Masala Paddu: ಪ್ರತಿದಿನ ಅದೇ ಇಡ್ಲಿ-ದೋಸೆ ತಿಂದು ಬೋರ್ ಆಗಿದ್ದರೆ ರುಚಿ ರುಚಿಯಾದ, ಮೃದುವಾದ ಮಸಾಲಾ ಪಡ್ಡನ್ನು ಮಾಡೋದು ಹೇಗೆಂದು ಇಲ್ಲಿ ನೋಡೋಣ ಬನ್ನಿ. ಮಕ್ಕಳ ಲಂಚ್ ಬಾಕ್ಸ್ ಇರಲಿ ಅಥವಾ ಅತಿಥಿಗಳ ಆಗಮನವಿರಲಿ, ಎಲ್ಲರ ಮನಗೆಲ್ಲಲು ಈ ಸಿಂಪಲ್ ರೆಸಿಪಿ ಸಾಕು! 

ಸಾಲಾ ಪಡ್ಡು ಎಂದರೆ ಯಾರಿಗೆ ಇಷ್ಟವಿಲ್ಲ? ಹೊರಗಡೆ ಗರಿಗರಿಯಾಗಿ, ಒಳಗಡೆ ಮೃದುವಾದ ಆಲೂಗಡ್ಡೆ ಪಲ್ಯ ಅಥವಾ ಸೊಪ್ಪಿನ ಸ್ಟಫ್ ಹೊಂದಿರುವ ಈ ಖಾದ್ಯವು ಎಲ್ಲರ ಸಾರ್ವಕಾಲಿಕ ನೆಚ್ಚಿನ ಆಹಾರ. ಆದರೆ, ಇದೇ ಮಸಾಲಾ ಪಡ್ಡುವನ್ನು ಸುಲಭವಾಗಿ ಸವಿಯುವಂತಿದ್ದರೆ ಹೇಗಿರುತ್ತದೆ? ಸಂಜೆಯ ಚಹಾ ಸಮಯಕ್ಕೆ ಅಥವಾ ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದಂತಿರುವ ಈ ಮಸಾಲಾ ಪಡ್ಡು ಬಗ್ಗೆ ಸದ್ಯ ಇನ್‌ಸ್ಟಾಗ್ರಾಮ್ ಪೇಜ್ @diningwithdhootನಲ್ಲಿ ಶೇರ್ ಮಾಡಲಾಗಿದ್ದು, ಈ ವಿಶಿಷ್ಟ ರೆಸಿಪಿಯನ್ನು ಈಸಿಯಾಗಿ ಮಾಡುವುದು ಹೇಗೆಂದು ಕೊಡಲಾಗಿದೆ ನೋಡಿ.

ಏನಿದು ಮಸಾಲಾ ಪಡ್ಡು?
ದೋಸೆ ಅಥವಾ ಇಡ್ಲಿ ಹಿಟ್ಟಿನೊಳಗೆ ಮಸಾಲೆಯುಕ್ತ ಆಲೂಗಡ್ಡೆ ಪಲ್ಯವನ್ನು ತುಂಬಿಸಿ, ಪಡ್ಡು ಹಂಚಿನಲ್ಲಿ ಬೇಯಿಸಿದರೆ ಸಣ್ಣ, ಗುಂಡನೆಯ ಆಕಾರದಲ್ಲಿರುವ ಮಸಾಲಾ ಪಡ್ಡು ರೆಡಿಯಾಗುತ್ತದೆ. ಮತ್ಯಾಕೆ ತಡ ಮಸಾಲಾ ಪಡ್ಡು ಮಾಡುವುದು ಹೇಗೆಂದು ನೋಡೋಣ ಬನ್ನಿ..

ತಯಾರಿಸುವ ವಿಧಾನ

ಆಲೂ ಮಸಾಲಾ ಸಿದ್ಧತೆ
ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಡಿ. ಇದಕ್ಕೆ ಧನಿಯಾ ಪುಡಿ, ಕೆಂಪು ಮೆಣಸಿನ ಪುಡಿ, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ಇದಕ್ಕೆ ಮೊದಲೇ ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ, ತಣ್ಣಗಾದ ಮೇಲೆ ಈ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿಟ್ಟುಕೊಳ್ಳಿ.

