ಜುಲೈ 7 ವಿಶ್ವ ಚಾಕೋಲೆಟ್ ದಿನವಾಗಿದ್ದು, ಕಿರುತೆರೆ ಕಲಾವಿದೆಯರು ವೀಕ್ಷಕರಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿಯೇ ಹೇಗೆ ಇದನ್ನು ತಯಾರಿಸಬಹುದು ಎನ್ನುವ ಎರಡು ಸುಲಭದ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಇಂದು ಅರ್ಥಾತ್ ಜುಲೈ 7 ವಿಶ್ವ ಚಾಕೋಲೆಟ್ ದಿನ. ನೇ ಶತಮಾನದಲ್ಲಿ ಯುರೋಪ್‌ಗೆ ಚಾಕೋಲೆಟ್ನ ಪರಿಚಯವನ್ನು ಈ ದಿನ ಸ್ಮರಿಸುತ್ತದೆ ಎನ್ನಲಾಗಿದೆ. ಅಷ್ಟಕ್ಕೂ ಚಾಕೊಲೇಟ್ಗೆ ಏನೂ ಒಂದು ದಿನವೇ ಬೇಕೆಂದೇನಿಲ್ಲ. ಪುಟಾಣಿಗಳಿಂದ ಹಿಡಿದು ವಯೋವೃದ್ಧರವರೆಗೂ ಚಾಕೊಲೇಟ್ ಎಂದರೆ ಆಹಾ ಎನ್ನದೇ ಇರುವವರೇ ಇಲ್ಲವೇನೋ. ಶುಗರ್ ಇದೆ ಎಂದ್ರೂ ಒಂದೂಚು ಚಾಕೊಲೇಟ್ ಸವಿಯುವ ಹಲವು ಜನರಿದ್ದಾರೆ. ಅಂಥ ಮಹಿಮೆ ಈ ಸಿಹಿಗೆ. ಕೋಕೋ ಬೀಜದಿಂದ ಪಡೆದ ಚಾಕೊಲೇಟ್, ಪ್ರಾಚೀನ ಮೆಸೊಅಮೆರಿಕನ್ ಸಮಾಜಗಳ ಕಾಲದಿಂದಲೂ ಪ್ರಸಿದ್ಧವಾಗಿದೆ. ಆ ಅವಧಿಯಲ್ಲಿ, ಕೋಕೋ ಹಣ್ಣಿನ ರುಚಿಕರವಾದ ತಿರುಳನ್ನು ಆಲ್ಕೊಹಾಲ್ಯುಕ್ತ ಪಾನೀಯವಾಗಿ ಹುದುಗಿಸಲಾಗುತ್ತಿತ್ತು. ಅಂದಿನಿಂದ ವಿಭಿನ್ನ ರೂಪ ಪಡೆದಿದೆ ಈ ಸಿಹಿ. ಈ ದಿನದ ಅಂಗವಾಗಿ ಜೀ ಕನ್ನಡದ ಕಿರುತೆರೆ ನಟ-ನಟಿಯರು ವಿಶೇಷವಾಗಿ ವೀಕ್ಷಕರಿಗೆ ಈ ದಿನದ ಶುಭಾಶಯವನ್ನು ಕೋರಿದ್ದಾರೆ.
ಶ್ರೀರಸ್ತು ಶುಭಮಸ್ತು, ಪುಟ್ಟಕ್ಕನ ಮಕ್ಕಳು, ಅಮೃತಧಾರೆ, ಕರ್ಣ, ಅಣ್ಣಯ್ಯ, ಲಕ್ಷ್ಮೀ ಬಾರಮ್ಮಾ, ಶ್ರಾವಣಿ ಸುಬ್ರಹ್ಮಣ್ಯ, ನಾ ನಿನ್ನ ಬಿಡಲಾರೆ ಹಾಗೂ ದೃಷ್ಟಿಬೊಟ್ಟು ಸೀರಿಯಲ್ ನಾಯಕ-ನಾಯಕಿ ವೀಕ್ಷಕರಿಗೆ ಚಾಕೋಲೆಟ್ ಮೂಲಕ ಶುಭಾಶಯ ಕೋರಿದ್ದಾರೆ.
