- Home
- Entertainment
- Cine World
- ಅಭಿಮಾನಿಗಳ ಹಣ ದೋಚಿದ್ರಾ ಪವನ್ ಕಲ್ಯಾಣ್? ಹರಿಹರ ವೀರಮಲ್ಲು ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಅಭಿಮಾನಿಗಳ ಹಣ ದೋಚಿದ್ರಾ ಪವನ್ ಕಲ್ಯಾಣ್? ಹರಿಹರ ವೀರಮಲ್ಲು ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಪವನ್ ಕಲ್ಯಾಣ್ ನಟಿಸಿರುವ 'ಹರಿ ಹರ ವೀರಮಲ್ಲು' ಚಿತ್ರದ ಬಗ್ಗೆ ನಟ ಪ್ರಕಾಶ್ ರಾಜ್ ಖಾರವಾಗಿ ಟೀಕಿಸಿದ್ದಾರೆ. ಅಭಿಮಾನದ ಹೆಸರಿನಲ್ಲಿ ಅಭಿಮಾನಿಗಳನ್ನ ದೋಚಿದ್ದಾರೆ ಅಂತ ಗರಂ ಆಗಿದ್ದಾರೆ.

ಪವನ್ ಕಲ್ಯಾಣ್ ನಟಿಸಿರುವ 'ಹರಿ ಹರ ವೀರಮಲ್ಲು' ಚಿತ್ರ ಇತ್ತೀಚೆಗೆ ತೆರೆಗೆ ಬಂದಿತ್ತು. ಈ ಚಿತ್ರಕ್ಕೆ ಆರಂಭದಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ವಾರಾಂತ್ಯದಲ್ಲಿ ಗಳಿಕೆ ಚೆನ್ನಾಗಿಯೇ ಇತ್ತು. ಸುಮಾರು ರೂ.110 ಕೋಟಿ ಗಳಿಕೆ ಕಂಡಿತ್ತು ಎನ್ನಲಾಗಿದೆ. ಆದರೆ ವಾರದ ದಿನಗಳಲ್ಲಿ ಚಿತ್ರದ ಗಳಿಕೆ ತೀವ್ರವಾಗಿ ಕುಸಿತ ಕಂಡಿತು. ಬಹುತೇಕ ಡಿಸಾಸ್ಟರ್‌ಗೆ ಹೋಗುವ ಹಂತ ತಲುಪಿತ್ತು. ಈಗ 'ಕಿಂಗ್‌ಡಮ್' ಚಿತ್ರ ಬಂದಿರುವುದರಿಂದ ಆ ಚಿತ್ರಕ್ಕೆ ಥಿಯೇಟರ್‌ಗಳನ್ನ ಬಿಟ್ಟುಕೊಡಬೇಕಾಯಿತು. ಈ ನಡುವೆ ಈ ಚಿತ್ರದ ಬಗ್ಗೆ ನಟ ಪ್ರಕಾಶ್ ರಾಜ್ ಖಾರವಾಗಿ ಟೀಕಿಸಿದ್ದಾರೆ. ಪವನ್ ಕಲ್ಯಾಣ್ ಮೇಲೆ ಗರಂ ಆಗಿದ್ದಾರೆ. ಅಭಿಮಾನದ ಹೆಸರಿನಲ್ಲಿ ದೋಚುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.
ಪ್ರಕಾಶ್ ರಾಜ್ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಮಾತುಗಳನ್ನಾಡಿದ್ದಾರೆ. 'ಹರಿ ಹರ ವೀರಮಲ್ಲು' ಚಿತ್ರದ ವಿಚಾರದಲ್ಲಿ ಅಭಿಮಾನಿಗಳನ್ನ ಅಧಿಕ ಟಿಕೆಟ್ ದರದಿಂದ ದೋಚಿದ್ದಾರೆ, ಕಂಟೆಂಟ್ ವಿಚಾರದಲ್ಲಿ ಮೋಸ ಮಾಡಿದ್ದಾರೆ ಅಂತ ಹೇಳಿದ್ದಾರೆ. ಚಿತ್ರಗಳಲ್ಲಿ ನಿಮ್ಮ ರಾಜಕೀಯ ಏನು ಅಂತ ಪ್ರಶ್ನಿಸಿದ್ದಾರೆ. ಬಲವಂತವಾಗಿ ನಿಮ್ಮ ಪ್ರಚಾರವನ್ನ ತುರುಕಿದರೆ ಜನ ನೋಡಲ್ಲ ಅಂತ ಗಟ್ಟಿಯಾಗಿ ಉತ್ತರ ಕೊಟ್ಟಿದ್ದಾರೆ ಅಂತ ತಿಳಿಸಿದ್ದಾರೆ ಪ್ರಕಾಶ್ ರಾಜ್. ಅವರು ಏನು ಹೇಳಿದ್ದಾರೆ ಅನ್ನೋದನ್ನ ಅವರ ಮಾತಿನಲ್ಲೇ ತಿಳಿದುಕೊಳ್ಳೋಣ.