*ಆಲೂಗಡ್ಡೆ ಉಂಡೆಗಳು ಹಂಚಿನ ಗುಂಡಿಗಿಂತ ಚಿಕ್ಕದಾಗಿರಲಿ. ದೊಡ್ಡದಾದರೆ ಹಿಟ್ಟು ಹಾಕಲು ಜಾಗವಿರುವುದಿಲ್ಲ ಮತ್ತು ಸರಿಯಾಗಿ ಬೇಯುವುದಿಲ್ಲ.
*ಆಲೂಗಡ್ಡೆ ಪಲ್ಯ ಮಾಡುವಾಗ ಅದಕ್ಕೆ ಸ್ವಲ್ಪ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಒಂದು ಚಿಟಿಕೆ ಗರಂ ಮಸಾಲಾ ಸೇರಿಸಿ. ಇದು ಒಳ್ಳೆಯ ಘಮ ನೀಡುತ್ತದೆ.
*ಆಲೂಗಡ್ಡೆ ಪಲ್ಯಕ್ಕೆ ಸಣ್ಣಗೆ ಹೆಚ್ಚಿದ ಕ್ಯಾರೆಟ್ ಅಥವಾ ಬಟಾಣಿ ಸೇರಿಸುವ ಮೂಲಕ ಇದನ್ನು ಇನ್ನಷ್ಟು ಪೌಷ್ಟಿಕವಾಗಿ ಮಾಡಬಹುದು.

ಹಿಟ್ಟು ಹಾಕುವ ವಿಧಾನ

ವಿಡಿಯೋದಲ್ಲಿ ತೋರಿಸಿರುವ ಹಾಗೆ ದೋಸೆ ಹಿಟ್ಟಿಗೆ ಸ್ವಲ್ಪ ಫ್ರೂಟ್ ಸಾಲ್ಟ್ (Fruit Salt) ಬೆರೆಸಿ ಲಘುವಾಗಿ ಮಿಶ್ರಣ ಮಾಡಿ. ಹಿಟ್ಟಿಗೆ ಫ್ರೂಟ್ ಸಾಲ್ಟ್ ಅನ್ನು ಹಾಕಿದ ತಕ್ಷಣ ಬೇಯಿಸಲು ಶುರುಮಾಡಿ. ಹಾಕಿ ಬಹಳ ಹೊತ್ತು ಇಟ್ಟರೆ ಮೃದುವಾಗಿ ಬರುವುದಿಲ್ಲ (Fluffy ಆಗಿರುವುದಿಲ್ಲ).

ಪಡ್ಡು ಮಾಡುವ ಹಂಚನ್ನು ಬಿಸಿ ಮಾಡಿ ಸ್ವಲ್ಪ ತುಪ್ಪ ಅಥವಾ ಬೆಣ್ಣೆ ಸವರಿ. ಪ್ರತಿ ಗುಂಡಿಗೆ ಅರ್ಧ ಚಮಚ ಹಿಟ್ಟನ್ನು ಹಾಕಿ, ಅದರ ಮಧ್ಯದಲ್ಲಿ ಸಿದ್ಧಪಡಿಸಿದ ಆಲೂಗಡ್ಡೆ ಉಂಡೆಯನ್ನು ಇರಿಸಿ, ಮೇಲೆ ಮತ್ತೆ ಸ್ವಲ್ಪ ಹಿಟ್ಟು ಹಾಕಿ ಪೂರ್ತಿ ಮುಚ್ಚಿ. ಕಡಿಮೆ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ. ಒಂದು ಬದಿ ಹೊಂಬಣ್ಣಕ್ಕೆ ಬಂದ ಮೇಲೆ ಮಗುಚಿ ಹಾಕಿ ಎರಡೂ ಬದಿ ಗರಿಗರಿಯಾಗುವವರೆಗೆ ಬೇಯಿಸಿ.

