- Home
- Business
- ಧನತ್ರಯೋದಶಿ: ದೇಶವನ್ನೇ ಬೆರಗುಗೊಳಿಸಿದ ವ್ಯಾಪಾರ, 60 ಸಾವಿರ ಕೋಟಿಯ ಚಿನ್ನ-ಬೆಳ್ಳಿ, 2 ದಿನದಲ್ಲಿ 75 ಸಾವಿರ ಕಾರ್ ಮಾರಾಟ
ಧನತ್ರಯೋದಶಿ: ದೇಶವನ್ನೇ ಬೆರಗುಗೊಳಿಸಿದ ವ್ಯಾಪಾರ, 60 ಸಾವಿರ ಕೋಟಿಯ ಚಿನ್ನ-ಬೆಳ್ಳಿ, 2 ದಿನದಲ್ಲಿ 75 ಸಾವಿರ ಕಾರ್ ಮಾರಾಟ
ಈ ವರ್ಷದ ಧನತ್ರಯೋದಶಿ ಪ್ರಯುಕ್ತ ದೇಶಾದ್ಯಂತ 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ದಾಖಲೆ ವ್ಯಾಪಾರ ನಡೆದಿದೆ. ಚಿನ್ನ, ಬೆಳ್ಳಿ, ವಾಹನಗಳು, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಭರ್ಜರಿ ಮಾರಾಟವಾಗಿದ್ದು, ಜೈನ ಸಮುದಾಯವೊಂದು 186 ಐಷಾರಾಮಿ ಕಾರುಗಳನ್ನು ಖರೀದಿಸಿ ಗಮನ ಸೆಳೆದಿದೆ.

ಧನತ್ರಯೋದಶಿ
ಈ ವರ್ಷ ಧನತ್ರಯೋದಶಿ ಪ್ರಯುಕ್ತ ದೇಶಾದ್ಯಂತ ಖರೀದಿ ಭರಾಟೆ ಜೋರಾಗಿದ್ದು, 1 ಲಕ್ಷ ಕೋಟಿ ರು.ಗೂ ಅಧಿಕ ಮೊತ್ತದ ವ್ಯಾಪಾರ ನಡೆದಿದೆ. ಇದು ಇತ್ತೀಚಿನ ವರ್ಷಗಳಲ್ಲೇ ಹಬ್ಬದ ಋತುವಿನಲ್ಲಿ ನಡೆದ ಅತಿ ದೊಡ್ಡ ವಹಿವಾಟು ಎಂದು ವ್ಯಾಪಾರಿ ಒಕ್ಕೂಟ ಅಂದಾಜಿಸಿದೆ.
ಜಿಎಸ್‌ಟಿ ದರ ಇಳಿಕೆ
ಆಶ್ವಯುಜ ಮಾಸದ 13ನೇ ದಿನವನ್ನು ‘ಧನತ್ರಯೋದಶಿ’ ಎಂದು ಆಚರಿಸಲಾಗುತ್ತಿದೆ. ಈ ದಿನ ಆಭರಣ, ವಾಹನ ಇನ್ನಿತರ ವಸ್ತುಗಳನ್ನು ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಇದರ ಜೊತೆಗೆ ಈ ವರ್ಷ ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ಮಾಡಿದ್ದರಿಂದ ವಸ್ತುಗಳ ಬೆಲೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭರ್ಜರಿ ಖರೀದಿ ನಡೆಯುತ್ತಿದೆ.
60,000 ಕೋಟಿ
60,000 ಕೋಟಿ ರು.ಗೂ ಅಧಿಕ ಮೊತ್ತದ ಚಿನ್ನ ಮತ್ತು ಬೆಳ್ಳಿ ಮಾರಾಟವಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ 10,000 ಕೋಟಿ ರು.ಗಳ ಸ್ಥಳೀಯ ಉತ್ಪನ್ನಗಳು ಬಿಕರಿಯಾಗಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.25 ಹೆಚ್ಚು. ಇನ್ನು 15,000 ಕೋಟಿ ರು.ಗಳ ಅಡುಗೆ ಪಾತ್ರೆ ಮತ್ತು ಉಪಕರಣಗಳು, 10,000 ಕೋಟಿ ರು.ಗಳ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳು, 3,000 ಕೋಟಿ ರು.ಗಳ ಆಲಂಕಾರಿಕ ಮತ್ತು ಪೂಜಾ ಉತ್ಪನ್ನಗಳು, 12,000 ಕೋಟಿ ರು.ಗಳ ಒಣಹಣ್ಣು, ಸಿಹಿತಿಂಡಿ ಮತ್ತು ವಾಹನಗಳು ಮಾರಾಟವಾಗಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಪ್ರವೀಣ್ ಖಂಡೇಲ್ವಾಲ್ ಮಾಹಿತಿ ನೀಡಿದ್ದಾರೆ.
