Ganesha Chaturthi 2025 : ಆಗಸ್ಟ್ 27ರಂದು ದೇಶದೆಲ್ಲೆಡೆ ಗಣೇಶ ಚೌತಿ ಆಚರಣೆ ಮಾಡಲಾಗ್ತಿದೆ. ಮನೆಗೆ ತಂದ ಗಣಪತಿ ಮೂರ್ತಿಯನ್ನು ಭಕ್ತರು ವಿಜ್ರಂಭಣೆಯಿಂದ ವಿಸರ್ಜನೆ ಮಾಡ್ತಾರೆ. ಅದಕ್ಕೆ ಕಾರಣ ಏನು ಗೊತ್ತಾ? 

ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶ ಹಬ್ಬ (Ganesha festival )ಕ್ಕೆ ಇಡೀ ಭಾರತ ಸಜ್ಜಾಗ್ತಿದೆ. ಚೌತಿ ಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಬಪ್ಪನನ್ನು ಮನೆಗೆ ತಂದು, ಕಡುಬು, ಕಜ್ಜಾಯ ಮಾಡಿ ಗಣೇಶನಿಗೆ ಅರ್ಪಿಸಿ, ವಿಜ್ರಂಭಣೆಯಿಂದ ಪೂಜೆ ಮಾಡೋದಲ್ದೆ ಗಣೇಶನ ವಿಸರ್ಜನೆ ಕೂಡ ಅದ್ಧೂರಿಯಾಗಿ ಮಾಡಲಾಗುತ್ತೆ. ಈ ಬಾರಿ ಆಗಸ್ಟ್ 27 ರಂದು ಗೌರಿ ಹಿಂದೆ ಗಣೇಶ ಮನೆಗೆ ಬರಲಿದ್ದಾನೆ. ಮನೆಗೆ ಬಂದ ಗಣಪತಿಯನ್ನು ವಿಸರ್ಜನೆ ಮಾಡ್ಲೇಬೇಕು. ಕೆಲವರು ಹಬ್ಬದ ದಿನವೇ ವಿಸರ್ಜನೆ ಮಾಡಿದ್ರೆ ಮತ್ತೆ ಕೆಲವರು, ನಾಲ್ಕು, ಆರು, ಎಂಟು, ಹತ್ತು ದಿನ ಮನೆಯಲ್ಲಿ ಗಣೇಶನ ಪೂಜೆ ಮಾಡಿ ನಂತ್ರ ವಿಸರ್ಜನೆ ಮಾಡ್ತಾರೆ. ಹತ್ತನೇ ದಿನ ಗಣೇಶ ವಿಸರ್ಜನೆ ಹೆಚ್ಚು ಶುಭಕರ ಅಂತ ನಂಬಲಾಗಿದೆ. ಹತ್ತು ದಿನಗಳ ಕಾಲ ಮನೆಯಲ್ಲಿರುವ ಗಣೇಶ, ಭಕ್ತರ ಎಲ್ಲ ಕಷ್ಟವನ್ನು ಬಗೆಹರಿಸಿ, ಮನೆ ಮನೆಗೆ ಸಂತೋಷ ನೀಡಿ ತನ್ನ ಲೋಕಕ್ಕೆ ಮರಳ್ತಾನೆ ಎನ್ನುವ ನಂಬಿಕೆ ಇದೆ.

ಗಣೇಶ ಉತ್ಸವ, ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತೆ. ಶಾಸ್ತ್ರಗಳ ಪ್ರಕಾರ, ಗಣಪತಿ ಮೂರ್ತಿ ಸ್ಥಾಪನೆ ಮಾತ್ರವಲ್ಲ ವಿಸರ್ಜನೆ ಕೂಡ ಮಹತ್ವ ಹೊಂದಿದೆ. ಪ್ರತಿ ವರ್ಷ ನಾವು ಗಣೇಶ ಮೂರ್ತಿ ವಿಸರ್ಜನೆ ಮಾಡ್ತೇವೆ. ಆದ್ರೆ ಯಾಕೆ ಎನ್ನುವ ಪ್ರಶ್ನೆಗೆ ಅನೇಕರ ಬಳಿ ಉತ್ತರ ಇಲ್ಲ. ಗಣೇಶ ಮೂರ್ತಿ ವಿಸರ್ಜನೆ ಮಹಾಭಾರತದ ಜೊತೆ ನಂಟು ಹೊಂದಿದೆ.

