Most searched recipes 2025: ಗೂಗಲ್ ಬಿಡುಗಡೆ ಮಾಡಿದ ಇಯರ್ ಇನ್ ಸರ್ಚ್ ವರದಿಯು ಕೇವಲ ಅಂಕಿಅಂಶಗಳ ಪಟ್ಟಿಯಲ್ಲ, ಅದು ಆ ವರ್ಷದ ಜನರ ಆಲೋಚನೆಗಳು ಮತ್ತು ಅಭಿರುಚಿಗಳನ್ನು ಪ್ರತಿಬಿಂಬಿಸುತ್ತದೆ. 

ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿಯಿವೆ. ಸಾಮಾನ್ಯವಾಗಿ ಹೊಸ ವರ್ಷಕ್ಕೆ ಕಾಲಿಡುವ ಮೊದಲು ಅನೇಕ ಜನರು ಈ ವರ್ಷದ ಮುಖ್ಯಾಂಶಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಆದ್ದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಗೂಗಲ್ 'Year in Search 2025' ವರದಿ ಬಿಡುಗಡೆ ಮಾಡಿದೆ.

ಗೂಗಲ್ ಬಿಡುಗಡೆ ಮಾಡಿದ ಇಯರ್ ಇನ್ ಸರ್ಚ್ ವರದಿಯು ಕೇವಲ ಅಂಕಿಅಂಶಗಳ ಪಟ್ಟಿಯಲ್ಲ, ಅದು ಆ ವರ್ಷದ ಜನರ ಆಲೋಚನೆಗಳು ಮತ್ತು ಅಭಿರುಚಿಗಳನ್ನು ಪ್ರತಿಬಿಂಬಿಸುತ್ತದೆ. ಇಯರ್ ಇನ್ ಸರ್ಚ್ 2025 ವರದಿಯ ಪ್ರಕಾರ, 2025 ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಟಾಪ್ 10 ಭಕ್ಷ್ಯಗಳು ಇಲ್ಲಿವೆ.

ಇಡ್ಲಿ

ಇಡ್ಲಿ ಭಾರತೀಯರ ಅತ್ಯಂತ ನೆಚ್ಚಿನ ಉಪಹಾರಗಳಲ್ಲಿ ಒಂದಾಗಿದೆ. ಜೀರ್ಣಿಸಿಕೊಳ್ಳಲು ಸುಲಭ ಮತ್ತು ಆರೋಗ್ಯಕರವಾದ ಆವಿಯಲ್ಲಿ ಬೇಯಿಸಿದ ಖಾದ್ಯ. ಆದ್ದರಿಂದ ಇಡ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಬಡಿಸುವ ಈ ದಕ್ಷಿಣದ ಖಾದ್ಯವು ದೇಶಾದ್ಯಂತ ಅಡುಗೆಮನೆಗಳಲ್ಲಿ ರಾಜನಾಗುತ್ತಿರುವುದಂತು ಸುಳ್ಳಲ್ಲ.

ಪೋರ್ನ್ ಸ್ಟಾರ್ ಮಾರ್ಟಿನಿ
ಭಾರತೀಯರು ಅಂತರರಾಷ್ಟ್ರೀಯ ರೆಸಿಪಿಯ ಜೊತೆಗೆ ಸ್ಥಳೀಯ ಪಾಕಪದ್ಧತಿಯನ್ನೂ ಎಂಜಾಯ್‌ ಮಾಡಿದ್ದಾರೆ. ವೋಡ್ಕಾ ಮತ್ತು ಪ್ಯಾಶನ್ ಫ್ರೂಟ್‌ನಿಂದ ತಯಾರಿಸಿದ ಪೋರ್ನ್ ಸ್ಟಾರ್ ಮಾರ್ಟಿನಿ ಎಂಬ ಕಾಕ್‌ಟೈಲ್ ಪಾಕವಿಧಾನವನ್ನು ಗೂಗಲ್‌ನಲ್ಲಿ ಹುಡುಕಲಾಗಿದೆ.

ಮೋದಕ
ನಮ್ಮ ಸಂಸ್ಕೃತಿಯಲ್ಲಿ ಮೋದಕ ರೆಸಿಪಿಗೆ ವಿಶೇಷ ಸ್ಥಾನವಿದೆ. ವಿಶೇಷವಾಗಿ ಗಣೇಶ ಹಬ್ಬ ಬಂತೆಂದರೆ ಮೋದಕ ಮಾಡಲು ತಯಾರಿ ಭರ್ಜರಿಯಾಗಿಯೇ ನಡೆಯುತ್ತದೆ. ಗೂಗಲ್‌ ಸರ್ಚ್‌ನಲ್ಲಿ ಗಣಪನ ನೆಚ್ಚಿನ ಮೋದಕ ತಯಾರಿಸಲು ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಭಾರಿ ಆಸಕ್ತಿ ತೋರಿಸಲಾಗಿದೆ.

ತೆಕುವಾ
ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಛಠ್ ಪೂಜೆಯ ಸಮಯದಲ್ಲಿ ತಯಾರಿಸುವ ತೆಕುವಾ (ಗೋಧಿ ಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಿದ ಬಿಸ್ಕತ್ತು ತರಹದ ಖಾದ್ಯ) ವನ್ನು ಗೂಗಲ್‌ನಲ್ಲಿ ಹೆಚ್ಚು ಹುಡುಕಲಾಯಿತು. ವಿಶೇಷವಾಗಿ ವಿನಾಯಕ ಚೌತಿ ಸಮಯದಲ್ಲಿ ತಯಾರಿಸುವ ಆವಿಯಲ್ಲಿ ಬೇಯಿಸಿದ ಡಂಪ್ಲಿಂಗ್‌ಗಳು ಸಹ ಟ್ರೆಂಡಿಂಗ್‌ನಲ್ಲಿವೆ.

ಪಚಡಿ
ವರ್ಷದ ಮೊದಲ ಹಬ್ಬ ಯುಗಾದಿ ಸಮಯದಲ್ಲಿ ತಯಾರಿಸುವ ಪಚ್ಚಡಿ ಕೂಡ ಸರ್ಚ್‌ನಲ್ಲಿ ಅಗ್ರಸ್ಥಾನದಲ್ಲಿದೆ ಎಂಬುದು ನಮ್ಮ ಸಂಪ್ರದಾಯದ ಬಗ್ಗೆ ನಮಗಿರುವ ಗೌರವಕ್ಕೆ ಸಾಕ್ಷಿಯಾಗಿದೆ. ಘಮ ಘಮಿಸುವ ಪಚಡಿಯು ಜೀವನದ ಎಲ್ಲಾ ಅನುಭವಗಳನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ನೀಡುತ್ತದೆ. ಈ ಪಾಕವಿಧಾನಕ್ಕಾಗಿ ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೂಗಲ್‌ನತ್ತ ಮುಖ ಮಾಡಿದ್ದಾರೆ.

ಬೀಟ್ರೂಟ್‌ ಕಾಂಜಿ
ಇದು ಬೀಟ್ರೂಟ್, ಸಾಸಿವೆ, ಕಪ್ಪು ಕ್ಯಾರೆಟ್ (ಐಚ್ಛಿಕ), ಉಪ್ಪು ಮತ್ತು ನೀರಿನಿಂದ ತಯಾರಿಸಿ ಹುದುಗಿಸಿದ ಉತ್ತರ ಭಾರತದ ಸಾಂಪ್ರದಾಯಿಕ ಪಾನೀಯವಾಗಿದೆ. ಇದು ಕಟುವಾದ, ಸ್ವಲ್ಪ ಖಾರವಾದ, ನೈಸರ್ಗಿಕವಾಗಿ ಪ್ರೋಬಯಾಟಿಕ್ ಆಗಿದ್ದು, ಅದರ ಕೆಂಪು ಬಣ್ಣಕ್ಕೆ ಹೆಸರುವಾಸಿಯಾಗಿದೆ. ಇದು ಚಳಿಗಾಲದಲ್ಲಿ ಪಂಜಾಬಿ, ಯುಪಿ ಮತ್ತು ದೆಹಲಿಯ ಮನೆಗಳಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಏಕೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ.

ತಿರುವತಿರೈ ಕಲಿ
ತಮಿಳುನಾಡಿನಲ್ಲಿ ನಡೆಯುವ ತಿರುಪತಿರೈ ಹಬ್ಬದ ಸಮಯದಲ್ಲಿ ಶಿವನಿಗೆ ಅರ್ಪಿಸುವ ತಿರುವತಿರೈ ಕಲಿ (ಅಕ್ಕಿ, ಬೆಲ್ಲ ಮತ್ತು ಏಲಕ್ಕಿಯಿಂದ ಮಾಡಿದ ಸಿಹಿ ತಿಂಡಿ) ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ಪ್ರಾದೇಶಿಕ ಪಾಕಪದ್ಧತಿಯ ಬಗ್ಗೆ ಜನರಿಗಿರುವ ಉತ್ಸಾಹವನ್ನು ಸೂಚಿಸುತ್ತದೆ.

ಯಾರ್ಕ್‌ಷೈರ್ ಪುಡಿಂಗ್
ಬ್ರಿಟನ್‌ನಲ್ಲಿ ಬಹಳ ಜನಪ್ರಿಯವಾಗಿರುವ ಯಾರ್ಕ್‌ಷೈರ್ ಪುಡಿಂಗ್ (ಮೊಟ್ಟೆ, ಹಿಟ್ಟು ಮತ್ತು ಹಾಲಿನಿಂದ ತಯಾರಿಸಿದ ಖಾದ್ಯ) ಹೇಗೆ ಮಾಡುವುದು ಎಂಬುದರ ಕುರಿತು ಗೂಗಲ್ ಹುಡುಕಾಟವು ಕುತೂಹಲವನ್ನು ತೋರಿಸಿದೆ .

ಗೊಂಡ್ ಕಟಿರಾ
ಗೊಂಡ್ ಕಟಿರಾ ಖಾದ್ಯವಲ್ಲದಿದ್ದರೂ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುವ ಅತ್ಯುತ್ತಮ ಪದಾರ್ಥವಾಗಿ ಬೇಡಿಕೆಯಲ್ಲಿದೆ. ಇದು ಪಾನೀಯಗಳು ಮತ್ತು ಸಿಹಿತಿಂಡಿಗಳಲ್ಲಿ ಬಳಸುವ ನೈಸರ್ಗಿಕ ಗಮ್ ಆಗಿದೆ.

ಕೋಲುಕಟ್ಟೈ,
ಆವಿಯಲ್ಲಿ ಬೇಯಿಸಿದ ಡಂಪ್ಲಿಂಗ್ಸ್ ಅಥವಾ ಕೋಲುಕಟ್ಟೈ, ದಕ್ಷಿಣದ ಭಾಗದಲ್ಲಿ ಹಬ್ಬಗಳ ಸಮಯದಲ್ಲಿ (ವಿಶೇಷವಾಗಿ ವಿನಾಯಕ ಚೌತಿ ಸಮಯದಲ್ಲಿ) ಮಾಡಲಾಗುತ್ತದೆ. ಇದು ಅಗ್ರ 10 ರಲ್ಲಿ ಸ್ಥಾನ ಪಡೆದಿದೆ.

ಒಟ್ಟಾರೆಯಾಗಿ 2025 ರಲ್ಲಿ ಭಾರತೀಯರು ಹೊಸ ಕಾಕ್‌ಟೇಲ್ಸ್‌ ಮತ್ತು ಅಂತರರಾಷ್ಟ್ರೀಯ ಪಾಕಪದ್ಧತಿಗಳನ್ನು ಪ್ರಯತ್ನಿಸಲು ಹಿಂಜರಿಯುತ್ತಿಲ್ಲ. ಹಾಗೆಯೇ ಅಜ್ಜಿ ಮಾಡುವ ರೆಸಿಪಿಗಳು ಮತ್ತು ಸಾಂಪ್ರದಾಯಿಕ ಹಬ್ಬದಲ್ಲಿ ತಯಾರಿಸುವ ಭಕ್ಷ್ಯಗಳನ್ನು ಹುಡುಕುತ್ತಿದ್ದಾರೆ.