'ಚಿತ್ರರಂಗಕ್ಕೂ, ಪ್ರೇಕ್ಷಕರಿಗೂ ಒಂದು ಬಾಂಧವ್ಯ ಇರುತ್ತೆ. ಅದು ಕಥೆಗಳ ವಿಚಾರದಲ್ಲಿ ಆಗಿರಬಹುದು, ನಟನೆಯ ವಿಚಾರದಲ್ಲೂ ಆಗಿರಬಹುದು. ಈ ಮಧ್ಯೆ ಬಂದ 'ಹರಿ ಹರ ವೀರಮಲ್ಲು' ಆಗಿರಲಿ, 'ಕಣ್ಣಪ್ಪ' ಆಗಿರಲಿ, 'ಥಗ್ ಲೈಫ್' ಆಗಿರಲಿ, 'ಗೇಮ್ ಚೇಂಜರ್' ಆಗಿರಲಿ, ಪ್ರೀ ರಿಲೀಸ್ ಹೈಪ್‌ಗಳು ಏನು? ಕೆಟ್ಟ ಸಿನಿಮಾ ಮಾಡಿರೋದು ನಿಮಗೆ ಗೊತ್ತಿಲ್ವಾ. ಯಾರಿಗೆ ಮಾರುತ್ತಿದ್ದೀರಿ. ನೀವು ಮಾಡ್ತಿರೋದು ನಂಬಿಕೆ ದ್ರೋಹ ಅಲ್ವಾ? 'ಬಾಹುಬಲಿ' ತರಹದ ಚಿತ್ರವನ್ನ ರಾಜಮೌಳಿ ಮಾಡಿದ್ರೆ ಅದು ಹೇಗೆ ಓಡಿತು. ದೊಡ್ಡ ಬಜೆಟ್ ಚಿತ್ರಗಳಿಗೆ ಅದೊಂದು ಟ್ರೆಂಡ್ ಸೆಟ್ಟಿಂಗ್ ಚಿತ್ರ. ಆದರೆ ಅದೇ ನಾವು ಮಾಡ್ತಿದ್ದೀವಿ ಅಂತ ಹೇಳಿ, ಯಾವ ತರಹದ ಸಿನಿಮಾಗಳನ್ನ ಕೊಡ್ತಿದ್ದೀರಿ. ಕೊಟ್ಟು ಯಾವ ತರಹದ ದ್ರೋಹ ಮಾಡ್ತಿದ್ದೀರಿ. ಯಾರನ್ನ ದೋಚುತ್ತಿದ್ದೀರಿ. ನಿಮ್ಮ ಅಭಿಮಾನಿಗಳನ್ನೇ ಅಲ್ವಾ' ಅಂತ ಪ್ರಶ್ನಿಸಿದ್ದಾರೆ ಪ್ರಕಾಶ್ ರಾಜ್.