ಗಣೇಶ ವಿಸರ್ಜನೆ ಶುರುವಾದ ಕಥೆ ? : ಮಹಾಭಾರತವನ್ನು ಬರೆದವರು ಗಣಪತಿ. ಮಹರ್ಷಿ ವೇದವ್ಯಾಸರು ಮಹಾಭಾರತವನ್ನು ಬರೆಯಲು ಪ್ರತಿಭಾನ್ವಿತ ಬರಹಗಾರರನ್ನು ಹುಡುಕುತ್ತಿದ್ದರು. ಆಗ ಅವರ ಕಣ್ಣಿಗೆ ಬಿದ್ದಿದ್ದು ಗಣಪತಿ. ವೇದವ್ಯಾಸರ ಮಾತನ್ನು ಒಪ್ಪಿಕೊಂಡ ಗಣಪತಿ, ಮಹರ್ಷಿಗಳು ಹೇಳೋದನ್ನು ನಿಲ್ಲಿಸುವವರೆಗೂ ಬರೆಯುತ್ತಲೇ ಇರ್ತೇನೆ ಎಂದಿದ್ದರು. ಗಣೇಶ ಚತುರ್ಥಿಯ ದಿನದಿಂದ ವೇದವ್ಯಾಸರು ಮಹಾಭಾರತದ ಕಥೆಯನ್ನು ಹೇಳಲು ಪ್ರಾರಂಭಿಸಿದ್ದರು. ಗೌರಿ ಪುತ್ರ ಗಣೇಶ 10 ದಿನಗಳ ಕಾಲ ನಿರಂತರವಾಗಿ ಕಥೆಯನ್ನು ಬರೆಯುತ್ತಲೇ ಇದ್ದರು. ಕಥೆ ಮುಗಿದ ನಂತ್ರ ಮಹರ್ಷಿ ವೇದವ್ಯಾಸರು ಕಣ್ಣು ಬಿಟ್ರು. ನಿರಂತರವಾಗಿ ಹತ್ತು ದಿನಗಳ ಕಾಲ ಬರೆಯುತ್ತಲೇ ಇದ್ದ ಗಣೇಶನ ಉಷ್ಣತೆ ಹೆಚ್ಚಾಗಿತ್ತು. ಇದನ್ನು ನೋಡಿದ ಮಹರ್ಷಿಗಳು ಗಣೇಶನನ್ನು ಸರೋವರದಲ್ಲಿ ಸ್ನಾನ ಮಾಡಿಸಿದ್ರು. ಆಗ ಶರೀರಿದ ಉಷ್ಣತೆ ಕಡಿಮೆ ಆಯ್ತು. ಇದನ್ನೇ ಗಣೇಶ ವಿಸರ್ಜನೆ ಎನ್ನಲಾಗುತ್ತದೆ. ಮಹರ್ಷಿ ವೇದವ್ಯಾಸರು ಗಣೇಶನ ಸ್ನಾನ ಮಾಡಿಸಿದ್ದು ಅನಂತ ಚತುರ್ದಶಿಯ ದಿನವಾಗಿತ್ತು. ಹಾಗಾಗಿ ಈಗ್ಲೂ ಅನಂತ ಚತುರ್ದಶಿ ದಿನ ಗಣೇಶ ವಿಸರ್ಜನೆ ಹೆಚ್ಚು ಮಹತ್ವ ಪಡೆದಿದೆ. ಈ ಬಾರಿ ಸೆಪ್ಟೆಂಬರ್ 6 ರಂದು ಅನಂತ ಚತುರ್ದಶಿಯನ್ನು ಆಚರಣೆ ಮಾಡಲಾಗ್ತಿದೆ.

ಗಣಪತಿ ವಿಸರ್ಜನೆ ಅರ್ಥ ಏನು? : ಗಣಪತಿ ವಿಸರ್ಜನೆಯಲ್ಲಿ ತ್ಯಾಗದ ಭಾವ ಇದೆ. ಗಣೇಶ ವಿಸರ್ಜನೆ ಎಂದರೆ ಕೇವಲ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವುದು ಎಂದಲ್ಲ. ಈ ವಿಗ್ರಹ ವಿಸರ್ಜನೆಯ ಪ್ರಕ್ರಿಯೆಯು ಈ ಭೌತಿಕ ಜಗತ್ತಿನಲ್ಲಿ ನಾವು ಸೃಷ್ಟಿಸಿರುವ ಯಾವುದೇ ವಿಷಯ ತಾತ್ಕಾಲಿಕ ಮತ್ತು ಕೊನೆಯಲ್ಲಿ ಕರಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪ್ರಪಂಚದ ಭ್ರಮೆಯಲ್ಲಿ ಸಿಲುಕಿಕೊಳ್ಳುವ ಬದಲು, ನಾವು ನಮ್ಮ ಆಂತರಿಕ ಬುದ್ಧಿಶಕ್ತಿಯನ್ನು ಜಾಗೃತಗೊಳಿಸಬೇಕು ಎಂಬುದನ್ನು ಇದು ಹೇಳುತ್ತದೆ.

ಗಣಪತಿ ವಿಸರ್ಜನೆ ವೇಳೆ ಇದು ನೆನಪಿರಲಿ : ಮನೆಯಲ್ಲಿ ವಿಗ್ರಹವನ್ನು ಮುಳುಗಿಸುವುದು ಒಳ್ಳೆಯದು. ಬ್ರಹ್ಮಪುರಾಣ ಮತ್ತು ಮಹಾಭಾರತದ ಪ್ರಕಾರ, ನದಿ ನೀರನ್ನು ಕಲುಷಿತಗೊಳಿಸುವುದು ಪಾಪ. ಹಾಗಾಗಿ ನದಿ ಬದಲು ನೀವು ಮಡಕೆ ಅಥವಾ ನೀರಿನಿಂದ ತುಂಬಿದ ಹೊಸ ದೊಡ್ಡ ಪಾತ್ರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿ.