆಲ ದಿನಗಳ ಮಟ್ಟಿಗಾದರೂ ಈ ಚಾರ್‌ಧಾಮ್ ಯಾತ್ರೆಯನ್ನು ಮುಂದೂಡುವಂತೆ ಭಕ್ತರಿಗೆ ಮನವಿ ಮಾಡುತ್ತಿದ್ದಾರೆ. ಅದರಲ್ಲೂ ಉತ್ತರಕಾಶಿ ಜಿಲ್ಲೆಯಲ್ಲಿರುವ ಯಮುನೋತ್ರಿಗೆ ಕನಿಷ್ಠ ಒಂದು ದಿನದ ಮಟ್ಟಿಗಾದರೂ ಯಾತ್ರೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ನಿರೀಕ್ಷಿತ ಸಂಖ್ಯೆಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಇಲ್ಲಿ ಜನ ಸೇರಿರುವುದರಿಂದ ಜನರನ್ನು ನಿಯಂತ್ರಿಸುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಮನವಿ ಮಾಡಿದ್ದಾರೆ. 

ಯಮುನೋತ್ರಿಯ ದೇಗುಲದ ಕಡೆಗೆ ಹೋಗುವ ಕಡಿದಾದ ಟ್ರಕ್ಕಿಂಗ್‌ ಮಾರ್ಗದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸಾಗುತ್ತಿರುವ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಕಾಲ್ತುಳಿತ ಸಂಭವಿಸುವ ಸಾಧ್ಯತೆಗಳು ಇರುವುದರಿಂದ ಭಕ್ತರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಈ ಸೂಚನೆ ನೀಡಿದ್ದಾರೆ. ಫೇಸ್‌ಬುಕ್, ಟ್ವಿಟ್ಟರ್, ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರಾಖಂಡ್ ಪೊಲೀಸರು ಮನವಿ ಮಾಡಿದ್ದು, ಯಮುನೋತ್ರಿಗೆ ಪ್ರಯಾಣ ಮುಂದೂಡುವಂತೆ ಹೇಳಿದ್ದಾರೆ. 

ಕೇದಾರನಾಥ ದೇವಾಲಯ ಮೇ 11ರಿಂದ ಭಕ್ತರಿಗೆ ದರ್ಶನಕ್ಕೆ ಮುಕ್ತ

ಇವತ್ತು ಸಾಕಷ್ಟು ಯಾತ್ರಿಕರು ಯಮುನೋತ್ರಿಯನ್ನು ತಲುಪಿದ್ದು, ಈಗಾಗಲೇ ದೇಗುಲದಲ್ಲಿ ಭಕ್ತರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಮೀರಿದೆ. ಈಗ ಮತ್ತಷ್ಟು ಯಾತ್ರಿಕರು ಬಂದರೆ ಅದು ಯಾತ್ರಿಕರ ಸುರಕ್ಷತೆಗೆ ಅಪಾಯಕಾರಿಯಾಗಬಹುದು. ಹೀಗಾಗಿ ಕನಿಷ್ಠ ಒಂದು ದಿನದ ಮಟ್ಟಿಗಾದರೂ ಯಮುನೋತ್ರಿಗೆ ನಿಮ್ಮ ಭೇಟಿಯನ್ನು ಮುಂದೂಡಿ ಎಂದು ವಿನಮ್ರವಾಗಿ ಮನವಿ ಮಾಡುತ್ತೇವೆ ಎಂದು ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. 

ಚಾರ್‌ಧಾಮ ಯಾತ್ರೆಯ ಪೋರ್ಟಲ್‌ ಶುಕ್ರವಾರದಿಂದ ಭಕ್ತಾಧಿಗಳಿಗೆ ತೆರೆದುಕೊಂಡಿದೆ. ಹೀಗಾಗಿ ಮೊದಲ ದಿನವೇ ಇಲ್ಲಿಗೆ 13 ಸಾವಿರ ಭಕ್ತರು ಆಗಮಿಸಿದ್ದಾರೆ. ಇದರಿಂದ ಭಾರಿ ಟ್ರಾಫಿಕ್ ಜಾಮಾ ಆಗಿದ್ದು, ಟ್ರಕ್ಕಿಂಗ್‌ ರೂಟ್‌ಗಳಲ್ಲಿ ಜನದಟ್ಟಣೆ ಅಧಿಕವಾಗಿದೆ. ಎಸ್‌ಡಿಆರ್‌ಎಫ್ ತಂಡ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೊದಲು 5 ಸಾವಿರಕ್ಕೂ ಅಧಿಕ ಯಾತ್ರಿಗಳು ಮಾರ್ಗಮಧ್ಯೆಯೇ ಸಿಲುಕಿ ಹಾಕಿಕೊಂಡಿದ್ದರು.

Kedarnath Dham ಬಗ್ಗೆ 5 ಆಸಕ್ತಿಕರ ಸಂಗತಿಗಳು

ಹೀಗಾಗಿ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಾರ್ಕಿಂಗ್ ಸ್ಥಳಗಳೆಲ್ಲವೂ ಭರ್ತಿಯಾಗಿರುವುದರಿಂದ ಪೊಲೀಸರು ಯಾತ್ರಿಕರ ವಾಹನವನ್ನು ಜಾನಕಿಚಟ್ಟಿ ಪ್ರದೇಶದಲ್ಲೇ ನಿಲ್ಲಿಸುತ್ತಿದ್ದಾರೆ. ಜನದಟ್ಟಣೆಯಿಂದಾಗಿ ಯಾವ ಪ್ರವಾಸಿಗರು ಕೂಡ ತೊಂದರೆಗೆ ಒಳಗಾಗಬಾರದು ಎಂದು ಪೊಲೀಸರು ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 

Scroll to load tweet…