ಐಎಸ್‌ಎಲ್ ಆಯೋಜನೆ ಕುರಿತು ಎಐಎಫ್‌ಎಫ್ ಮತ್ತು ಎಫ್‌ಎಸ್‌ಡಿಎಲ್ ನಡುವಿನ ಬಿಕ್ಕಟ್ಟು ತಾರಕಕ್ಕೇರಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ್ದು, ಆಗಸ್ಟ್ 22 ರಂದು ವಿಚಾರಣೆ ನಡೆಸಲಿದೆ. ಮೋಹನ್ ಬಗಾನ್ ತಂಡವು ಆಟಗಾರರನ್ನು ಭಾರತ ತಂಡದ ಶಿಬಿರಕ್ಕೆ ಕಳುಹಿಸಲು ನಿರಾಕರಿಸಿದೆ.
ನವದೆಹಲಿ: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಆಯೋಜನೆ ವಿಚಾರದಲ್ಲಿ ಭಾರತೀಯ ಫುಟ್ಬಾಲ್ ಫೆಡರೇಷನ್ ಹಾಗೂ ಐಎಸ್‌ಎಲ್ ಆಯೋಜಕರಾದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್(ಎಫ್‌ಎಸ್‌ಡಿಎಲ್) ನಡುವಿನ ಬಿಕ್ಕಟ್ಟಿನ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದ್ದು, ಆ.22ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಈ ಬಗ್ಗೆ ಹಿರಿಯ ವಕೀಲ ಗೋಪಾಲ ಶಂಕರನಾರಾಯಣನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಪಿ.ಎಸ್. ನರಸಿಂಹ ಹಾಗೂ ನ್ಯಾ.ಚಂದೂರ್ಕರ್ ಇದ್ದ ಪೀಠ ಪುರಸ್ಕರಿಸಿತು.
ಮಾಸ್ಟರ್ ರೈಟ್ಸ್ ಅಗ್ರಿಮೆಂಟ್(ಎಂಆರ್‌ಎ) ನವೀಕರಣ ವಿಚಾರದಲ್ಲಿ ಎಐಎಫ್‌ಎಫ್ ಹಾಗೂ ಎಫ್‌ಎಸ್‌ಡಿಎಲ್ ನಡುವೆ ಸಂಘರ್ಷ ಏರ್ಪಟ್ಟಿದೆ. ಹೀಗಾಗಿ ಎಫ್‌ಎಸ್‌ಡಿಎಲ್ 2025-26ರ ಐಎಸ್‌ಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿದೆ.
ಭಾರತ ಶಿಬಿರಕ್ಕೆ ಅಟಗಾರರ ಕಳುಹಿಸಲು ಬಗಾನ್ ನಕಾರ!
ಕೋಲ್ಕತಾ: ಇಂಡಿಯನ್ ಸೂಪರ್ ಲೀಗ್‌ನ ಹಾಲಿ ಚಾಂಪಿಯನ್ ಮೋಹನ್ ಬಗಾನ್ ತಂಡವು ಭಾರತ ತಂಡದ ಶಿಬಿರಕ್ಕೆ ತನ್ನ ಆಟಗಾರರನ್ನು ಕಳುಹಿಸದಿರಲು ನಿರ್ಧರಿಸಿದೆ. ಎಐಎಫ್‌ಎಫ್ ಆಟಗಾರರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಬಗಾನ್ ಆರೋಪಿಸಿದೆ.
ನೇಷನ್ಸ್ ಕಪ್‌ಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪೂರ್ವಸಿದ್ಧತಾ ಶಿಬಿರಕ್ಕೆ ಎಐಎಫ್‌ಎಫ್ 35 ಆಟಗಾರರ ಪಟ್ಟಿ ಪ್ರಕಟಿಸಿತ್ತು. ಆದರೆ ಬಗಾನ್ 7 ಆಟಗಾರರು ಸೇರಿ ಒಟ್ಟು 13 ಮಂದಿ ಶಿಬಿರಕ್ಕೆ ಸೇರ್ಪಡೆಗೊಂಡಿಲ್ಲ. ಆಟಗಾರರನ್ನು ಕೂಡಲೇ ಶಿಬಿರಕ್ಕೆ ಕಳುಹಿಸಲು ಎಐಎಫ್‌ಎಫ್ ಕೋರಿದೆ. ಆದರೆ ಇದನ್ನು ಬಗಾನ್ ತಿರಸ್ಕರಿಸಿದೆ. ‘ಎಐಎಫ್‌ಎಫ್ ಆಟಗಾರರ ಗಾಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು. ನಮ್ಮ ಆಟಗಾರರನ್ನು ಕರೆದುಕೊಂಡು ಹೋದ ಬಳಿಕ 3-4 ಮಂದಿ ಗಾಯಗೊಂಡು ಹಿಂತಿರುಗುತ್ತಾರೆ. ಆದರೆ ಫೆಡರೇಷನ್ ಈ ಬಗ್ಗೆ ಗಮನವಹಿಸಿಲ್ಲ’ ಎಂದು ಆರೋಪಿಸಿದೆ.
