ಏಷ್ಯಾಕಪ್ ಟೂರ್ನಿಗೆ ಭಾರತ ತಂಡ: 3 ದಿಟ್ಟ ತೀರ್ಮಾನಕ್ಕೆ ಕೈಹಾಕಿದ ಬಿಸಿಸಿಐ! ಮೂವರಿಗೆ ನಿರಾಸೆ?
ಬೆಂಗಳೂರು: ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಟೂರ್ನಿಯು ಯುಎಇನ ದುಬೈ ಹಾಗೂ ಅಬುದಾಬಿಯಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತ ತಂಡ ಪ್ರಕಟಣೆಗೂ ಕೌಂಟ್‌ಡೌನ್ ಶುರುವಾಗಿದೆ.

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯು ಮುಂಬರುವ ಸೆಪ್ಟೆಂಬರ್ 09ರಿಂದ ಆರಂಭವಾಗಲಿದೆ. ಭಾರತ ತಂಡವು ಮತ್ತೊಮ್ಮೆ ಏಷ್ಯಾಕಪ್ ಟ್ರೋಫಿ ಉಳಿಸಿಕೊಳ್ಳಲು ಎದುರು ನೋಡುತ್ತಿದೆ.
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಆಗಸ್ಟ್ 19ರಂದು ಮುಂಬೈನಲ್ಲಿ ಸಭೆ ಸೇರಲಿದ್ದು, ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಿದ್ದಾರೆ.
ಕ್ರಿಕ್‌ಬಜ್ ವೆಬ್‌ಸೈಟ್ ವರದಿಯ ಪ್ರಕಾರ, ಬಿಸಿಸಿಐ ಆಯ್ಕೆ ಸಮಿತಿಯು ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಮೂರು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. ಆ 3 ತೀರ್ಮಾನಗಳು ಏನು ಎನ್ನುವುದನ್ನು ನೋಡೋಣ ಬನ್ನಿ
1. ಶುಭ್‌ಮನ್ ಗಿಲ್‌ಗಿಲ್ಲ ಸ್ಥಾನ
ವೆಬ್‌ಸೈಟ್ ವರದಿಯ ಪ್ರಕಾರ, ಬಿಸಿಸಿಐ ಆಯ್ಕೆ ಸಮಿತಿಯು ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅವರನ್ನೇ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದ ಆರಂಭಿಕರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಇದರ ಜತೆಗೆ ನಂ.3 ಆಟಗಾರನಾಗಿ ಎಡಗೈ ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ಮಣೆಹಾಕಲು ಆಯ್ಕೆ ಸಮಿತಿ ತೀರ್ಮಾನಿಸಿದೆ ಎನ್ನಲಾಗಿದೆ. ಹೀಗಾಗಿ ಶುಭ್‌ಮನ್ ಗಿಲ್ ಅವರನ್ನು ಕೈಬಿಡಲು ಆಯ್ಕೆ ಸಮಿತಿ ಆಲೋಚಿಸಿದೆ ಎಂದು ವರದಿಯಾಗಿದೆ. ಈ ಮೊದಲು ಗಿಲ್‌ಗೆ ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡುವುದರ ಜತೆಗೆ ಉಪನಾಯಕ ಪಟ್ಟ ಕಟ್ಟಲು ಚಿಂತನೆ ನಡೆಯುತ್ತಿದೆ ಎಂದು ವರದಿಯಾಗಿತ್ತು.
2. ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ:
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ 23 ವಿಕೆಟ್ ಕಬಳಿಸುವ ಮೂಲಕ ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದ ಸಿರಾಜ್‌ಗೆ ಏಷ್ಯಾಕಪ್ ಟೂರ್ನಿಯಿಂದ ರೆಸ್ಟ್ ನೀಡಲು ಆಯ್ಕೆ ಸಮಿತಿ ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಏಷ್ಯಾಕಪ್ ಟೂರ್ನಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಹೈದರಾಬಾದ್ ಮೂಲದ ವೇಗಿ ಸಿರಾಜ್‌ಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ತೀರ್ಮಾನಿಸಿದೆ ಎಂದು ವರದಿಯಾಗಿದೆ.
3. ಶ್ರೇಯಸ್ ಅಯ್ಯರ್‌ಗೂ ಸಿಗಲ್ಲ ಚಾನ್ಸ್!
ಐಪಿಎಲ್‌ನಲ್ಲಿ ನಾಯಕನಾಗಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಭರವಸೆ ಮೂಡಿಸಿದ್ದ ಶ್ರೇಯಸ್ ಅಯ್ಯರ್‌ಗೆ ಮತ್ತೊಮ್ಮೆ ನಿರಾಸೆ ಕಾದಿದೆ ಎನ್ನುವುದು ಬಹುತೇಕ ಖಚಿತವಾಗಿದೆ.
ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್ ಭಾರತ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗದಲ್ಲಿ ಸ್ಥಾನ ಪಡೆಯಲಿದ್ದು, ಮುಂಬೈ ಮೂಲದ ಅಯ್ಯರ್‌ಗೆ ಟಿ20 ತಂಡದಲ್ಲಿ ಸ್ಥಾನ ಸಿಗಲು ಮತ್ತಷ್ಟು ಸಮಯಕಾಯಬೇಕಾಗಿ ಬರಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

