ಹೆಚ್ಚಿನ ಪೌಷ್ಟಿಕಾಂಶ ಪಡೆಯಲು ಅನ್ನವನ್ನು ಬೇಯಿಸುವ ಸರಿಯಾದ ಮಾರ್ಗ ಯಾವುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಏಕೆಂದರೆ ಇದನ್ನು ಸರಿಯಾಗಿ ಬೇಯಿಸುವ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತದೆ.

ಸಾಮಾನ್ಯವಾಗಿ ಭಾರತದಲ್ಲಿ ಅಕ್ಕಿ ಪ್ರತಿಯೊಬ್ಬರೂ ಹೆಚ್ಚು ಸೇವಿಸುವ ಧಾನ್ಯಗಳಲ್ಲಿ ಒಂದಾಗಿದೆ. ಇದನ್ನು ಬಹುತೇಕ ಎಲ್ಲಾ ಮನೆಗಳಲ್ಲಿ ಪ್ರತಿದಿನ ಬೇಯಿಸಲಾಗುತ್ತದೆ. ಅಕ್ಕಿಯನ್ನು ಪಲಾವ್‌ನಿಂದ ಬಿರಿಯಾನಿಯವರೆಗೆ ಹಲವು ವಿಧಗಳಲ್ಲಿ ಸೇವಿಸಲಾಗುತ್ತದೆ. ಅಕ್ಕಿಯು ಗ್ಲುಟನ್ ಮುಕ್ತ ಧಾನ್ಯವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ತಿಂದಾಗ ಹೊಟ್ಟೆ ಭಾರ ಅನಿಸಲ್ಲ. ಇದು ವಿಟಮಿನ್ ಬಿ, ಮೆಗ್ನೀಶಿಯಂ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳನ್ನು ಹೊಂದಿದ್ದು, ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದನ್ನು ಶಕ್ತಿಯ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ.

ವಿಶೇಷವಾಗಿ ಕಂದು ಮತ್ತು ಕೆಂಪು ಅಕ್ಕಿಯಲ್ಲಿ ಹೆಚ್ಚಿನ ಫೈಬರ್ ಅಂಶವಿದೆ. ಇದು ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಕ್ಕಿಯನ್ನು ತರಕಾರಿಗಳು ಅಥವಾ ದ್ವಿದಳ ಧಾನ್ಯಗಳೊಂದಿಗೆ ಸೇವಿಸಿದರೆ ಅದು ಇನ್ನಷ್ಟು ಪೌಷ್ಟಿಕವಾಗುತ್ತದೆ. ಆದರೆ ಮಧುಮೇಹ ರೋಗಿಗಳು ಇದನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು. ಹಾಗಾದರೆ ಹೆಚ್ಚಿನ ಪೌಷ್ಟಿಕಾಂಶವನ್ನು ಪಡೆಯಲು ಅನ್ನವನ್ನು ಬೇಯಿಸುವ ಸರಿಯಾದ ಮಾರ್ಗ ಯಾವುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಏಕೆಂದರೆ ಇದನ್ನು ಸರಿಯಾಗಿ ಬೇಯಿಸುವ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತದೆ. ಆದ್ದರಿಂದ ಇಲ್ಲಿ ಅನ್ನವನ್ನು ಹೇಗೆ ಬೇಯಿಸಬೇಕು ಮತ್ತು ಇದರಲ್ಲಿ ಯಾವ ಅಂಶಗಳನ್ನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನೋಡೋಣ ಬನ್ನಿ..

ಅಕ್ಕಿ ಬೇಯಿಸಲು ಸುಲಭ ಮಾರ್ಗಗಳು
ಬಸಿಯುವ ವಿಧಾನ: ಇದರಲ್ಲಿ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇರಿಸಿ ಕುದಿಸಲಾಗುತ್ತದೆ. ಅಕ್ಕಿ ಬೆಂದಾಗ ಉಳಿದ ನೀರನ್ನು ಬಸಿಯಲಾಗುತ್ತದೆ. ಇದು ಅಕ್ಕಿ ಕಾಳುಗಳನ್ನು ಮೃದು ಮತ್ತು ಹಗುರವಾಗಿಸುತ್ತದೆ.

ಹೀರಿಕೊಳ್ಳುವ ವಿಧಾನ: ಈ ವಿಧಾನದಲ್ಲಿ ಅಕ್ಕಿಯು ಎಲ್ಲಾ ನೀರನ್ನು ಹೀರಿಕೊಳ್ಳುವಂತೆ ಅಳತೆ ಮಾಡಿದ ನೀರಿನಿಂದ ಬೇಯಿಸಲಾಗುತ್ತದೆ. ಇದು ಅಕ್ಕಿಯ ಸುವಾಸನೆ ಮತ್ತು ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ.

ಆವಿಯಲ್ಲಿ ಬೇಯಿಸುವುದು: ಮೊದಲೇ ನೆನೆಸಿದ ಅಕ್ಕಿಯನ್ನು ಆವಿಯಲ್ಲಿ ಬೇಯಿಸಲಾಗುತ್ತದೆ. ಇದು ಅನ್ನವನ್ನು ಮೃದುವಾಗಿಸುತ್ತದೆ ಮತ್ತು ಅದರಲ್ಲಿ ಹೆಚ್ಚು ಪಿಷ್ಟ ಉಳಿದಿರುವುದಿಲ್ಲ.

ಪ್ರೆಷರ್ ಕುಕ್ಕರ್‌ನಲ್ಲಿ ಮಾಡುವುದು: ಈ ವಿಧಾನವು ಬಹಳ ಬೇಗ ಆಗುತ್ತದೆ ಮತ್ತು ಸುಲಭ. ಇದು ಅಕ್ಕಿ ಬೇಗನೆ ಬೇಯಿಸಲು ಸಹಾಯ ಮಾಡುತ್ತದೆ ಮತ್ತು ಉತ್ತಮ ವಿನ್ಯಾಸವನ್ನು ಕಾಯ್ದುಕೊಳ್ಳುತ್ತದೆ.

ಅನ್ನ ಬೇಯಿಸುವುದು ಹೇಗೆ?
ಅನ್ನ ಮಾಡುವ ವಿಧಾನ ತಿಳಿದುಕೊಂಡಿದ್ದಾಯ್ತು, ಈಗ ಬೇಯಿಸುವ ವಿಧಾನ ನೋಡೋಣ ಬನ್ನಿ..ಪೌಷ್ಟಿಕತಜ್ಞೆ ಅಮಿತಾ ಗದ್ರೆ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು, ಇದರಲ್ಲಿ ಅಕ್ಕಿ ಬೇಯಿಸುವ ವಿಶೇಷ ವಿಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಡಿಯೋದಲ್ಲಿ ಆರ್ಸೆನಿಕ್ (ವಿಷಕಾರಿ ಅಂಶ) ಅಂಶ ಕಡಿಮೆ ಮಾಡಲು ಅಕ್ಕಿ ಬೇಯಿಸುವ ಹೊಸ ವಿಧಾನ ತಿಳಿಸಲಾಗಿದೆ. ಅದೇ Par boiling and refreshing water method. ಈ ವಿಧಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಅಕ್ಕಿಯನ್ನು ಬೇಯಿಸಿ, ನೀರನ್ನು ಬಸಿದು, ಹೊಸ ನೀರಿನಿಂದ ರಿಫ್ರೆಶ್ ಮಾಡಿ. ಮತ್ತೇ ಬತ್ತಿಸುವ ವಿಧಾನದಿಂದ ಬೇಯಿಸುವುದು. ಈ ವಿಧಾನವು ಆರ್ಸೆನಿಕ್ ಅಂಶವನ್ನು 50% ರಷ್ಟು ಕಡಿಮೆ ಮಾಡುತ್ತದೆ. ಆರ್ಸೆನಿಕ್ ಅನೇಕ ದೇಶಗಳಲ್ಲಿ ಅಂತರ್ಜಲ ಮಾಲಿನ್ಯಕಾರಕವಾಗಿ ಕಂಡುಬರುತ್ತದೆ. ಇದು ಅನೇಕ ಬೆಳೆಗಳಲ್ಲಿಯೂ ಕಂಡುಬರುತ್ತಿದೆ. ಆದರೆ ಅಕ್ಕಿ ವಿಷಯಕ್ಕೆ ಬಂದಾಗ ಇದನ್ನ ತಿಳಿದುಕೊಳ್ಳಲೇಬೇಕಾಗುತ್ತದೆ. ಏಕೆಂದರೆ ಅದು ಆರ್ಸೆನಿಕ್ ಅನ್ನು ಬಹಳ ಬೇಗನೆ ಸಂಗ್ರಹಿಸುತ್ತದೆ.ಇದರರ್ಥ ನಾವು ಈಗ ಅಕ್ಕಿ ತಿನ್ನಲು ಭಯಪಡಬೇಕೇ ಅಥವಾ ಅದು ವಿಷಕಾರಿಯೇ? ಎನ್ನಬೇಡಿ. ಹಾಗೇನೂ ಇಲ್ಲ. ಆರ್ಸೆನಿಕ್ ಇತರ ಹಲವು ಬೆಳೆಗಳು/ಧಾನ್ಯಗಳಲ್ಲಿಯೂ ಇದೆ.

ಇದಲ್ಲದೆ, ಬೇಯಿಸಿದ ಅನ್ನವನ್ನು ರಾತ್ರಿಯಿಡೀ ಫ್ರಿಜ್‌ನಲ್ಲಿ ಇಡುವುದರಿಂದ ಅದರಲ್ಲಿ ನಿರೋಧಕ ಪಿಷ್ಟ ಹೆಚ್ಚಾಗುತ್ತದೆ, ಇದು ಕ್ಯಾಲೊರಿಗಳನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ಆದರೆ ಈ ವಿಧಾನ ಕೇವಲ 15-20% ಕ್ಯಾಲೊರಿ ಕಡಿಮೆ ಮಾಡುತ್ತದೆ. ಏಕೆಂದರೆ ಈ ಪಿಷ್ಟವು ದೇಹದಲ್ಲಿ ಜೀರ್ಣವಾಗುವುದಿಲ್ಲ. ಮೇಲೆ ಹೇಳಿದಂತೆ ಅಕ್ಕಿ ಬೇಯಿಸುವ ಈ ಹೊಸ ವಿಧಾನವನ್ನು ಅಳವಡಿಸಿಕೊಳ್ಳಬೇಕು ಏಕೆಂದರೆ ಇದು ಅಕ್ಕಿಯಲ್ಲಿರುವ ಹಾನಿಕಾರಕ ಆರ್ಸೆನಿಕ್ ಪ್ರಮಾಣವನ್ನು ಸುಮಾರು 50% ರಷ್ಟು ಕಡಿಮೆ ಮಾಡುತ್ತದೆ.

ಅನ್ನ ಬೇಯಿಸುವುದಕ್ಕಿಂತ ನೀವು ತಿನ್ನುವ ಪ್ರಮಾಣ ಮುಖ್ಯ. ಇದರರ್ಥ ನಾವು ಅನ್ನ ತಿನ್ನುವುದನ್ನು ನಿಲ್ಲಿಸಬೇಕು ಅಥವಾ ಅದು ವಿಷಕಾರಿಯಾಗಿದೆ ಎಂದಲ್ಲ. ನೀವು ತಿನ್ನುವ ಅನ್ನದ ಪ್ರಮಾಣದ ಬಗ್ಗೆ ಗಮನ ಹರಿಸುವುದು ಮುಖ್ಯ. ಅದು ಯಾವುದೇ ರೀತಿಯ ಅನ್ನವನ್ನು ತಿನ್ನುತ್ತಿದ್ದರೂ ಪರವಾಗಿಲ್ಲ.