'ಯಾವ ಸಮಸ್ಯೆಯಿಂದ ದಪ್ಪಗಾದ್ರಿ' ಎಂಬ ಪ್ರಶ್ನೆಗೆ Annayya Serial ಗುಂಡಮ್ಮನ ಉತ್ತರ ಕೇಳಿ....
'ಅಣ್ಣಯ್ಯ' ಸೀರಿಯಲ್‌ನ ಗುಂಡಮ್ಮ ಖ್ಯಾತಿಯ ನಟಿ ಪ್ರತೀಕ್ಷಾ ಶ್ರೀನಾಥ್, ತಮ್ಮ ದೇಹದ ತೂಕದ ಕುರಿತು ಮಾತನಾಡಿದ್ದಾರೆ. ಲೈಫ್‌ಸ್ಟೈಲ್ ಬದಲಾವಣೆ ಮತ್ತು ಕಡಿಮೆ ಮೆಟಬಾಲಿಸಂನಿಂದ ದಪ್ಪ ಆಗಿದ್ದಾಗಿ ಹೇಳಿದ್ದು, ಆರೋಗ್ಯವಾಗಿರುವುದು ಮುಖ್ಯ ಎಂದು ಬಾಡಿ ಶೇಮಿಂಗ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.

ಗುಂಡಮ್ಮನ ರೋಲ್ನಲ್ಲಿ ಅದ್ಭುತ ನಟನೆ
ಗುಂಡಮ್ಮ ಎಂದರೆ ಸಾಕು, ಸೀರಿಯಲ್ ಪ್ರೇಮಿಗಳಿಗೆ ಅಣ್ಣಯ್ಯ ಸೀರಿಯಲ್ ನಟಿ ರಶ್ಮಿ ನೆನಪಾಗ್ತಾಳೆ. ಯಾರೋ ಕಟ್ಟಬೇಕಿದ್ದ ತಾಳಿಯನ್ನು ಇನ್ನಾರದ್ದೋ ಕೈಯಲ್ಲಿ ಕಟ್ಟಿಸಿಕೊಂಡಿದ್ದಾಳೆ ಗುಂಡಮ್ಮ. ಅಣ್ಣ ಶಿವಣ್ಣನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುವ ಗುಂಡುಗೆ ಅಣ್ಣಯ್ಯನೇ ಎಲ್ಲಾ. ಅವನು ಹೇಳಿದ್ದಂತೆಯೇ ಕೇಳುವವಳು ಈಕೆ. ಮದುವೆಯ ದಿನ ವರದಕ್ಷಿಣೆಯ ಹಣ ಕಳುವಾದ ಕಾರಣ, ಮದುವೆ ಅಲ್ಲಿಗೇ ನಿಂತು ಹೋಗುವ ಸಮಯದಲ್ಲಿ, ಜಿಮ್ ಸೀನ ಅವಳಿಗೆ ತಾಳಿ ಕಟ್ಟುವ ಅನಿವಾರ್ಯತೆ ಎದುರಾಗುತ್ತದೆ. ಆದರೆ ಸೀನ ಇದಾಗಲೇ ಒಬ್ಬಳನ್ನು ಪ್ರೀತಿ ಮಾಡ್ತಿರುತ್ತಾನೆ. ಆದರೆ, ಈ ಸನ್ನಿವೇಶದಲ್ಲಿ ಹಣ ಕಳುವಿಗೆ ಅವನೇ ಕಾರಣ ಎನ್ನುವ ಆರೋಪ ಬಂದ ಕಾರಣದಿಂದ ಅನಿವಾರ್ಯವಾಗಿ ಮದುವೆಯಾಗಬೇಕಾಗುತ್ತದೆ.
ಪ್ರತೀಕ್ಷಾ ಶ್ರೀನಾಥ್ ಸ್ಟೋರಿ ಕೇಳಿ
ಇದು ಅಣ್ಣಯ್ಯ ಸೀರಿಯಲ್ ಕಥೆಯಾದರೆ, ಗುಂಡಮ್ಮ ಪಾತ್ರ ಮಾಡ್ತಿರೋರುವ ಗುಂಡುಗುಂಡಗೆ ಇರುವ ನಟಿ ಪ್ರತೀಕ್ಷಾ ಶ್ರೀನಾಥ್ (Pratheeksha Srinath). ಇವರು ದಪ್ಪ ಇದ್ದ ಕಾರಣಕ್ಕೇನೇ ಈ ಸೀರಿಯಲ್ನಲ್ಲಿಯೂ ಗುಂಡಮ್ಮ ಎಂದೇ ಹೆಸರು. ಆದರೆ ನಟನೆ, ಟ್ಯಾಲೆಂಟ್ ಇವೆಲ್ಲವುಗಳಿಗೆ ತೂಕ ಕಾರಣವಾಗಲ್ಲ. ಅಭಿನಯದ ಚತುರತೆ ಇದ್ದರೆ ಆ ತೂಕದಲ್ಲಿಯೇ ನಟನೆಯಲ್ಲಿಯೂ ಸೈ ಎನ್ನಿಸಿಕೊಳ್ಳಬಹುದು ಎನ್ನುವುದನ್ನು ತೋರಿಸುತ್ತಿರುವ ಕೆಲವು ನಟಿಯರ ಪೈಕಿ ಪ್ರತೀಕ್ಷಾ ಕೂಡ ಒಬ್ಬರು.
