ಕಲ್ಲಂಗಡಿ ಸಿಪ್ಪೆಯಿಂದ ರುಚಿಕರ, ಆರೋಗ್ಯಕರ ಸಬ್ಜಿ ತಯಾರಿಸಬಹುದು. ಈ ಸಬ್ಜಿ ತೂಕ ಇಳಿಕೆ, ಜೀರ್ಣಕ್ರಿಯೆಗೆ ಸಹಕಾರಿ. ಸಕ್ಕರೆ, ರಕ್ತದೊತ್ತಡ ರೋಗಿಗಳಿಗೂ ಉತ್ತಮ.
ಬೇಸಿಗೆಯ ತಿಂಗಳಲ್ಲಿ ಬಹುತೇಕರ ಮನೆಯಲ್ಲಿ, ಬೀದಿ ಬದಿಗಳಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ಏಕೈಕ ಹಣ್ಣೆಂದರೆ ಅದು ಕಲ್ಲಂಗಡಿ. ಕಲ್ಲಂಗಡಿ ಹಣ್ಣು ರುಚಿಕರವಾಗಿರುವುದಲ್ಲದೆ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಇದರಲ್ಲಿ ಸಾಕಷ್ಟು ನೀರು ಮತ್ತು ಪೋಷಕಾಂಶಗಳಿವೆ. ಇದು ಎಲ್ಲಾ ವಯಸ್ಸಿನವರಿಗೂ ಒಳ್ಳೆಯದು. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಕಲ್ಲಂಗಡಿ ತಿಂದ ನಂತರ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯಲಾಗುತ್ತದೆ. ಆದರೆ ಕಲ್ಲಂಗಡಿ ಸಿಪ್ಪೆಯಿಂದ ರುಚಿಕರವಾದ ಸಬ್ಜಿ ತಯಾರಿಸಬಹುದು ಎಂದು ನಿಮಗೆ ತಿಳಿದಿದೆಯೇ?. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ತಿನ್ನುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ದೇಹಕ್ಕೆ ವಿಟಮಿನ್ ಎ, ಫೈಬರ್, ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಸಿಗುತ್ತದೆ. ಹಾಗಾದರೆ ಕಲ್ಲಂಗಡಿಯಿಂದ ಸಬ್ಜಿ ತಯಾರಿಸುವುದು ಹೇಗೆಂದು ನೋಡೋಣ ಬನ್ನಿ...
ಕಲ್ಲಂಗಡಿ ಸಿಪ್ಪೆಯ ಸಬ್ಜಿ ತಯಾರಿಸಲು ಬೇಕಾಗುವ ಪದಾರ್ಥಗಳು
* ಕಲ್ಲಂಗಡಿ ಸಿಪ್ಪೆ -1.5 ಕೆಜಿ
* ಇಂಗು-ಚಿಟಿಕೆ
* ಜೀರಿಗೆ- 1/4 ಟೀ ಸ್ಪೂನ್
* ಶುಂಠಿ ಪೇಸ್ಟ್-1 ಟೀ ಸ್ಪೂನ್
* ಹಸಿರು ಮೆಣಸಿನಕಾಯಿ-2-3 ಸಣ್ಣಗೆ ಹೆಚ್ಚಿದ್ದು
* ಕಾರದಪುಡಿ-1/4 ಟೀ ಸ್ಪೂನ್ ಗಿಂತ ಕಡಿಮೆ
* ಗರಂ ಮಸಾಲ - 1/4 ಟೀ ಸ್ಪೂನ್ ಗಿಂತ ಕಡಿಮೆ
* ಅರಿಶಿನ ಪುಡಿ-1/4 ಟೀ ಸ್ಪೂನ್
* ಮಾವಿನ ಪುಡಿ (ಆಮ್ ಚೂರ್) -1/4 ಟೀ ಸ್ಪೂನ್
* ಕೊತ್ತಂಬರಿ ಪುಡಿ-1 ಟೀ ಸ್ಪೂನ್
* ಉಪ್ಪು-3/4 ಟೀ ಸ್ಪೂನ್ (ರುಚಿಗೆ ಅನುಗುಣವಾಗಿ)
* ಎಣ್ಣೆ 2-3 ಟೀ ಸ್ಪೂನ್
* ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
* ಮೊದಲು ಕಲ್ಲಂಗಡಿ ಹಣ್ಣು ತಿಂದ ನಂತರ ಉಳಿದ ಸಿಪ್ಪೆಯನ್ನು ಕತ್ತರಿಸಿ. ಸಿಪ್ಪೆಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಎತ್ತಿಟ್ಟುಕೊಳ್ಳಿ.