ಅವರು ಮುಂದುವರೆದು, 'ದೊಡ್ಡ ಬಜೆಟ್ ಸಿನಿಮಾ ಅಂತ ಹೇಳ್ತಿದ್ದೀರಿ. ಆ ರೇಂಜ್‌ನಲ್ಲಿ ಕಥೆ ಇದೆಯಾ? ವಿಎಫ್‌ಎಕ್ಸ್ ಇದೆಯಾ? ಫೈಟ್ಸ್ ಇದೆಯಾ? ಚಿತ್ರಕ್ಕೆ ಐದು ವರ್ಷ (ಹರಿ ಹರ ವೀರಮಲ್ಲು ಚಿತ್ರವನ್ನ ಉದ್ದೇಶಿಸಿ) ಯಾಕೆ ಬೇಕಾಯ್ತು?. ನೀವು ಅಲ್ಲಿ ದ್ರೋಹ ಮಾಡಿ, ಬಡ್ಡಿಗೆ ಬಡ್ಡಿ ಸೇರಿ, ಕಥೆಗಳನ್ನ ಬದಲಾಯಿಸಿ, ರಾಜಕೀಯವಾಗಿ ನೀವು ಒಂದು ಹಂತದಲ್ಲಿದ್ದೀರಿ ಅಂತ, ಅದರಲ್ಲಿ ನಿಮ್ಮ ರಾಜಕೀಯ ಸಿದ್ಧಾಂತಗಳನ್ನ ತುರುಕಿ ಅದನ್ನ ಒಂದು ಚಿತ್ರ ಮಾಡೋಣ ಅಂತ ಬಂದು, ಅದಕ್ಕೆ ನಾವು ಇಷ್ಟು ಕಷ್ಟಪಟ್ಟಿದ್ದೀವಿ ಅಂತ ಹೇಳ್ತಿದ್ದೀರಿ. ಚಿತ್ರದ ಪ್ರಚಾರಕ್ಕೆ ಹತ್ತು ದಿನ ಎಷ್ಟು ಪ್ರಾಮಾಣಿಕವಾಗಿ ಬಂದಿದ್ದೀರೋ, ಹಾಗೆ ಮೊದಲೇ ಶೂಟಿಂಗ್‌ಗೆ ಬಂದಿದ್ರೆ ಎರಡು ವರ್ಷಗಳ ಹಿಂದೆಯೇ ಚಿತ್ರ ರಿಲೀಸ್ ಆಗ್ತಿತ್ತು ಅಲ್ವಾ?' ಅಂತ ಕಿಡಿಕಾರಿದ್ದಾರೆ ಪ್ರಕಾಶ್ ರಾಜ್.
ಈ ಸಂದರ್ಭದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಪ್ರಸ್ತಾಪ ಮಾಡಿ, 'ರಜನೀಕಾಂತ್ 'ಬಾಬಾ' ಚಿತ್ರ ಮಾಡಿದ್ರು. ಅವರೇ ಕಥೆ ಬರೆದು, ನಿರ್ಮಾಣ ಮಾಡಿದ ಚಿತ್ರ ಅದು. ರಿಲೀಸ್ ದಿನ ಚೆನ್ನೈನಲ್ಲಿ ರಸ್ತೆಯಲ್ಲಿ ಹೋಗ್ತಿದ್ದಾಗ ರಸ್ತೆ ಪಕ್ಕದಲ್ಲಿ ಸೈಕಲ್‌ನಲ್ಲಿ ಹೋಗ್ತಿದ್ದ ವ್ಯಕ್ತಿಯೊಬ್ಬ ಅಳ್ತಾ ಕಾಣಿಸಿದ. ಅದಕ್ಕೂ ಮೊದಲು ಆಗಾಗ ಆ ರಸ್ತೆಯಲ್ಲಿ ಕಾಣಿಸ್ತಿದ್ದ. ಹಣ ಕೊಡ್ತಿದ್ದೆ. ಆ ದಿನ ಅಳ್ತಾ ಕಾಣಿಸಿದ. ಕಾರು ನಿಲ್ಲಿಸಿ, ಯಾಕೆ ಅಳ್ತಿದ್ದೀಯ ಅಂತ ಕೇಳಿದ್ರೆ, ಎರಡು ನೂರು ರೂಪಾಯಿ ಟಿಕೆಟ್ ಸರ್, ಬಾಸ್ ಮೋಸ ಮಾಡಿದ್ರು ಅಂದ. ಈಗ ಈ ಚಿತ್ರ ನೋಡಿರೋದು ಬಹಳಷ್ಟು ಮಂದಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳೇ ಅಲ್ವಾ, ಅವರನ್ನ ಮೋಸ ಮಾಡಿದ್ದೀವಿ ಅಂತ ನಿಮಗೆ ಗೊತ್ತಾಗ್ತಿಲ್ವಾ? ಯಾರನ್ನ ದೋಚುತ್ತಿದ್ದೀರಿ, ಏನಿದು ಪ್ರಚಾರದ ಸಿನಿಮಾಗಳ ಗಿಮಿಕ್' ಅಂತ ಕಾಮೆಂಟ್ ಮಾಡಿದ್ದಾರೆ ಪ್ರಕಾಶ್ ರಾಜ್.
