ರೋಹಿತ್ ಶರ್ಮಾ, ಸೌರವ್ ಗಂಗೂಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!
ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಇನ್ನು ಇದೇ ವೇಳೆ ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ಸೌರವ್ ಗಂಗೂಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡನೇ ಟೆಸ್ಟ್‌ನಲ್ಲೂ ಮುಂದುವರೆದ ಭಾರತದ ಪ್ರಾಬಲ್ಯ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೊದಲ ಟೆಸ್ಟ್ ಗೆದ್ದು ಬೀಗಿರುವ ಆತಿಥೇಯ ಟೀಂ ಇಂಡಿಯಾ, ಇದೀಗ ಎರಡನೇ ಟೆಸ್ಟ್‌ನಲ್ಲೂ ತಮ್ಮ ಪ್ರಾಬಲ್ಯ ಮುಂದುವರೆಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿರುವ ಭಾರತ
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭ್‌ಮನ್ ಗಿಲ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 518 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
378 ರನ್ ಹಿನ್ನಡೆಯಲ್ಲಿದೆ ವೆಸ್ಟ್ ಇಂಡೀಸ್
ಇನ್ನು ಬೃಹತ್ ಗುರಿ ಬೆನ್ನತ್ತಿರುವ ವೆಸ್ಟ್ ಇಂಡೀಸ್ ತಂಡವು ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿ ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 140 ರನ್ ಬಾರಿಸಿದ್ದು, ಇನ್ನೂ 378 ರನ್‌ಗಳ ಹಿನ್ನಡೆಯಲ್ಲಿದೆ.
ರೆಡ್ ಹಾಟ್ ಫಾರ್ಮ್‌ನಲ್ಲಿರುವ ಗಿಲ್
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ನಾಯಕರಾಗಿ ನೇಮಕಗೊಂಡ ಬಳಿಕ ರೆಡ್ ಹಾಟ್ ಫಾರ್ಮ್‌ನಲ್ಲಿರುವ ಶುಭ್‌ಮನ್ ಗಿಲ್, ನಾಯಕನಾದ ಬಳಿಕ 5ನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ನಾಯಕರಾದ ಬಳಿಕ ಅತಿವೇಗವಾಗಿ 1000 ಟೆಸ್ಟ್ ರನ್
ಇದರ ಜತೆಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಯಕರಾದ ಬಳಿಕ ಅತಿವೇಗವಾಗಿ 1000 ಟೆಸ್ಟ್ ರನ್ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ಶುಭ್‌ಮನ್ ಗಿಲ್ ಪಾತ್ರರಾಗಿದ್ದಾರೆ.
ನಾಯಕರಾಗಿ ದಾಖಲೆ ಬರೆದಿದ್ದ ದಾದಾ-ಹಿಟ್‌ಮ್ಯಾನ್
ಈ ಮೊದಲು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನಾಯಕರಾಗಿ 20 ಇನ್ನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಪೂರೈಸಿದ್ದರು. ಇನ್ನು ಸೌರವ್ ಗಂಗೂಲಿ 22 ಇನ್ನಿಂಗ್ಸ್‌ಗಳನ್ನಾಡಿ ಒಂದು ಸಾವಿರ ಟೆಸ್ಟ್ ರನ್ ಬಾರಿಸಿದ್ದರು.
ಗಂಗೂಲಿ-ರೋಹಿತ್ ದಾಖಲೆ ಬ್ರೇಕ್
ಆದರೆ ಇದೀಗ ಶುಭ್‌ಮನ್ ಗಿಲ್ ಕೇವಲ 17 ಇನ್ನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಪೂರೈಸುವ ಮೂಲಕ ರೋಹಿತ್ ಹಾಗೂ ಗಂಗೂಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