ಚಾಕೋಲೆಟ್ನಲ್ಲಿ ಹಲವಾರು ಬಗೆಯನ್ನು ಮಾಡಬಹುದಾಗಿದೆ. ಅದರಲ್ಲಿ ಒಂದು ಬಗೆಯನ್ನು ಇಲ್ಲಿ ನೀಡಲಾಗಿದೆ. ಮನೆಯಲ್ಲಿಯೇ ಇದನ್ನು ಸುಲಭದಲ್ಲಿ ಮಾಡಬಹುದು.
ಚಾಕೋಲೆಟ್ ಮಾಡಲು ಬೇಕಾಗುವ ಸಾಮಗ್ರಿಗಳು
- ಚಾಕೋಲೆಟ್ ಪುಡಿ 1 ಕಪ್
- ಹಾಲಿನ ಪುಡಿ ಪೌಡರ್ 3 ಕಪ್
- ಸಕ್ಕರೆ 2 ಕಪ್
- ಬೆಣ್ಣೆ ಅರ್ಧ ಕಪ್
ಮಾಡುವ ವಿಧಾನ
ಮೊದಲಿಗೆ ಪಾತ್ರೆಯಲ್ಲಿ ಹಾಲಿನ ಪುಡಿ ಹಾಗೂ ಚಾಕೋಲೆಟ್ ಪುಡಿಯನ್ನು ಬೆರೆಸಿ. ನಂತರ ದಪ್ಪ ಅಡಿ ಇರುವ ಕಡಾಯಿಯನ್ನು ತೆಗೆದುಕೊಳ್ಳಿ. ಇದನ್ನು ಗ್ಯಾಸ್ ಮೇಲಿಟ್ಟು ಸ್ವಲ್ಪ ನೀರು ಹಾಕಿ ನೀರು ಬಿಸಿಯಾಗುತ್ತಿರುವಂತೆಯೇ ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ಗಂಟಾಗಲು ಬಿಡಬೇಡಿ. ಕೈಯಾಡಿಸುತ್ತಲೇ ಸಕ್ಕರೆಯನ್ನು ನೀರಿನಲ್ಲಿ ಕರಗಲು ಬಿಡಬೇಕು.
ಪಾಕ ಸ್ವಲ್ಪ ಮಂದವಾಗುತ್ತಾ ಬಂದ ತಕ್ಷಣ ಅದಕ್ಕೆ ಬೆಣ್ಣೆ ಹಾಕಿ. ನಂತರ ಬೆರೆಸಿದ ಚಾಕೋಲೆಟ್ ಪುಡಿ ಹಾಗೂ ಹಾಲಿನ ಪುಡಿ ಸೇರಿಸಿ ಕಲಸಿ. ಗಟ್ಟಿಯಾಗುತ್ತಾ ಬಂದಾಗ ಗ್ಯಾಸ್ ಆಫ್ ಮಾಡಿ. ಇದಾದ ಬಳಿಕ ಒಂದು ಪಾತ್ರೆಗೆ ತುಪ್ಪ ಸವರಿ ಅದರಲ್ಲಿ ಈ ಮಿಶ್ರಣವನ್ನು ಹಾಕಿ ನಂತರ ತಟ್ಟೆಗೆ ಸುರಿದು ತಣ್ಣಗಾಗಲು ಬಿಡಿ. ನಂತರ ಚಾಕು ತೆಗೆದುಕೊಂಡು ಗಟ್ಟಿಯಾದ ಚಾಕೋಲೆಟ್ ಅನ್ನು ಚೌಕಾರದಲ್ಲಿ ಕತ್ತರಿಸಿದರೆ ರುಚಿಕರವಾದ ಚಾಕೋಲೆಟ್ ರೆಡಿ.