ಚೆಟ್ರಿಗೆ ಭಾರತ ತಂಡದ ಬಾಗಿಲು ತೆರೆದಿರುತ್ತದೆ: ಕೋಚ್ ಜಮೀಲ್ ಸ್ಪಷ್ಟನೆ
ಬೆಂಗಳೂರು: ಸಿಎಎಫ್‌ಎ ನೇಷನ್ಸ್ ಕಪ್‌ನಲ್ಲಿ ಆಡಲಿರುವ ಭಾರತ ಫುಟ್ಬಾಲ್ ತಂಡದ ಆಟಗಾರರ ಪಟ್ಟಿಯಲ್ಲಿ ದಿಗ್ಗಜ ಆಟಗಾರ ಸುನಿಲ್ ಚೆಟ್ರಿ ಕೈಬಿಟ್ಟಿದ್ದಕ್ಕೆ ನೂತನ ಕೋಚ್ ಖಾಲಿದ್ ಜಮೀಲ್ ಸ್ಪಷ್ಟನೆ ನೀಡಿದ್ದಾರೆ. ‘ಇದು ಆಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕಪ್‌ಗೆ ಪೂರ್ವ ಸಿದ್ಧತಾ ಶಿಬಿರ. ಹಾಗಾಗಿ ಅವರು ಈ ಪಟ್ಟಿಯಲ್ಲಿ ಇಲ್ಲ. ಅವರ ಜೊತೆಗೂ ಇದೇ ವಿಚಾರವಾಗಿ ಮಾತನಾಡಿದ್ದೇನೆ. ಅವರು ಫುಟ್ಬಾಲ್ ತಂಡಕ್ಕೆ ಎಂದಿಗೂ ಮಾದರಿ. ಅವರಿಗಾಗಿ ತಂಡದ ಬಾಗಿಲು ಎಂದಿಗೂ ತೆರೆದಿರುತ್ತದೆ’ ಎಂದಿದ್ದಾರೆ.
ಡೈಮಂಡ್ ಲೀಗ್ ಫೈನಲ್‌ಗೆ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ
ನವದೆಹಲಿ: ಭಾರತದ ತಾರಾ ಜಾವೆಲಿನ್ ಎಸೆತಗಾರ, ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಡೈಮಂಡ್ ಲೀಗ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಫೈನಲ್ ಆಗಸ್ಟ್ 27, 28ಕ್ಕೆ ಸ್ವಿಜರ್‌ಲೆಂಡ್‌ನ ಜ್ಯುರಿಚ್‌ನಲ್ಲಿ ನಡೆಯಲಿದೆ.
ಪೋಲೆಂಡ್‌ನಲ್ಲಿ ಆ.16ಕ್ಕೆ ನಡೆಯಬೇಕಿದ್ದ ಡೈಮಂಡ್ ಲೀಗ್ ಕೂಟದಲ್ಲಿ ನೀರಜ್ ಸ್ಪರ್ಧಿಸಿಲ್ಲ. ಆ.22ರ ಬ್ರಸೆಲ್ಸ್ ಚರಣದಲ್ಲೂ ಅವರು ಪಾಲ್ಗೊಳ್ಳುವ ಸಾಧ್ಯತೆಯಿಲ್ಲ. ಆದರೆ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಚಾಂಪಿಯನ್, ದೋಹಾ ಡೈಮಂಡ್ ಲೀಗ್‌ನಲ್ಲಿ ರನ್ನರ್-ಅಪ್ ಆಗಿ ಒಟ್ಟು 15 ಅಂಕ ಗಳಿಸಿರುವ ನೀರಜ್, ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.
ಡೈಮಂಡ್ ಲೀಗ್ ಎಂಬುದು ವಾರ್ಷಿಕ ಕ್ರೀಡಾಕೂಟವಾಗಿದ್ದು, ವಿಶ್ವದ 14 ನಗರಗಳಲ್ಲಿ ನಡೆದ ಚರಣಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳು ಫೈನಲ್‌ನಲ್ಲಿ ಆಡುವ ಅರ್ಹತೆ ಪಡೆಯುತ್ತಾರೆ.