ಈ ಸಂದರ್ಭದಲ್ಲಿ ಮಹೇಶ್ ಬಾಬು, ಎನ್‌ಟಿಆರ್ ಪ್ರಸ್ತಾಪ ಮಾಡಿ, 'ಒಂದು ಕಾರ್ಯಕ್ರಮದಲ್ಲಿ ಎನ್‌ಟಿಆರ್, ಮಹೇಶ್ ಬಾಬು ವೇದಿಕೆ ಮೇಲೆ 'ನಾವು ಫ್ರೆಂಡ್ಸ್, ನೀವು ಜಗಳ ಮಾಡ್ಬೇಡಿ' ಅಂದ್ರು. ಆದರೆ ನೀವು ಏನು (ಪವನ್ ಕಲ್ಯಾಣ್) ಹೇಳ್ತಿದ್ದೀರಿ. ತಿರುಗಿ ಹೊಡೆಯಿರಿ ಅಂತಾರಾ? ಅಭಿಮಾನದಿಂದ ಪ್ರೀತಿಸ್ತಿದ್ರೆ ಅವರನ್ನ ನೀವು ಸೈನಿಕರು ಅಂತ ಅಂದುಕೊಂಡಿದ್ದೀರಾ? ಇದು ದೊಡ್ಡ ಅಸಂಬದ್ಧ. ಆದರೆ ಜನ ಮೂರ್ಖರಲ್ಲ. ಪ್ರಧಾನಿ ಮೋದಿ ಬಯೋಪಿಕ್ ಮಾಡಿದ್ರೆ, ಆ ಚಿತ್ರವನ್ನ ನೂರು ಜನ ಕೂಡ ನೋಡಲಿಲ್ಲ. ಈ ಪ್ರಚಾರದ ಸಿನಿಮಾಗಳನ್ನ ಜನ ನೋಡಲ್ಲ. ನಿಮ್ಮ ಅಭಿಮಾನಿಗಳೇ ಉಗುಳ್ತಿದ್ದಾರೆ. ನೀವು ಏನೋ ಪ್ರಯೋಗ ಮಾಡಿದ್ರೆ ಅದು ವಿಫಲವಾದ್ರೆ ಬೇಸರ ಪಡಬಹುದು, ಆದರೆ ಇದು ನಿಮ್ಮ ಸೋಮಾರಿತನದಿಂದ, ಅಹಂಕಾರದಿಂದ ಐದು ವರ್ಷ ಆಗಿದೆ. ಮೊದಲು ಒಬ್ಬ ನಿರ್ದೇಶಕ ಅಂದುಕೊಂಡಿದ್ರಿ. ಆಮೇಲೆ ಇನ್ನೊಬ್ಬ ನಿರ್ದೇಶಕನನ್ನ ಕರ್ಕೊಂಡು ಬಂದ್ರಿ. ಆ ನಿರ್ದೇಶಕ ಅಂದುಕೊಂಡ ಕಥೆಯನ್ನ ಅಂದುಕೊಂಡ ರೀತಿಯಲ್ಲಿ ತೆಗೆಯೋ ಸ್ವಾತಂತ್ರ್ಯ ಕೊಟ್ಟಿದ್ದೀರಾ ನೀವು. ಸಿನಿಮಾ ಬೇರೆ, ರಾಜಕೀಯ ಬೇರೆ. ನೀವು ಪ್ರಸಿದ್ಧಿ ಪಡೆದಿದ್ದೇ ಮನರಂಜನೆಯಿಂದ, ಅಂಥದ್ರಲ್ಲಿ ಇನ್ನೊಂದನ್ನ ಬಲವಂತವಾಗಿ ತುರುಕೋದು ಎಷ್ಟರ ಮಟ್ಟಿಗೆ ಸರಿ. ನಾನು ಹೊರಗೆ ರಾಜಕೀಯ ಮಾತಾಡ್ತೀನಿ. ಆದರೆ ನನ್ನ ಸಿನಿಮಾಗಳಲ್ಲಿ ರಾಜಕೀಯ ಮಾತಾಡಲ್ಲ, ಅದು ಬೇರೆ ಆಟ. ಎರಡನ್ನೂ ಸೇರಿಸಲ್ಲ. ಇಂಥವರಿಗೆ ಜನ ಉತ್ತರ ಕೊಡ್ತಾರೆ. ಆದರೆ ಪ್ರಶ್ನಿಸುವ ಧ್ವನಿಗಳು ಇರಬೇಕು' ಅಂತ ಹೇಳಿದ್ದಾರೆ ಪ್ರಕಾಶ್ ರಾಜ್. ಇನ್ನು ಪ್ರಶ್ನ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯಗಳನ್ನ ತಿಳಿಸಿದ್ದಾರೆ ಪ್ರಕಾಶ್ ರಾಜ್. ಪ್ರಸ್ತುತ ಅವರ ಹೇಳಿಕೆಗಳು ವೈರಲ್ ಆಗುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