****************************
ಅಂಗಡಿಯಲ್ಲಿ ಸಿಗುವ ಸ್ಟೈಲ್ನಲ್ಲಿಯೇ ಚಾಕೋಲೆಟ್ ಬೇಕೆಂದ್ರೆ ಇದನ್ನು ಟ್ರೈ ಮಾಡಿ
¾ ಟಿನ್: ನೆಸ್ಲೆ ಮಿಲ್ಕ್‌ಮೇಡ್
100 ಗ್ರಾಂ ಪುಡಿಮಾಡಿದ ಬಿಸ್ಕತ್ತುಗಳು
150 ಗ್ರಾಂ ಬೆಣ್ಣೆ
1 ಚಮಚ ಕೋಕೋ ಪೌಡರ್
200 ಗ್ರಾಂ ಕ್ರೀಮ್ ಚೀಸ್
1 ವೆನಿಲ್ಲಾ ಎಸೆನ್ಸ್
1 ಕಪ್ ಚಾಕೊಲೇಟ್ ಕಲರ್
5 – 6 ಚೆರ್ರಿಗಳು
1 ಚಮಚ ಉಪ್ಪು
200 ಗ್ರಾಂ ಡಾರ್ಕ್ ಚಾಕೊಲೇಟ್
ಮಾಡುವ ವಿಧಾನ:
-ಮೊದಲಿಗೆ ಬಿಸ್ಕತ್ತು ಪದರವನ್ನು ತಯಾರಿಸಲು, 100 ಗ್ರಾಂ ಪುಡಿಮಾಡಿದ ಬಿಸ್ಕತ್ತುಗಳನ್ನು 50 ಗ್ರಾಂ ಕರಗಿದ ಬೆಣ್ಣೆ ಮತ್ತು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇರಿಸಿ.
- ಕ್ರೀಮಿ ಚಾಕೊಲೇಟ್ ಪದರವನ್ನು ತಯಾರಿಸಲು, 200 ಗ್ರಾಂ ಡಾರ್ಕ್ ಚಾಕೊಲೇಟ್ ಮತ್ತು 100 ಗ್ರಾಂ ಬೆಣ್ಣೆಯನ್ನು ಒಟ್ಟಿಗೆ ಕರಗಿಸಿ. 3/4 ಕಪ್ ನೆಸ್ಲೆ ಮಿಲ್ಕ್‌ಮೇಡ್ ಅನ್ನು ಬೆರೆಸಿ ಮತ್ತು ಸಂಪೂರ್ಣವಾಗಿ ಕರಗಿದ ನಂತರ, ಒಂದು ಚಮಚ ಕೋಕೋ ಪೌಡರ್ ಅನ್ನು ಸೇರಿಸಿ.
- ಒಂದು ಬಟ್ಟಲಿನಲ್ಲಿ, 200 ಗ್ರಾಂ ಕ್ರೀಮ್ ಚೀಸ್ ತೆಗೆದುಕೊಂಡು ನಯವಾಗಿ ಮಿಕ್ಸ್ ಮಾಡಿ. ಕರಗಿದ ಮತ್ತು ತಂಪಾಗಿಸಿದ ಚಾಕೊಲೇಟ್ ಮಿಶ್ರಣವನ್ನು ಕ್ರಮೇಣ ಸೇರಿಸಿ, ನಂತರ ವೆನಿಲ್ಲಾ ಎಸೆನ್ಸ್ ಸೇರಿಸಿ ಬೆರೆಸಿ.
- ಇದನ್ನು ಬಿಸ್ಕತ್ತು ಬೇಸ್ ಮೇಲೆ ಸುರಿಯಿರಿ.
- ಚಾಕೊಲೇಟ್ ಪುಡಿಂಗ್ ಅನ್ನು ಚಾಕೊಲೇಟ್ ಕರ್ಲ್ಸ್ ಮತ್ತು ಚೆರ್ರಿಗಳಿಂದ ಅಲಂಕರಿಸಿ.