*ಹೋಟೆಲ್ ಪಡ್ಡಿನಂತೆ ಗರಿಗರಿಯಾಗಿ ಬರಬೇಕೆಂದರೆ, ಹಿಟ್ಟಿಗೆ ಒಂದು ಚಮಚ ಚಿರೋಟಿ ರವೆ ಅಥವಾ ಅಕ್ಕಿ ಹಿಟ್ಟು ಬೆರೆಸಿ. ಇದು ದೀರ್ಘಕಾಲದವರೆಗೆ ಗರಿಗರಿಯಾಗಿರಲು ಸಹಾಯ ಮಾಡುತ್ತದೆ.
*ಎಣ್ಣೆಯ ಬದಲಿಗೆ ಬೆಣ್ಣೆ ಅಥವಾ ತುಪ್ಪ ಬಳಸಿ ಬೇಯಿಸಿದರೆ, ಅದರ ರುಚಿ ದುಪ್ಪಟ್ಟಾಗುತ್ತದೆ ಮತ್ತು ಮಕ್ಕಳಿಗೆ ಇದು ತುಂಬಾ ಇಷ್ಟವಾಗುತ್ತದೆ.

ಈ ಚಟ್ನಿ ಜೊತೆ ಸೇವಿಸಿ
ಈ ರುಚಿಕರ ಪಡ್ಡನ್ನು ಕೆಂಪು ತೆಂಗಿನಕಾಯಿ ಚಟ್ನಿ, ಖಾರವಾದ ಈರುಳ್ಳಿ ಚಟ್ನಿ ಅಥವಾ ಪುದೀನಾ ಹಸಿರು ಚಟ್ನಿಯೊಂದಿಗೆ ಸೇವಿಸಬಹುದು. ಸ್ವಲ್ಪ ಬಿಸಿ ಬಿಸಿ ಸಾಂಬಾರ್ ಕೂಡ ಇದ್ದರೆ ಇಡೀ ಸಂಜೆಯ ಸ್ನ್ಯಾಕ್ ಪರಿಪೂರ್ಣ ಹಬ್ಬದಂತಾಗುತ್ತದೆ.

ತೂಕ ಇಳಿಸುವವರಿಗೆ ಸೂಕ್ತವೇ?
ಖಂಡಿತ, ಈ ಖಾದ್ಯವನ್ನು ಡೀಪ್ ಫ್ರೈ ಮಾಡುವ ಬದಲಿಗೆ ಪಡ್ಡು ಪಾತ್ರೆಯಲ್ಲಿ ಕಡಿಮೆ ಎಣ್ಣೆ ಬಳಸಿ ತಯಾರಿಸುವುದರಿಂದ ತೂಕ ಇಳಿಸುವವರು ಸಹ ಮಿತವಾಗಿ ಇದನ್ನು ಸವಿಯಬಹುದು. ಹೊರಗಿನ ಎಣ್ಣೆ ತಿಂಡಿಗಳಿಗಿಂತ ಇದು ಪೌಷ್ಟಿಕ ಮತ್ತು ಆರೋಗ್ಯಕರ ಆಯ್ಕೆಯಾಗಿದೆ.

ಮೃದುವಾಗಿ ಬರಲು ಸಲಹೆ

ಹಿಟ್ಟು ದೋಸೆ ಹಿಟ್ಟಿನ ಹದದಲ್ಲಿರಲಿ, ತುಂಬಾ ತೆಳುವಾದರೆ ಆಕಾರ ಬರುವುದಿಲ್ಲ. ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸುವುದರಿಂದ ಉಗಿಯ ಸಹಾಯದಿಂದ ಒಳಗಿನ ಭಾಗ ಮೃದುವಾಗಿ ಮತ್ತು ಹೊರಭಾಗ ಗರಿಗರಿಯಾಗಿ ಮೂಡಿಬರುತ್ತದೆ. ಇಂದೇ ಈ ಸರಳ ಮತ್ತು ರುಚಿಕರ ರೆಸಿಪಿಯನ್ನು ನಿಮ್ಮ ಮನೆಯಲ್ಲಿ ಟ್ರೈ ಮಾಡಿ!

ಇಲ್ಲಿದೆ ನೋಡಿ ವಿಡಿಯೋ 

View post on Instagram