- Home
- Entertainment
- Cine World
- ಅಮ್ಮನ ನೆನಪಲ್ಲಿ ನಯನತಾರಾ ಎದುರು ಪವರ್‌ಪುಲ್ ವಿಲನ್ ಆಗಿ ನಟಿಸುತ್ತಿದ್ದೇನೆ: ದುನಿಯಾ ವಿಜಯ್
ಅಮ್ಮನ ನೆನಪಲ್ಲಿ ನಯನತಾರಾ ಎದುರು ಪವರ್‌ಪುಲ್ ವಿಲನ್ ಆಗಿ ನಟಿಸುತ್ತಿದ್ದೇನೆ: ದುನಿಯಾ ವಿಜಯ್
ದುನಿಯಾ ವಿಜಯ್ ಮೊದಲ ಬಾರಿ ಮೂಕುತಿ ಅಮ್ಮನ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ, ಬದುಕಿನ ಬಗ್ಗೆ ನಟನ ಮಾತು.

25 ವರ್ಷಗಳ ಹಿಂದೆ ತಮಿಳು ಚಿತ್ರರಂಗದಲ್ಲಿ ಅವಕಾಶ ಅರಸಿ ಚೆನ್ನೈಗೆ ಬಂದಿದ್ದೆ. ಆಗ ಬಹಳ ಸ್ಟ್ರಗಲ್ ಇತ್ತು. ಎಷ್ಟು ಅಲೆದಾಡಿದರೂ ಅವಕಾಶ ಸಿಗಲಿಲ್ಲ. ಹೊಟ್ಟೆಪಾಡಿಗೆ ಇಲ್ಲಿನ ಹೋಟೆಲಲ್ಲಿ ಸಪ್ಲೈಯರ್, ಕ್ಲೀನರ್ ಆಗಿ ಕೆಲಸ ಮಾಡಿದೆ. ಕೊನೆಗೂ ಇಲ್ಲಿ ನಟನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗದೇ ವಾಪಾಸ್ ಹೋದೆ.
ಈಗ 25 ವರ್ಷಗಳ ನಂತರ ಬಹುಶಃ ಆ ದೇವಿಯೇ ಕರೆಸಿಕೊಂಡು ದೊಡ್ಡ ಸ್ಥಾನ ಕೊಟ್ಟಿದ್ದಾರೆ ಅನಿಸುತ್ತೆ. ದೇವರು ಏನು ಕೊಡ್ತಾನೋ ಅದನ್ನೇ ಊಟ ಮಾಡಬೇಕಂತೆ. ದೇವಿ ಅಂದಾಗ ನಾನೊಂದು ಮಾತು ಹೇಳಬೇಕು, ಈ ಸಿನಿಮಾದಲ್ಲಿರುವ ‘ಮೂಗುತಿ ಅಮ್ಮನ್’ ಅಂದರೆ ಕನ್ಯಾಕುಮಾರಿ ದೇವಿ. ಆಕೆಯ ಮೂಗುತಿ ಎಷ್ಟು ಪ್ರಕಾಶಮಾನ ಎಂದರೆ ಹಿಂದೆ ಸಮುದ್ರ ಯಾನ ಮಾಡುವವರಿಗೆ ದಾರಿ ತೋರಿಸುತ್ತಿತ್ತಂತೆ. ಬಹಳ ವರ್ಷಗಳ ಹಿಂದೆ ನನ್ನ ಅಮ್ಮನನ್ನು ಕನ್ಯಾಕುಮಾರಿ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದೆ.
ಅಮ್ಮ ಬಹಳ ಸಂಭ್ರಮಿಸಿದ್ದರು. ಆ ದೇವಿಯ ಮೂಗುತಿಯನ್ನು ನನಗೆ ಮತ್ತೆ ಮತ್ತೆ ತೋರಿಸಿ, ಎಷ್ಟು ಹೊಳೆಯುತ್ತಿದೆ ನೋಡು ಎಂದು ಕಣ್ಣರಳಿದ್ದರು. ನನ್ನ ಪಾಲಿನ ದೇವತೆಯಂತಿದ್ದ ಆ ನನ್ನ ತಾಯಿ ಆ ಹೊತ್ತಿಗೆ ದೇವಿಯ ಬಳಿ ಏನು ಬೇಡಿಕೊಂಡರೋ ಗೊತ್ತಿಲ್ಲ. ಬಹುಶಃ ಈ ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ನನ್ನ ಅಮ್ಮನ ಆ ಕೋರಿಕೆಯನ್ನು ಆಕೆ ಗತಿಸಿದ ಬಳಿಕ ಈಡೇರಿಸಿದ್ದಾಳೆ ಅನಿಸುತ್ತದೆ.
‘ಮೂಗುತಿ ಅಮ್ಮನ್’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನ ದೊಡ್ಡ ಬಜೆಟ್ ಚಿತ್ರ. ಇದರಲ್ಲಿ ನಯನತಾರಾ ಜೊತೆಗೆ ನಟಿಸುತ್ತಿದ್ದೇನೆ. ಲೇಡಿ ಸೂಪರ್‌ಸ್ಟಾರ್ ಒಬ್ಬರ ಮೇಲೆ ಇಷ್ಟೊಂದು ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸುತ್ತಿರುವುದು, ಆಕೆ ತನ್ನ ಹೆಗಲ ಮೇಲೆ ಇಡೀ ಸಿನಿಮಾವನ್ನು ತೆಗೆದುಕೊಂಡು ಹೋಗುವುದು ಥ್ರಿಲ್ಲಿಂಗ್ ಅನಿಸುತ್ತೆ. ನಯನತಾರಾ ನೋಡಿದರೆ ನಟಿಯೊಬ್ಬಳ ವೃತ್ತಿಪರತೆ ಆಕೆಯನ್ನು ಯಾವ ಎತ್ತರಕ್ಕೂ ಕರೆದೊಯ್ಯಬಲ್ಲದು ಎಂದು ಹೆಮ್ಮೆ ಅನಿಸುತ್ತೆ. ಇದರಲ್ಲಿ ಸಿ. ಸುಂದರ್ ಅವರ ಪಾತ್ರವೂ ದೊಡ್ಡದು.
ನನ್ನ ನಟನೆಯ ‘ಸಿಟಿ ಲೈಟ್ಸ್’ ಸಿನಿಮಾ ಜೊತೆಗೇ ‘ಮೂಗುತಿ ಅಮ್ಮನ್ 2’ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತೇನೆ. ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ. ಪಾತ್ರದ ಬಗ್ಗೆ ವಿವರವನ್ನು ಈಗಲೇ ಬಿಟ್ಟುಕೊಡುವಂತಿಲ್ಲ. ಒಂದೊಳ್ಳೆ ಪಾತ್ರ ಅನ್ನಬಹುದಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.