ಧನತ್ರಯೋದಶಿ: 2 ದಿನದಲ್ಲಿ 75000 ಕಾರುಗಳ ಮಾರಾಟ
ಧನ ತ್ರಯೋದಶಿ ಅಂಗವಾಗಿ ದೇಶದಲ್ಲಿ ಭರ್ಜರಿ ಕಾರು ಮಾರಾಟ ಆರಂಭವಾಗಿದ್ದು ಅ.18 ಮತ್ತು 19ರಂದು ಒಟ್ಟಾರೆ 50000 ಕಾರು ಮಾರಾಟವಾಗುವ ನಿರೀಕ್ಷೆ ಇದೆ.ಮಾರುತಿ ಸುಜುಕಿ ಶನಿವಾರ 40000ಕ್ಕೂ ಹೆಚ್ಚು ಕಾರು ವಿತರಿಸಿದೆ. ಭಾನುವಾರ ಇನ್ನೂ 10000ಕ್ಕೂ ಅಧಿಕ ಕಾರು ವಿತರಣೆ ಗುರಿ ಹಾಕಿಕೊಂಡಿದೆ. ಇನ್ನು ಹುಂಡೈ ಎರಡು ದಿನದಲ್ಲಿ 15000ಕ್ಕೂ ಹೆಚ್ಚು ಕಾರು ವಿತರಣೆ ಗುರಿ ಹೊಂದಿದೆ. ಇನ್ನು ಉಳಿದ ಕಂಪನಿಗಳ ಕಾರಿನ ವಿತರಣೆಯನ್ನ ಸೇರಿದರೆ ಅದು 75000 ದಾಟುವ ಸಾಧ್ಯತೆ ನಿಚ್ಚಳವಾಗಿದೆ.
ಜೈನ ಸಮುದಾಯದಿಂದ ಒಮ್ಮಗೆ ₹149 ಕೋಟಿನ 186 ಲಕ್ಷುರಿ ಕಾರು ಖರೀದಿ
ದಾಖಲೆಗಳನ್ನು ಹೀಗೂ ಬರೆಯಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಗುಜರಾತಿನಲ್ಲಿ ಜೈನ ಸಮುದಾಯದವರೆಲ್ಲ ಒಟ್ಟು ಸೇರಿ ಒಂದೇ ದಿನ ಬರೋಬ್ಬರಿ 149 ಕೋಟಿ ರು.ಗೆ 186 ಲಕ್ಷುರಿ ಕಾರು ಖರೀದಿಸಿದ್ದಾರೆ. ಮಾತ್ರವಲ್ಲದೇ ಅದರಿಂದಲೇ 21 ಕೋಟಿ ರು. ರಿಯಾಯಿತಿ ಕೂಡ ಪಡೆದಿದ್ದಾರೆ. ಜೈನ ಸಮುದಾಯದವರಿಗಾಗಿ ಸ್ಥಾಪನೆಗೊಂಡಿರುವ ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ( ಜೆಐಟಿಒ)ನ ಸದಸ್ಯರು 149 ಕೋಟಿ ರು. ಕೊಟ್ಟು 186 ಅತ್ಯಾಧುನಿಕ ಕಾರುಗಳನ್ನು ಖರೀದಿಸಿದ್ದಾರೆ.
21.22 ಕೋಟಿ ರು. ರಿಯಾಯ್ತಿ
ಈ ಕಾರುಗಳು ದುಬಾರಿ ಬೆಲೆಯದ್ದಾಗಿದ್ದು 60 ಲಕ್ಷ ರು.ನಿಂದ 1.34 ಕೋಟಿ ರು. ಮೌಲ್ಯವುಳ್ಳದಾಗಿದೆ. ಆದರೆ ಒಂದೇ ಬ್ರೋಕರ್ ಬಳಿ ಕಾರುಗಳನ್ನು ಬುಕ್ಕಿಂಗ್ ಮಾಡಿದ್ದರಿಂದ 21.22 ಕೋಟಿ ರು. ರಿಯಾಯ್ತಿ ದೊರೆತಿದೆ. ದೇಶಾದ್ಯಂತ 65 ಸಾವಿರ ಸದಸ್ಯರನ್ನು ಹೊಂದಿರುವ ಈ ಸಂಸ್ಥೆ ಮರ್ಸಿಡಿಸ್, ಬಿಎಂಡಬ್ಲ್ಯೂ ಸೇರಿ 15 ಪ್ರಮುಖ ಕಂಪನಿಗಳ ಜತೆ ಮಾತುಕತೆ ನಡೆಸಿ ಡೀಲ್ ಕುದುರಿಸಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