* ನಂತರ ಇದೇ ಬಾಣಲೆಗೆ ಜೀರಿಗೆ, ಇಂಗು, ಶುಂಠಿ ಪೇಸ್ಟ್, ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿಯನ್ನು ಮಿಶ್ರಣ ಮಾಡುತ್ತಾ ಎಲ್ಲಾ ಪದಾರ್ಥಗಳನ್ನು ಲಘುವಾಗಿ ಫ್ರೈ ಮಾಡಿ.
* ಇದಕ್ಕೆ ಕಲ್ಲಂಗಡಿ ಸಿಪ್ಪೆಯ ತುಂಡುಗಳನ್ನು ಮೇಲೆ ಸೇರಿಸಿ.
* ಈಗ ನೀವು ಉಪ್ಪು ಮತ್ತು ಕೆಂಪು ಮೆಣಸಿನ ಪುಡಿಯನ್ನೂ ಸೇರಿಸಿ.
* ಕಲ್ಲಂಗಡಿ ಸಿಪ್ಪೆಯ ತುಂಡುಗಳನ್ನು ಮೇಲಿನ ಮಸಾಲೆಗಳೊಂದಿಗೆ ಎರಡು ನಿಮಿಷಗಳ ಕಾಲ ಹುರಿಯಿರಿ.
* ಕಲ್ಲಂಗಡಿ ಸಿಪ್ಪೆಯ ತುಂಡುಗಳಿಗೆ ಮಸಾಲೆ ಲೇಪಿತವಾದಾಗ 1/4 ಕಪ್ ನೀರು ಸೇರಿಸಿ. ನಂತರ ಮುಚ್ಚಿ 5-6 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.
* ಆಗಾಗ ಕೈಯಾಡುತ್ತಿರಿ. ಮಧ್ಯದಲ್ಲಿ ನೀರು ಕಡಿಮೆ ಅನಿಸಿದರೆ ಸ್ವಲ್ಪ ನೀರು ಸೇರಿಸಬಹುದು.
* ಕಲ್ಲಂಗಡಿ ಸಿಪ್ಪೆ ಮೃದುವಾದಾಗ ಗರಂ ಮಸಾಲ ಸೇರಿಸಿ. ಕೊನೆಯಲ್ಲಿ ಮಾವಿನ ಪುಡಿ (ಆಮ್ ಚೂರ್) ಹಾಕಿ. ಅರ್ಧ ಗಂಟೆಯಲ್ಲಿ ರೆಡಿಯಾಗುತ್ತದೆ. ಈಗ ಈ ಬಿಸಿ ಬಿಸಿ ಸಬ್ಜಿಯನ್ನು ಪರಾಠ ಅಥವಾ ಅನ್ನದೊಂದಿಗೆ ಸೇವಿಸಬಹುದು.
ಕಲ್ಲಂಗಡಿ ಸಿಪ್ಪೆಯ ಪ್ರಯೋಜನಗಳು
ಕಲ್ಲಂಗಡಿ ಸಿಪ್ಪೆಯ ಸಬ್ಜಿ ತಯಾರಿಸಿ ತಿನ್ನುವುದರಿಂದ ನೀವು ಸಾಕಷ್ಟು ಪೋಷಕಾಂಶಗಳನ್ನು ಪಡೆಯಬಹುದು. ಏಕೆಂದರೆ ಇದರಲ್ಲಿ ಹೇರಳವಾದ ಫೈಬರ್ ಮತ್ತು ಕ್ಯಾಲೋರಿಗಳಿವೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ. ಇಷ್ಟೇ ಅಲ್ಲ, ಇದು ಸಕ್ಕರೆ ಮತ್ತು ರಕ್ತದೊತ್ತಡ ರೋಗಿಗಳಿಗೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