ಸೌಂದರ್ಯ ಎನ್ನೋದು ತೂಕದಲ್ಲಿಲ್ಲ..
ಸೌಂದರ್ಯ ಎಂದರೆ ತೆಳ್ಳಗೆ, ಬೆಳ್ಳಗೆ ಎನ್ನುವ ಒಂದು ಕಾನ್ಸೆಪ್ಟ್ ಬಹುತೇಕ ಮಂದಿಯ ತಲೆಯಲ್ಲಿ ಬಂದುಬಿಟ್ಟಿದೆ. ಇದೇ ಕಾರಣಕ್ಕೆ ತೆಳ್ಳಗಾಗಲು ಹೋಗಿ ಜೀವ ಕಳೆದುಕೊಂಡವರೂ ಇದ್ದಾರೆ, ತೀರಾ ರೋಗಿಷ್ಟರು ಎನ್ನಿಸುವ ರೀತಿಯಲ್ಲಿ ತೆಳ್ಳಗೆ ಕಾಣಿಸುವವರೂ ಇದ್ದಾರೆ. ಆದರೆ, ಇವೆಲ್ಲವುಗಳ ನಡುವೆಯೂ ಸೌಂದರ್ಯದ ಪರಿಕಲ್ಪನೆಯನ್ನೇ ಬದಲು ಮಾಡುತ್ತಿರುವ ಕೆಲವು ನಟಿಯರೂ ಇದ್ದಾರೆ. ಅಂಥ ನಟಿಯರಲ್ಲಿ ಒಬ್ಬರು ಪ್ರತೀಕ್ಷಾ.
ದಪ್ಪಗಿರೋದು ಸಮಸ್ಯೆ ಅಲ್ಲ
ಈಗ ಎಫ್ಡಿಎಫ್ಎಸ್ ಚಾನೆಲ್ಗೆ ಅವರು ಸಂದರ್ಶನ ನೀಡಿದ್ದಾರೆ. ದಪ್ಪಗಿರೋದನ್ನು ಸಮಸ್ಯೆ ಎನ್ನುವವರಿಗೆ ಅವರು ಉತ್ತರ ಕೊಟ್ಟಿದ್ದಾರೆ. ದಪ್ಪ ಇರೋದು ಏನೂ ಸಮಸ್ಯೆಯಲ್ಲ. ಅದನ್ನು ಸಮಸ್ಯೆ ಎಂದು ನಾನು ಅಂದುಕೊಂಡಿಲ್ಲ. ನನಗೆ ಮೆಟಪಾಲಿಸಮ್ ಕಡಿಮೆ ಇದೆ. ತಿಂದಿದ್ದು ಬೇಗ ಡೈಜೆಸ್ಟ್ ಆಗುವುದಿಲ್ಲ ಎಂದಿದ್ದಾರೆ ನಟಿ. ನೀವು ಯಾಕೆ ಹೈಟ್ ಇದ್ದೀರಾ, ಏಕೆ ಕುಳ್ಳಗೆ ಇದ್ದೀರಾ ಎಂದು ಕೇಳಿದ್ರೆ ಉತ್ತರ ಇರಲ್ಲ ಅಲ್ವಾ? ಯಾಕೆಂದ್ರೆ ಅದು ಸಮಸ್ಯೆ ಅಲ್ಲ, ಅದು ಅವರವರ ಲೈಫ್ ಅಷ್ಟೇ. ಅದೇ ರೀತಿ ದಪ್ಪ ಇರೋದು ಸಮಸ್ಯೆ ಎಂದು ನಾನು ಯಾವತ್ತೂ ಅಂದುಕೊಂಡಿಲ್ಲ ಎಂದಿದ್ದಾರೆ.
