ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ದಿಢೀರ್ ನಿವೃತ್ತಿ! ಭಾವುಕರಾದ ಕಿಂಗ್ ಕೊಹ್ಲಿ
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಭಾವುಕ ಪೋಸ್ಟ್ ಹಾಕಿದ್ದಾರೆ.

ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ
ಭಾರತೀಯ ಕ್ರಿಕೆಟ್ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. “ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ನೀಲಿ ಜೆರ್ಸಿ ಹಾಕಿ 14 ವರ್ಷಗಳಾಗಿವೆ. ಈ ಪಯಣ ಹೀಗೆ ಇರುತ್ತೆ ಅಂತ ನಾನು ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿ, ರೂಪಿಸಿ, ಜೀವನ ಪಾಠ ಕಲಿಸಿದೆ... ನನ್ನ ಟೆಸ್ಟ್ ಜೀವನವನ್ನು ನೆನೆಸಿಕೊಂಡಾಗ ನಗು ಮೂಡುತ್ತದೆ” ಎಂದು ಕೊಹ್ಲಿ ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ವೃತ್ತಿಜೀವನ ಅದ್ಭುತವಾಗಿದೆ. ಅವರು 123 ಪಂದ್ಯಗಳ 210 ಇನ್ನಿಂಗ್ಸ್‌ಗಳಲ್ಲಿ 46.85 ಸರಾಸರಿಯಲ್ಲಿ 9230 ರನ್ ಗಳಿಸಿದ್ದಾರೆ. ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 254*. ಈ ಮಾದರಿಯಲ್ಲಿ ಅವರ ಬ್ಯಾಟ್‌ನಿಂದ 30 ಶತಕ ಮತ್ತು 31 ಅರ್ಧಶತಕಗಳು ಬಂದಿವೆ.
ಕೊಹ್ಲಿ ರೆಡ್ ಬಾಲ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳ ಸಮೀಪದಲ್ಲಿದ್ದರು, ಇದನ್ನು ಇಂಗ್ಲೆಂಡ್ ವಿರುದ್ಧ ಪೂರ್ಣಗೊಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಈ ಮೈಲಿಗಲ್ಲನ್ನು ತಲುಪಲು ಅವರಿಗೆ ಇಂಗ್ಲೆಂಡ್ ವಿರುದ್ಧ 10 ಇನ್ನಿಂಗ್ಸ್ ಸಿಗುತ್ತಿತ್ತು, ಇದಕ್ಕಾಗಿ ಅವರು 770 ರನ್ ಗಳಿಸಬೇಕಿತ್ತು.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯದಲ್ಲೇ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಕೆಲದಿನಗಳ ಹಿಂದಷ್ಟೇ ನಾಯಕ ರೋಹಿತ್ ಶರ್ಮಾ ಕೂಡಾ ಟೆಸ್ಟ್ ಮಾದರಿಗೆ ವಿದಾಯ ಘೋಷಿಸಿದ್ದರು. ಇದೀಗ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಕೂಡಾ ಟೆಸ್ಟ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.
Virat Kohli
ಭಾರತ ತಂಡ ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಮೊದಲ ಪಂದ್ಯ ಜೂನ್ 20 ರಿಂದ ಆರಂಭವಾಗಲಿದೆ. ವಿರಾಟ್ ಕೊಹ್ಲಿ ತಂಡದೊಂದಿಗೆ ಇರುವುದು ಮುಖ್ಯ. ಹಾಗಾಗಿ ಬಿಸಿಸಿಐ ಕೂಡ ವಿರಾಟ್ ಟೆಸ್ಟ್‌ಗೆ ವಿದಾಯ ಹೇಳದಂತೆ ಪ್ರಯತ್ನಿಸಿತ್ತು. ಆದರೆ ಬಿಸಿಸಿಐ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ.
ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಟೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿದ್ದರು. ಇದಷ್ಟೇ ಅಲ್ಲದೇ, ಭಾರತ ಪರ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕ ಎನ್ನುವ ಹೆಗ್ಗಳಿಕೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

