ಬೆಳಗಾವಿಯಲ್ಲಿ ತಲೆ ಎತ್ತಲಿದೆ ತಿರುಪತಿ ದೇಗುಲ: ಜಿರ್ಣೋದ್ಧಾರಕ್ಕೆ 9 ಸಾವಿರ ಕೋಟಿ ಮೀಸಲಿಟ್ಟ ಟಿಟಿಡಿ
ಉತ್ತರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಭಕ್ತರಿಗಾಗಿ Tirumala Tirupati Devasthanams ಬೆಳಗಾವಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಿಸಲು ಅನುಮೋದನೆ ನೀಡಿದೆ.

ತಿರುಮಲ ತಿರುಪತಿ ದೇವಸ್ಥಾನ
ಉತ್ತರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಭಕ್ತರ ಸೌಲಭ್ಯಕ್ಕಾಗಿ ಬೆಳಗಾವಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ತಿರುಮಲ ತಿರುಪತಿ ದೇವಸ್ಥಾನ (TTD) ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಈ ದೇವಸ್ಥಾನವನ್ನು ಸುಮಾರು ₹100 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ.
ಎರಡು ವರ್ಷಗಳಲ್ಲಿ ದೇವಸ್ಥಾನ
ಸುವರ್ಣ ವಿಧಾನ ಸೌಧದ ಸಮೀಪ ಸುಮಾರು 7 ಏಕರೆ ಜಾಗದಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದ್ದು, ಈ ಜಾಗವನ್ನು ಸ್ಥಳೀಯ ರೆಡ್ಡಿ ಸಂಘ ದಾನವಾಗಿ ನೀಡಿದೆ. ದೇವಸ್ಥಾನ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸುವ ನಿರೀಕ್ಷೆಯಿದ್ದು, ಸುಮಾರು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಟಿಟಿಡಿ
ಈ ಯೋಜನೆಗೆ ಟಿಟಿಡಿ 80% ಹಣವನ್ನು ಒದಗಿಸಲಿದ್ದು, ಉಳಿದ 20% ಹಣವನ್ನು ರೆಡ್ಡಿ ಸಂಘ ಮತ್ತು ಸಾರ್ವಜನಿಕ ದೇಣಿಗೆಗಳಿಂದ ಸಂಗ್ರಹಿಸಲಾಗುತ್ತದೆ.
ಟಿಟಿಡಿ ಸದಸ್ಯ ಎಸ್. ನರೇಶ್ ಕುಮಾರ್ ಅವರ ಪ್ರಕಾರ, ಬೆಳಗಾವಿಯ ಭೌಗೋಳಿಕ ಸ್ಥಾನಮಾನವನ್ನು ಗಮನಿಸಿದರೆ, ಈ ದೇವಸ್ಥಾನ ಉತ್ತರ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಭಕ್ತರಿಗೆ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಲಿದೆ.
ತಿರುಪತಿ ದೇವಸ್ಥಾನ
ಈ ದೇವಸ್ಥಾನವು ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಿರ್ಮಾಣವಾಗಲಿದ್ದು, ವಸತಿ ವ್ಯವಸ್ಥೆ, ಪ್ರಸಾದ ವಿತರಣೆ ಹಾಗೂ ಉಚಿತ ಅನ್ನದಾನ ವ್ಯವಸ್ಥೆಯನ್ನೂ ಒಳಗೊಂಡಿರುತ್ತದೆ.
ಹೊಸ ದೇವಾಲಯ ನಿರ್ಮಾಣ ಹಾಗೂ ದೇವಾಲಯಗಳ ಜಿರ್ಣೋದಾರಕ್ಕಾಗಿ 9 ಸಾವಿರ ಕೋಟಿ ಹಣ ಟಿಟಿಡಿ ಮೀಸಲು ಇಟ್ಟಿದೆ. ಬೆಳಗಾವಿ ಅಷ್ಟೇ ಅಲ್ಲದೇ ದೇಶದ ಆರು ಕಡೆಗಳಲ್ಲಿ ಹೊಸ ವೆಂಕಟೇಶ್ವರನ ದೇವಾಲಯಗಳು ನಿರ್ಮಾಣಕ್ಕೆ ಟಿಟಿಡಿ ಮುಂದಾಗಿದೆ. ಒಟ್ಟಾರೆಯಾಗಿ ದೇವಾಲಯ ನಿರ್ಮಾಣದಿಂದ ಬೆಳಗಾವಿ ಶೈಕ್ಷಣಿಕ, ಸಾಮಾಜಿಕವಾಗಿ ಅಷ್ಟೇ ಅಲ್ಲದೇ ಧಾರ್ಮಿಕವಾಗಿ ಗುರುತಿಸುವಂತೆ ಆಗಲಿದೆ. ಶೀಘ್ರದಲ್ಲಿ ದೇವಾಲಯ ನಿರ್ಮಾಣಕ್ಕೆ ಭೂಮಿಪೂಜೆ ಸಹ ನಡೆಯಲಿದೆ ಎಂದು ಟಿಟಿಡಿ ತಿಳಿಸಿದೆ.