ದಪ್ಪಗಾದ ಕಾರಣ ಕೊಟ್ಟ ನಟಿ
ಇದೇ ವೇಳೆ ದಪ್ಪಗಾಗಿರುವ ಕಾರಣವನ್ನೂ ಕೊಟ್ಟಿದ್ದಾರೆ ನಟಿ. ನಾನು ಚಿಕ್ಕ ವಯಸ್ಸಿನಲ್ಲಿ ತುಂಬಾ ತಿನ್ನುತ್ತಾ ಇದ್ದೆ. ಆಗ ಸಿಕ್ಕಾಪಟ್ಟೆ ಆ್ಯಕ್ಟೀವ್ ಇದ್ದೆ. ಸ್ಪೋರ್ಟ್ಸ್, ಡಾನ್ಸ್ ಎಲ್ಲದರಲ್ಲಿಯೂ ಸಿಕ್ಕಾಪಟ್ಟೆ ಮುಂದೆ ಇದ್ದೆ. ಆದರೆ ಪಿಯುಸಿಯಲ್ಲಿ ಸಡನ್ ಅವುಗಳನ್ನು ಸ್ಟಾಪ್ ಮಾಡಿಬಿಟ್ಟೆ. ಅಲ್ಲಿಂದ ಸ್ವಲ್ಪ ಸಮಸ್ಯೆ ಆಯಿತು. ಲೈಫ್‌ಸ್ಟೈಲ್ ಚೇಂಜ್ ಆಗತೊಡಗಿತು. ಟ್ರ್ಯಾಕ್ ತಪ್ಪಿತು ಎಂದೂ ನಟಿ ಹೇಳಿದ್ದಾರೆ.
ಲೈಫ್‌ಸ್ಟೈಲ್ ಚೇಂಜ್
ನಾನು ಆಗೆಲ್ಲಾ ತುಂಬಾ ಎಮೋಷನಲ್ ಪರ್ಸನ್ ಆಗಿದ್ದೆ. ಅದನ್ನು ಹ್ಯಾಂಡಲ್ ಮಾಡಲು ಗೊತ್ತಿರಲಿಲ್ಲ. ಈಗ ನಾಲ್ಕೈದು ವರ್ಷಗಳಿಂದ ಕಲಿತಿದ್ದೇನೆ ಅಷ್ಟೇ. ಎಮೋಷನ್ ಆದಾಗಲೆಲ್ಲಾ ತುಂಬಾ ತಿನ್ನುತ್ತಿದ್ದೆ. ಹೀಗೆ ಲೈಫ್‌ಸ್ಟೈಲ್ ಏರುಪೇರಾಯಿತು. ಅದನ್ನು ಹೇಗೆ ಹ್ಯಾಂಡಲ್ ಮಾಡೋದು ಗೊತ್ತಾಗಲಿಲ್ಲ. ಈಗ ಸಡನ್ ಆಗಿ ಅದನ್ನೆಲ್ಲಾ ಚೇಂಜ್ ಮಾಡುವುದು ಕಷ್ಟವಾಗಿದೆ. ಆದರೆ ಮಾಡುತ್ತಾ ಇದ್ದೇನೆ. ಆ್ಯಕ್ಟೀವ್ ಆಗಿದ್ದೇನೆ. ಆದ್ದರಿಂದ ದಪ್ಪ ಎನ್ನೋದನ್ನು ಸಮಸ್ಯೆ ಎಂದುಕೊಂಡಿಲ್ಲ ಎಂದಿದ್ದಾರೆ.
ಪ್ರತೀಕ್ಷಾ ತಿರುಗೇಟು
ಈ ಹಿಂದೆ ಪ್ರತೀಕ್ಷಾ ಅವರು, ತಮ್ಮ ಅಜ್ಜಿ ಮೊದಲಿನಿಂದಲೂ ನನಗೆ ಆಟವಾಡಲು, ಸೈಕ್ಲಿಂಗ್ಗೆ ಒತ್ತಾಯ ಮಾಡುತ್ತಿದ್ದರು. ಅಂದ ಮಾತ್ರಕ್ಕೆ ನಾನು ಸಣ್ಣ ಆಗಲಿ ಎಂದೇನಲ್ಲ. ಆದರೆ ಆರೋಗ್ಯವಂತೆ ಆಗಿರಬೇಕು, ಹಾಸಿಗೆ ಹಿಡಿಯಬಾರದು ಎನ್ನುವ ಕಾರಣಕ್ಕೆ. ಅದನ್ನೇ ನಾನು ಈಗ ಹೇಳುವುದು. ದಪ್ಪ ದಪ್ಪ ಎಂದಲ್ಲ, ದಪ್ಪ ಇದ್ದು ಎಷ್ಟು ಫಿಟ್ ಆಗಿದ್ದೇವೆ ಎನ್ನುವುದು ಮುಖ್ಯ. ಸಣ್ಣಗೆ ಇದ್ದು ಅನಾರೋಗ್ಯ ಪೀಡಿತರಾಗುವುದಕ್ಕಿಂತಲೂ ದಪ್ಪ ಇದು ಆರೋಗ್ಯವಂತರಾಗಿರುವುದು ಮುಖ್ಯವಾಗುತ್ತದೆ. ಈಗ ನನ್ನ ಬಾಡಿ ಶೇಮಿಂಗ್ ಮಾಡಲು ಬರುವವರಿಗೆ ಹೇಗೆ ಉತ್ತರಿಸಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ ಎನ್ನುತ್ತಲೇ ಕೇವಲ ದೇಹದ ತೂಕದ ಮೇಲೆ ಸೌಂದರ್ಯವನ್ನು ಅಳೆಯುವವರಿಗೆ ತಿರುಗೇಟು ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

